ಶಿರ್ವ: ಅಂತಾರಾಷ್ಟ್ರೀಯ ಯೋಗಗುರು ಬಾಬಾ ರಾಮ್‌ದೇವ್ ಉಡುಪಿಯಲ್ಲಿ ನಡೆದ 51ನೇ ಅಖಿಲ ಭಾರತೀಯ ಪ್ರಾಚ್ಯ ವಿದ್ಯಾಸಮ್ಮೇಳನದಲ್ಲಿ ಭಾಗವಹಿಲು ಉಡುಪಿಗೆ ಬರುವ ವೇಳೆ ಕೆಲಕಾಲ ಕಾಪು ಪರಿಸರದಲ್ಲಿ ತಂಗಿದ್ದು, ಕಾಪು ಸಮುದ್ರ ತೀರದ ಬಳಿ ಕರಾವಳಿಯ ಎಳನೀರು ಕುಡಿದು ವಿಶ್ರಮಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಶಿರ್ವ ಪತಂಜಲಿ ಯೋಗ ಕೇಂದ್ರದ ಸಂಚಾಲಕ ಶಿರ್ವ ಅನಂತ್ರಾಯ ಶೆಣೈ ಅವರು ಯೋಗ ಗುರು ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಯೋಗ ಪೀಠದ ಆಚಾರ್ಯ ಬಾಲಕೃಷ್ಣ ಮತ್ತು ಸಹಚರರಿಗೆ ಎಳನೀರು ಕೆತ್ತಿ ಕುಡಿಯಲು ನೀಡಿ, ಕಾಯಿ ಒಡೆದು ಅದರ ಗಂಜಿಯನ್ನು ತಿನ್ನಲು ನೀಡಿದ್ದರು.
ಉಡುಪಿಯ ಶ್ರೀಕೃಷ್ಣನ ಪರಂಪರೆ ಹಾಗೂ ಕಾಪು ಸಮುದ್ರ ತೀರ ನೋಡಿ ಕರಾವಳಿಯ ಎಳನೀರು ಸವಿದು ಸಂತಸ ವ್ಯಕ್ತಪಡಿಸಿದ್ದ ಯೋಗಗುರು ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಅನಂತ್ರಾಯ ಶೆಣೈ ಅವರ ಆತಿಥ್ಯವನ್ನು ಕೊಂಡಾಡಿ ಶೆಣೈ ಅವರಿಗೆ ಪೇಟ ತೊಡಿಸಿ ಸಮ್ಮಾನಿಸಿದ್ದರು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಸತೀಶ್ ಶೆಟ್ಟಿ ಗುರ್ಮೆ,ಪ್ರವೀಣ್ ಶೆಟ್ಟಿ ಕೊಲ್ಲಬೆಟ್ಟು, ಪತಂಜಲಿ ಯೋಗ ಕೇಂದ್ರದ ಪದಾಧಿಕಾರಿಗಳು,ಸದಸ್ಯರು ,ಗಣ್ಯರು ಉಪಸ್ಥಿತರಿದ್ದರು.
ಅನಂತ್ರಾಯ ಶೆಣೈ ಅವರು ಎಳನೀರು ಕೆತ್ತಿ ನೀಡುವ ಹಾಗೂ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಕರಾವಳಿಯ ಆರೋಗ್ಯವರ್ಧಕ ಎಳನೀರು ಕುಡಿಯುವ ಮತ್ತು ಸಂಭಾಷಣೆ ನಡೆಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.