Advertisement
ಹುಬ್ಬಳ್ಳಿ: ಕೋವಿಡ್ ಮೊದಲ ಅಲೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 31 ಸಿಬ್ಬಂದಿ ಮೃತಪಟ್ಟಿದ್ದು, ಅವರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಇದೀಗ ಎರಡನೇ ಅಲೆಯ ತೀವ್ರತೆಗೆ ಸಂಸ್ಥೆಯ 40 ಸಿಬ್ಬಂದಿ ಬಲಿಯಾಗಿದ್ದಾರೆ.
Related Articles
Advertisement
ಮೊದಲ ಅಲೆಯದ್ದೇ ಪರಿಹಾರವಿಲ್ಲ: ಕೋವಿಡ್ ಲಾಕ್‌ಡೌನ್ ಪರಿಣಾಮ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದ್ದು, ಮೃತ ಕೋವಿಡ್ ವಾರಿಯರ್ ಕುಟುಂಬಗಳಿಗೆ ಪರಿಹಾರ ನೀಡುವುದು ಸಂಕಷ್ಟವಾಗಿ ಪರಿಣಮಿಸಿದೆ.
ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ 31 ಸಿಬ್ಬಂದಿ ಮೃತಪಟ್ಟಿದ್ದರು. ಆದರೆ ಒಂದು ವರ್ಷ ಕಳೆದರೂ ಒಬ್ಬರಿಗೂ ಪರಿಹಾರ ದೊರಕಿಲ್ಲ. ಕುಟುಂಬದ ಯಜಮಾನನನ್ನು ಕಳೆದುಕೊಂಡವರು ಜೀವನ ನಿರ್ವಹಣೆಗೋಸ್ಕರ ಪರಿಹಾರಕ್ಕಾಗಿ ಅಲೆದಾಡುವಂತಾಗಿದೆ. ಹೆಚ್ಚುತ್ತಿದೆ ಪರಿಹಾರ ಬಾಕಿ: ಎರಡನೇ ಅಲೆ ಸಂದರ್ಭದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಏ.1ರಿಂದ ಇಲ್ಲಿಯವರೆಗೆ ಸಂಸ್ಥೆಯಲ್ಲಿ 40 ಸಿಬ್ಬಂದಿ ಮೃತಪಟ್ಟಿದ್ದಾರೆ. ತಲಾ 30ಲಕ್ಷ ರೂ.ನಂತೆ ಒಟ್ಟು 12 ಕೋಟಿ ರೂ. ಪರಿಹಾರ ವಿತರಿಸಬೇಕಿದೆ.
ಬಾಗಲಕೋಟೆಯಲ್ಲಿ 130 ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರ ಗಡಿ ಭಾಗದ ಬೆಳಗಾವಿ, ಚಿಕ್ಕೋಡಿ ವಿಭಾಗದಲ್ಲಿ ಸೋಂಕಿತರ ಹಾಗೂ ಮೃತಪಟ್ಟ ಸಿಬ್ಬಂದಿ ಸಂಖ್ಯೆ ಹೆಚ್ಚಿದೆ. ಮಹಾರಾಷ್ಟ್ರಕ್ಕೆ ಕರ್ತವ್ಯದ ಮೇಲೆ ಹೋಗಿ ಬರುತ್ತಿದ್ದ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆಂದು ಅಂದಾಜಿಸಲಾಗಿದೆ. ಸರಕಾರದ ಮೇಲೆ ನಿರೀಕ್ಷೆ: ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿರುವುದರಿಂದ ಕೋವಿಡ್‌ನಿಂದ ಮೃತಪಟ್ಟ ಸಿಬ್ಬಂದಿ ಪರಿಹಾರಕ್ಕಾಗಿ ಸರಕಾರದತ್ತ ಮುಖ ಮಾಡಿದ್ದಾರೆ.
ಸರಕಾರ ಸಾರಿಗೆ ಸಂಸ್ಥೆಗಳ ನೌಕರರನ್ನು ಕೋವಿಡ್ ವಾರಿಯರ್ ಗಳೆಂದು ಪರಿಗಣಿಸಿರುವುದರಿಂದ ಸರಕಾರವೇ ಪರಿಹಾರ ಹಣ ನೀಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಮೊದಲ-ಎರಡನೇ ಅಲೆ ಸೇರಿ 71 ಸಿಬ್ಬಂದಿಗೆ ಒಟ್ಟು 21.30 ಕೋಟಿ ರೂ. ಸರಕಾರ ಪಾವತಿಸಬಹುದು ಎನ್ನುವ ಆಶಾ ಭಾವ ಅಧಿಕಾರಿಗಳಲ್ಲಿದೆ. ಸರಕಾರ ಒಂದು ವೇಳೆ ಪರಿಹಾರ ನೀಡಲು ಹಿಂದೇಟು ಹಾಕಿ ಸಂಸ್ಥೆಯ ಸಂಪನ್ಮೂಲದಿಂದಲೇ ಭರಿಸಬೇಕೆಂದು ಕೈ ಎತ್ತಿದರೆ ಸಾರಿಗೆ ಆದಾಯದ ಮೇಲೆ ಅವಲಂಬನೆಯಾಗಬೇಕಾಗುತ್ತದೆ.
ಸಾರಿಗೆ ಆದಾಯ ಇಲ್ಲದ ಪರಿಣಾಮ ಬ್ಯಾಂಕ್ ಸಾಲ, ಸಿಬ್ಬಂದಿ ವೇತನ, ಬಿಡಿಭಾಗಗಳ ಖರೀದಿ, ಇಂಧನ, ಗುತ್ತಿಗೆದಾರರ ಬಿಲ್ ಸೇರಿದಂತೆ ಸುಮಾರು 1000 ಕೋಟಿ ಬಾಕಿಯಿದೆ. ಇಂತಹ ಪರಿಸ್ಥಿತಿಯಲ್ಲಿ ಮೃತರ ಕುಟುಂಬಗಳಿಗೆ ಸಕಾಲದಲ್ಲಿ ಪರಿಹಾರ ದೊರೆಯುವುದು ಕಷ್ಟ ಕಷ್ಟ.