ಉತ್ತರಕೊರಿಯಾ: ಉತ್ತರ ಕೊರಿಯಾದ ಮಾಜಿ ಅಧ್ಯಕ್ಷ, ದಿವಂಗತ ಕಿಮ್ ಜಾಂಗ್ ಇಲ್ ನಿಧನವಾಗಿ ಇಂದಿಗೆ (ಡಿಸೆಂಬರ್ 17) ಹತ್ತು ವರ್ಷವಾಗಿದೆ. ದೇಶದಲ್ಲಿ 11 ದಿನಗಳ ಕಾಲ ಶೋಕಾಚರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ದೇಶದ ನಾಗರಿಕರು ನಗುವುದನ್ನು, ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಕಿಮ್ ಜಾಂಗ್ ಉನ್ ಫರ್ಮಾನು ಹೊರಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮುಸ್ಲಿಮರಾಗಿ ಮತಾಂತರವಾದರೆ ಅಂಬೇಡ್ಕರ್ ಗೆ ಎಲ್ಲಿ ಜಾಗ: ಸಿ.ಟಿ.ರವಿ ಪ್ರಶ್ನೆ
ಉತ್ತರ ಕೊರಿಯಾದ ಸರ್ವಾಧಿಕಾರಿಯಾಗಿದ್ದ ಕಿಮ್ ಜಾಂಗ್ ಇಲ್ 2011ರ ಡಿಸೆಂಬರ್ 17ರಂದು ಸಾವನ್ನಪ್ಪಿದ್ದರು. ಕಿಮ್ ಜಾಂಗ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ದೇಶಾದ್ಯಂತ ನಗುವುದು ಸೇರಿದಂತೆ ಹಲವಾರು ನಿಷೇಧ ಹೇರಿರುವುದಾಗಿ ವರದಿ ವಿವರಿಸಿದೆ.
ಶೋಕಾಚರಣೆ ನಡೆಯಲಿರುವ ಹತ್ತು ದಿನಗಳ ಕಾಲ ಉತ್ತರ ಕೊರಿಯಾದ ಜನರು ನಗುವಂತಿಲ್ಲ, ಮದ್ಯಪಾನ ಮಾಡುವಂತಿಲ್ಲ, ಶಾಪಿಂಗ್ ಗೆ ಹೋಗುವಂತಿಲ್ಲ, ವಿರಾಮ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತಿಲ್ಲ ಎಂದು ಗಡಿ ನಗರವಾದ ಸಿನುಯಿಜು ನಿವಾಸಿಯೊಬ್ಬರು ರೇಡಿಯೊ ಫ್ರೀ ಏಷ್ಯಾಕ್ಕೆ ತಿಳಿಸಿದ್ದಾರೆ.
ಒಂದು ವೇಳೆ ಹತ್ತು ದಿನಗಳ ಕಾಲಾವಧಿಯ ಶೋಕಾಚರಣೆಯಲ್ಲಿ ನಿರ್ಬಂಧವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗಲಿದೆ ಎಂದು ಸಿನುಯಿತು ವಿವರ ನೀಡಿದ್ದಾರೆ. ಈ ಹಿಂದೆಯೂ ಶೋಕಾಚರಣೆಯ ಸಂದರ್ಭದಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದಿದ್ದವರನ್ನು ಕ್ರಿಮಿನಲ್ ಗಳು ಎಂಬಂತೆ ಆರೋಪಿಸಿ ಶಿಕ್ಷೆ ವಿಧಿಸಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ನಾಗರಿಕರೊಬ್ಬರು ತಿಳಿಸಿದ್ದಾರೆ.
ಶೋಕಾಚರಣೆ ಸಂದರ್ಭದಲ್ಲಿ ಒಂದು ವೇಳೆ ಬಂಧಿಸಲ್ಪಟ್ಟರೆ ಅವರನ್ನು ಮತ್ತೆ ಎಂದಿಗೂ ನೋಡಲು ಸಾಧ್ಯವಿಲ್ಲ. ಹತ್ತು ದಿನಗಳ ಕಾಲ ಯಾರೊಬ್ಬರೂ ಹೊರ ಹೋಗುವಂತಿಲ್ಲ, ಯಾವುದೇ ಹುಟ್ಟುಹಬ್ಬವಾಗಲಿ ಯಾವುದೇ ಕಾರ್ಯಗಳನ್ನೂ ಮಾಡುವಂತಿಲ್ಲ ಎಂದು ವರದಿ ವಿವರಿಸಿದೆ.