ಸಿಯೋಲ್: ದಕ್ಷಿಣ ಕೊರಿಯದ ಜತೆಗೆ ಸ್ನೇಹ ಬೆಳೆಸಿ, ಸಮರಾಭ್ಯಾಸವನ್ನೂ ನಡೆಸಲು ಸಿದ್ಧವಾಗಿರುವ ಅಮೆರಿಕಕ್ಕೆ ಈವರೆಗೆ ಪರೋಕ್ಷವಾಗಿ ಎಚ್ಚರಿಕೆ ನೀಡುತ್ತಿದ್ದ ಉತ್ತರ ಕೊರಿಯ, ಈಗ ನೇರಾನೇರ ಅಖಾಡಕ್ಕೆ ಕಾಲಿಟ್ಟಿದೆ. ಅಣ್ವಸ್ತ್ರವನ್ನು ಹೊತ್ತೂಯ್ಯಬಲ್ಲ ಕ್ಷಿಪಣಿ ಉಡಾವಣೆಗೊಳಿಸುವ ಮೂಲಕ ಅಮೆರಿಕಗೆ ನೇರ ಎಚ್ಚರಿಕೆ ರವಾನಿಸಿದೆ.
ಪರ್ಯಾಯ ದ್ವೀಪದ ಪೂರ್ವಭಾಗದಲ್ಲಿ ಜಲಾಂತರ್ಗಾಮಿ ನೌಕೆ ಮೂಲಕ ಎರಡು ಪ್ರಬಲ ನೌಕಾ ಕ್ಷಿಪಣಿಗಳನ್ನು ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯ ಸೇನಾಪಡೆ ಉಡಾವಣೆಗೊಳಿಸಿದೆ.
1,500 ಕಿ.ಮೀ. ಕ್ರಮಿಸುವ ಸಾಮರ್ಥ್ಯವಿರುವ ಈ ಕ್ಷಿಪಣಿಗಳು ಅಣ್ವಸ್ತ್ರಸಜ್ಜಿತವಾಗಿ ಶತ್ರುಗಳನ್ನು ನಿಮಿಷಗಳಲ್ಲೇ ಧ್ವಂಸಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ.
ದಕ್ಷಿಣ ಕೊರಿಯ ಹಾಗೂ ಅಮೆರಿಕ ನಡುವಿನ ಸಮರಾಭ್ಯಾಸ ಮಾ.23ರಿಂದ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಉತ್ತರ ಕೊರಿಯಾ ಈ ರೀತಿ ಬೆದರಿಕೆ ಒಡ್ಡಿದೆ. ಕ್ಷಿಪಣಿ ಉಡಾವಣೆಯಾಗಿರುವುದನ್ನು ದಕ್ಷಿಣಾ ಕೊರಿಯ ಕೂಡ ಒಪ್ಪಿಕೊಂಡಿದ್ದು, ಅದರ ಬಗ್ಗೆ ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂಬುದನ್ನೂ ತಿಳಿಸಿದೆ.