Advertisement

ಗಮನ ಸೆಳೆಯದ ಈಶಾನ್ಯದ ಚುನಾವಣೆ: ಮುಂದುವರಿದ ಅವಗಣನೆ

08:38 AM Feb 01, 2018 | |

ಈಶಾನ್ಯ ಭಾರತದ ಮೂರು ಪುಟ್ಟ ರಾಜ್ಯಗಳಾದ ತ್ರಿಪುರ, ನಾಗಾಲ್ಯಾಂಡ್‌ ಮತ್ತು ಮೇಘಾಲಯದ ವಿಧಾನಸಭೆಗಳಿಗೆ ಈ ತಿಂಗಳು ಚುನಾವಣೆ ನಡೆಯಲಿದೆ. ಜ.19ರಂದೇ ಚುನಾವಣಾ ಆಯೋಗ ಈ ಮೂರು ರಾಜ್ಯಗಳ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ. ದೇಶದ ಬೇರೆ ಯಾವುದೇ ಮೂಲೆಯಲ್ಲಿ ಒಂದು ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆದರೆ ಇದರ ಫ‌ಲಿತಾಂಶದಿಂದ ದೇಶದ ಮೇಲೆ ಏನೇನು ಪರಿಣಾಮಗಳಾಗಬಹುದು ಎಂದು ದಿನಗಟ್ಟಲೆ ಚರ್ಚೆ ಮಾಡುವ ವಿದ್ಯುನ್ಮಾನ ಮಾಧ್ಯಮಗಳಾಗಲಿ, ಪುಟಗಟ್ಟಲೆ ಬರೆಯುವ ಮುದ್ರಣ ಮಾಧ್ಯಮವಾಗಲಿ ಈಶಾನ್ಯ ಭಾರತದ ಚುನಾವಣೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರುವಂತೆ ಕಾಣಿಸುವುದಿಲ್ಲ. ಹೆಚ್ಚೇಕೆ ಚುನಾವಣೆ ಫ‌ಲಿತಾಂಶದಿಂದ ದೇಶದ ರಾಜಕೀಯದಲ್ಲಿ ಏನೆಲ್ಲ ಬದಲಾವಣೆ ಆಗಬಹುದು ಎಂದು ವರ್ಷಕ್ಕೂ ಮೊದಲೇ ಭವಿಷ್ಯ ನುಡಿಯುವ ರಾಜಕೀಯ ಪಂಡಿತರಿಗೂ ಮೂರು ರಾಜ್ಯಗಳ ಚುನಾವಣೆ ಅಷ್ಟು ಮಹತ್ವದ್ದು ಎಂದು ಅನ್ನಿಸಿಲ್ಲ. ಹೆಚ್ಚಿನವರು 2018ರ ಚುನಾವಣಾ ಪರ್ವ ಕರ್ನಾಟಕದಿಂದ ಶುರುವಾಗಿ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕೊನೆಯಾಗಲಿದೆ ಎನ್ನುತ್ತಾರೆಯೇ ಹೊರತು ತ್ರಿಪುರ, ನಾಗಾಲ್ಯಾಂಡ್‌ ಮತ್ತು ಮೇಘಾಲಯದ ಹೆಸರೆತ್ತುತ್ತಿಲ್ಲ. ದೇಶದ ಈ ನಿರಾಸಕ್ತಿ ಈಶಾನ್ಯದ ರಾಜ್ಯಗಳಿಗೆ ಸಂಬಂಧಿಸಿದಂತೆ ಉಳಿದ ಭಾಗದಲ್ಲಿರುವ ಮನೋಭಾವವನ್ನು ತಿಳಿಸುತ್ತದೆ. 

