Advertisement

KSRTC: ವಾಯವ್ಯ ಸಾರಿಗೆ ಬಸ್‌ಗಳೂ ಇನ್ನು “ಕೆಂಪು”!

11:08 PM Feb 07, 2024 | Pranav MS |

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಮಾದರಿಯಲ್ಲಿ ಈಗ ವಾಯವ್ಯ ಸಾರಿಗೆ ಸಂಸ್ಥೆಯಲ್ಲೂ ಕೆಂಪು ಬಸ್‌ಗಳ ಕಾರುಬಾರು ಆರಂಭಗೊಂಡಿದೆ. ಇನ್ನು ಮುಂದೆ ನಿಗಮದ ವೇಗದೂತ ಬಸ್‌ಗಳು ಕೆಂಪು-ಬೆಳ್ಳಿ ಬಣ್ಣ ಹೊಂದಲಿದ್ದು, ಈಗಿರುವ ತಿಳಿ ಗಿಣಿಹಸುರು ಬಣ್ಣ ನಿಧಾನಕ್ಕೆ ಮಾಯವಾಗಲಿದೆ.

Advertisement

ಕೆಎಸ್‌ಆರ್‌ಟಿಸಿ 1996 ಕ್ಕಿಂತ ಮೊದಲು ರಾಜ್ಯಕ್ಕೆ ಒಂದೇ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆಗ ಎಲ್ಲೆಡೆ ಕೆಂಪು ಬಸ್‌ಗಳೇ ಸಂಚರಿಸುತ್ತಿದ್ದವು. 1996-97ರಲ್ಲಿ ಕೆಎಸ್‌ಆರ್‌ಟಿಸಿ ವಿಭಜನೆಗೊಂಡು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಸ್ವಿತ್ವಕ್ಕೆ ಬಂದಾಗ ಬಸ್‌ಗಳ ಬಣ್ಣ ಬದಲಾಯಿಸಲಾಗಿತ್ತು. ಕೆಂಪು ಬಣ್ಣದ ಬದಲಾಗಿ ತಿಳಿ ಗಿಣಿಹಸುರು ಬಣ್ಣ, ಮಧ್ಯದಲ್ಲಿ ಹಳದಿ-ಕೆಂಪು ಪಟ್ಟಿ ಹೊಂದಿತ್ತು. ಈಶಾನ್ಯ (ಈಗ ಕಲ್ಯಾಣ) ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕೆಎಸ್‌ಆರ್‌ಟಿಸಿಗೆ ಹೋಲಿಸಿದರೆ ಈ ಸಂಸ್ಥೆಯ ಬಸ್‌ಗಳ ಬಣ್ಣ ವಿಭಿನ್ನವಾಗಿತ್ತು. ದೂರದಿಂದಲೇ ಇದು ವಾಯವ್ಯ ಸಾರಿಗೆ ಬಸ್‌ ಎಂದು ಸುಲಭವಾಗಿ ಗುರುತಿಸಬಹುದಾಗಿತ್ತು. ಇನ್ನು ಮುಂದೆ ಬರುವ ಎಲ್ಲ ಹೊಸ ಬಸ್‌ಗಳು ಕೆಂಪು, ಬೆಳ್ಳಿ ಬಣ್ಣ ಹೊಂದಿರಲಿವೆ.

ಕೆಂಪು ಬಸ್‌ಗಳು ಯಾಕೆ?
ರಾಜ್ಯ ಸರಕಾರ ಈ ವರ್ಷ ಖರೀದಿಸುವ ಸಾವಿರದಷ್ಟು ಹೊಸ ಬಸ್‌ಗಳಲ್ಲಿ ಮೊದಲ ಹಂತದಲ್ಲಿ ವಾಯವ್ಯ ಸಾರಿಗೆ ಸಂಸ್ಥೆಗೆ ಸುಮಾರು 375 ಬಸ್‌ಗಳು ಬರಲಿವೆ. ಅದರಲ್ಲಿ 40 ಬಸ್‌ಗಳನ್ನು ಕೆಲವು ದಿನಗಳ ಹಿಂದೆಯಷ್ಟೇ ನೀಡಲಾಗಿದೆ. ಇನ್ನು 335 ಬಸ್‌ಗಳು ಬರಬೇಕಿದೆ. ಈ ಹೊಸ ಬಸ್‌ಗಳನ್ನು ತಿಳಿ ಗಿಣಿಹಸುರು ಬಣ್ಣದಿಂದ ಕೆಂಪು ಬಣ್ಣಕ್ಕೆ ಮಾರ್ಪಡಿಸಲಾಗಿದೆ. ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಹಾಲಿ ತಿಳಿ ಗಿಣಿಹಸುರು, ಮಧ್ಯದಲ್ಲಿ ಕೆಂಪು, ಹಳದಿ ಪಟ್ಟಿ , ಸಣ್ಣದಾದ ತಿಳಿ ಸಿಲ್ವರ್‌ ಗೆರೆಗಳಿದ್ದವು. ಬಸ್‌ಗಳಿಗೆ ಮರು ಬಣ್ಣ ಮಾಡಿಸಲು, ಪ್ರಸ್ತುತ ಬಣ್ಣಕ್ಕೂ ಹಾಗೂ ಕೆಂಪು-ಸಿಲ್ವರ್‌ ಬಣ್ಣಕ್ಕೂ ಹೋಲಿಸಿದರೆ ಒಂದು ಬಸ್‌ಗೆ ಕನಿಷ್ಠ 2,000-3,000 ರೂ.ಗಳವರೆಗೆ ಅಧಿಕವಾಗುತ್ತದೆ. ಈ ವೆಚ್ಚವನ್ನೂ ಉಳಿಸಿದಂತಾಗುತ್ತದೆ. ಹಾಗೆಯೇ ರಾಜ್ಯದಲ್ಲಿ ಬಹುತೇಕ ಒಂದೇ ಬಣ್ಣದ ಬಸ್‌ಗಳು ಸಂಚರಿಸಿದಂತಾಗುತ್ತದೆ ಎಂಬ ಉದ್ದೇಶದಿಂದ ಕೆಂಪು ಬಸ್‌ಗಳಿಗೆ ಮೊರೆ ಹೋಗಲಾಗಿದೆ ಎನ್ನಲಾಗುತ್ತಿದೆ.