Advertisement

  ಹಿಂದಿನಿಂದಲೂ ಈಶಾನ್ಯ ಭಾಗ ನಿರ್ಲಕ್ಷಿತ ಪ್ರದೇಶ. ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತಿಗತಿಯಲ್ಲಿ ದೇಶದ ಉಳಿದ ಭಾಗಗಳಿಂದ ಭಿನ್ನವಾಗಿರುವ ಈ ಭಾಗದ ಜನರನ್ನು ಪರಕೀಯರೆಂದೇ ಕಾಣಲಾಗುತ್ತದೆ. ಮುಂಬಯಿ, ದಿಲ್ಲಿ, ಬೆಂಗಳೂರು ಮತ್ತಿತರ ನಗರಗಳಲ್ಲಿ ಈಶಾನ್ಯದ ಜನರನ್ನು ಬೇರೆ ದೇಶದವರೆಂದು ಭಾವಿಸಿ ಹಲ್ಲೆ ಮಾಡಿದ ಪ್ರಕರಣಗಳೂ ಸಂಭವಿಸಿವೆ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿಲ್ಲ ಎಂಬ ಕಾರಣಕ್ಕಾಗಿ ರಾಜಕೀಯವಾಗಿಯೂ ಈಶಾನ್ಯ ಅವಗಣನೆಗೆ ಈಡಾಗಿದೆ. ಪಿ.ಎ. ಸಂಗ್ಮಾರಂತಹ ಒಂದಿಬ್ಬರನ್ನು ಹೊರತುಪಡಿಸಿದರೆ ಅಲ್ಲಿಂದ ರಾಷ್ಟ್ರ ರಾಜಕಾರಣದಲ್ಲಿ ಮಿಂಚಿದ ರಾಜಕೀಯ ಮುಖಂಡರೂ ಇಲ್ಲ. ಸಾಮಾನ್ಯವಾಗಿ ಈಶಾನ್ಯ ಭಾಗದ ರಾಜ್ಯಗಳು ಸುದ್ದಿಯಾಗುವುದು ಗಡಿ ತಕರಾರುಗಳಿಂದ ಇಲ್ಲವೇ ಬಂಡುಕೋರರು ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆಸಿದಾಗ ಮಾತ್ರ. ಉಳಿದಂತೆ ಪ್ರಕೃತಿ ಮಡಿಲಲ್ಲಿ ತಣ್ಣಗೆ ಮಲಗಿರುವ ಈ ರಾಜ್ಯಗಳ ಉಸಾಬರಿಗೆ ಯಾರೂ ಹೋಗುವುದಿಲ್ಲ. ರಾಜಕೀಯ ನಾಯಕರಿಗೂ ಕೆಲವೇ ಸೀಟುಗಳಿರುವ ಈಶಾನ್ಯ ರಾಜ್ಯಗಳಿಗೆ ಹೋಗಲು ಉದಾಸೀನ. ಇದ್ದುದರಲ್ಲೇ ಸ್ವಲ್ಪ ದೊಡ್ಡದಾಗಿರುವ ಅಸ್ಸಾಂ ಮಾತ್ರ ಈಶಾನ್ಯ ರಾಜ್ಯಗಳ ಪೈಕಿ ಹೆಚ್ಚು ಪರಿಚಿತ. ಚೀನದ ಗಡಿ ತಂಟೆಯಿಂದಾಗಿ ಅರುಣಾಚಲ ಪ್ರದೇಶ ಆಗಾಗ ಸುದ್ದಿಯಾಗುತ್ತಿರುತ್ತದೆ. 