ಮೂರು ನಿಗಮದಲ್ಲೂ ವಿಭಿನ್ನತೆ
ಕಲ್ಯಾಣ ಕರ್ನಾಟಕ, ವಾಯವ್ಯ ಕರ್ನಾಟಕ ಹಾಗೂ ಕೆಎಸ್‌ಆರ್‌ಟಿಸಿ ಮೂರು ನಿಗಮಗಳಲ್ಲಿ ಇನ್ನು ಮುಂದೆ ಕೆಂಪು ಬಸ್‌ಗಳೇ ಸಂಚರಿಸಲಿವೆ. ಆದರೆ, ಮೂರು ನಿಗಮಗಳ ಬಸ್‌ಗಳಲ್ಲಿ ಪ್ರಸ್ತುತ ಕೊಂಚ ವಿಭಿನ್ನತೆ ಕಾಣಿಸುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಮೇಲ್ಭಾಗ ಕೆಂಪು, ಮಧ್ಯದಲ್ಲಿ ದೊಡ್ಡ ಸಿಲ್ವರ್‌ ಪಟ್ಟಿ ಅದರ ಕೆಳಗೆ ಮತ್ತೆ ಕೆಂಪು ಬಣ್ಣ ಇದ್ದರೆ; ಕಲ್ಯಾಣ ಕರ್ನಾಟಕದಲ್ಲಿ ಕೆಂಪು ಮಧ್ಯದಲ್ಲಿ ಹಾಲು ಬಣ್ಣದ ಬಿಳಿ ಪಟ್ಟಿ ಇರುತ್ತದೆ. ವಾಯವ್ಯ ಸಾರಿಗೆಗೆ ಹೊಸ ವಿನ್ಯಾಸದೊಂದಿಗೆ ಬಂದಿರುವ ಬಸ್‌ಗಳಲ್ಲಿ ಮುಂದಿನ ಚಕ್ರದ ಬಳಿ ಕೆಂಪು ಹಾಗೂ ಹಿಂದಿನ ಚಕ್ರದ ಮೇಲ್ಭಾಗದಲ್ಲಿ ಸಿಲ್ವರ್‌ ಬಣ್ಣವಿರುತ್ತದೆ.

ವಾಯವ್ಯ ಸಾರಿಗೆ ಸಂಸ್ಥೆಗೆ ಹೊಸ ವಿನ್ಯಾಸದ 40 ಬಸ್‌ಗಳು ಬಂದಿವೆ. ಹುಬ್ಬಳ್ಳಿ ವಿಭಾಗಕ್ಕೆ ಮೊದಲ ಹಂತವಾಗಿ 7 ಬಸ್‌ಗಳನ್ನು ನೀಡಲಾಗಿದೆ. ಒಟ್ಟಾರೆ ಸಂಸ್ಥೆಗೆ 375 ಹೊಸ ವಿನ್ಯಾಸದ ಬಸ್‌ಗಳು ಬರಲಿವೆ. ನೂತನ ಬಸ್‌ಗಳು ಕೆಂಪು ಹಾಗೂ ಬೆಳ್ಳಿ ಬಣ್ಣ ಹೊಂದಿರಲಿವೆ.
– ಎಚ್‌. ರಾಮನಗೌಡರ, ವಿಭಾಗೀಯ ನಿಯಂತ್ರಣಾಧಿಕಾರಿ

Advertisement

~ ಅಮರೇಗೌಡ ಗೋನವಾರ

 

Advertisement

Udayavani is now on Telegram. Click here to join our channel and stay updated with the latest news.

Next