ಮೂರು ರಾಜ್ಯಗಳ ಪೈಕಿ ತ್ರಿಪುರದಲ್ಲಿ ಫೆ. 18ಕ್ಕೂ ಮೇಘಾಲಯ ಮತ್ತು ನಾಗಾಲ್ಯಾಂಡ್‌ನ‌ಲ್ಲಿ ಫೆ. 27ಕ್ಕೂ ಚುನಾವಣೆ ನಡೆದು ಮಾ. 3ರಂದು ಫ‌ಲಿತಾಂಶ ಪ್ರಕಟವಾಗಲಿದೆ. ಈ ಪೈಕಿ ತ್ರಿಪುರದಲ್ಲಿ ನಾಲ್ಕು ದಶಕಗಳಿಂದ ಸಿಪಿಎಂ ಅಧಿಕಾರದಲ್ಲಿದೆ. ಸಿಪಿಎಂ ಕೈಯಲ್ಲಿರುವ ಎರಡು ರಾಜ್ಯಗಳ ಪೈಕಿ ಒಂದು ಇದು. ಇಲ್ಲಿ ಪಕ್ಷ ನಿರಂತರವಾಗಿ ಗೆಲ್ಲುತ್ತಿರುವುದು ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರ ವರ್ಚಸ್ಸಿನಿಂದಾಗಿಯೇ ಹೊರತು ಪಕ್ಷದ ಸ್ವಂತ ಸಾಮರ್ಥ್ಯದಿಂದ ಅಲ್ಲ. ಮೇಘಾಲಯ ಕಾಂಗ್ರೆಸ್‌ ಕೈಯಲ್ಲಿದ್ದರೂ ಈ ಸಲ ಬಿಜೆಪಿಯ ಮಿತ್ರಪಕ್ಷವಾಗಿರುವ ನ್ಯಾಶನಲ್‌ ಪೀಪಲ್ಸ್‌ ಪಾರ್ಟಿಯ ಪ್ರಬಲ ವಿರೋಧ ಎದುರಿಸುತ್ತಿದೆ. ನಾಗಾಲ್ಯಾಂಡ್‌ನ‌ಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು. ನಾಗಾಲ್ಯಾಂಡ್‌ನ‌ಲ್ಲಿ ಪ್ರಸ್ತುತ ನಾಗಾಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌ ಅಧಿಕಾರದಲ್ಲಿದೆ. ಈ ಸಲ ಪ್ರಬಲ ಆಡಳಿತ ವಿರೋಧಿ ಅಲೆಯನ್ನು ಈ ಪಕ್ಷ ಎದುರಿಸುತ್ತಿದೆ. ನಾಗಾಲ್ಯಾಂಡ್‌ ಹೆಚ್ಚಾಗಿ ಸುದ್ದಿಯಾಗುವುದು ಬಂಡುಕೋರ ಚಟುವಟಿಕೆಗಳಿಂದಾಗಿ. ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್‌ ಚಿಕ್ಕ ರಾಜ್ಯಗಳಾಗಿರಬಹುದು. ಆದರೆ ಇಲ್ಲಿಯೂ ಎಲ್ಲರಾಜ್ಯಗಳ ಮಾದರಿಯಲ್ಲೇ ಚುನಾವಣೆ ನಡೆಯುತ್ತದೆ. ಈ ಸಲ ಪಕ್ಷಗಳ ನಡುವಿನ ಹಣಾಹಣಿ ಹಿಂದಿನ ಚುನಾವಣೆಗಳಿಂದ ಬಿರುಸಾಗಿದೆ. ಇದಕ್ಕೆ ಒಂದು ಕಾರಣ ಬಿಜೆಪಿಯ ಪ್ರವೇಶ. ಇಡೀ ದೇಶದಲ್ಲಿ ತನ್ನ ಛಾಪು ಒತ್ತಲು ಮುಂದಾಗಿರುವ ಕೇಸರಿ ಪಕ್ಷ ಈಶಾನ್ಯದಲ್ಲಿ ಈಗಾಗಲೇ ಭದ್ರ 
ನೆಲೆ ಹೊಂದಿರುವ ಪಕ್ಷಗಳ ನಿದ್ದೆಗೆಡಿಸಿದೆ. ಖಂಡಿತ ಈ ಸಲದ ಫ‌ಲಿತಾಂಶದಿಂದ ರಾಷ್ಟ್ರ ರಾಜಕಾರಣದ ಮೇಲೆ ತುಸುವಾದರೂ ಪರಿಣಾಮವಾಗಲಿದೆ. ಮುಖ್ಯವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಾಲಿಗೆ ಈಶಾನ್ಯ ರಾಜ್ಯಗಳ ಫ‌ಲಿತಾಂಶ ನಿರ್ಣಾಯಕವಾಗಲಿದೆ. ಇನ್ನಾದರೂ ನಾವು ಈಶಾನ್ಯದತ್ತ ಗಮನಹರಿಸುವ.

Advertisement

Udayavani is now on Telegram. Click here to join our channel and stay updated with the latest news.

Next