Advertisement

ಜಪಾನ್‌ನತ್ತ ಸಿಡಿದ “ಕಿಮ್‌ ಕ್ಷಿಪಣಿ’

10:04 PM Mar 24, 2022 | Team Udayavani |

ಸಿಯೋಲ್‌: ಉತ್ತರ ಕೊರಿಯಾ 2017ರ ಬಳಿಕ ಇದೇ ಮೊದಲ ಬಾರಿಗೆ ಬೃಹತ್‌ ಪ್ರಮಾಣದ ಖಂಡಾಂತರ ಕ್ಷಿಪಣಿಯ ಪ್ರಯೋಗವನ್ನು ಗುರುವಾರ ನಡೆಸಿದೆ.

Advertisement

ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ನೇತೃತ್ವದ ಆಡಳಿತ ತನ್ನ ದೇಶದ ಪೂರ್ವ ಕರಾವಳಿ ಪ್ರದೇಶದಿಂದ ಕ್ಷಿಪಣಿಯನ್ನು ಉಡಾಯಿಸಿದ್ದು, ಅದು 1,100 ಕಿಮೀ ದೂರ ಹಾರಿದೆ ಮತ್ತು ಜಪಾನ್‌ನ ಉತ್ತರ ಭಾಗದ ಹೊಕ್ಕೆ„ಡೋ ದ್ವೀಪ ವ್ಯಾಪ್ತಿಯ ಜಲಪ್ರದೇಶಕ್ಕೆ ಸಿಡಿದು ಬಿದ್ದಿದೆ. 2017ರಲ್ಲಿ ಉತ್ತರ ಕೊರಿಯಾ ತನಗೆ ಖಂಡಾತರ ಕ್ಷಿಪಣಿ (ಐಸಿಬಿಎಂ)ಉಡಾಯಿಸುವ ಸಾಮರ್ಥ್ಯ ಇದೆ ಎಂದು ಜಗತ್ತಿಗೆ ತೋರಿಸಿಕೊಟ್ಟ ಬಳಿಕ ಇದೇ ಮೊದಲ ಬಾರಿಗೆ ಆ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದ ಸಾಮರ್ಥ್ಯ ಇದೆ ಎಂದು ತೋರಿಸಿಕೊಡಲು ಮುಂದಾಗಿದೆ. ರಷ್ಯಾ ಮತ್ತು ಉಕ್ರೇನ್‌ ನಡುವೆ ಕಾಳಗದಿಂದಾಗಿ ಜಗತ್ತಿನಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿರುವಾಗಲೇ ಈ ಬೆಳವಣಿಗೆ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಉತ್ತರ ಕೊರಿಯಾದ ಆಡಳಿತ ಪದೇ ಪದೆ ಕ್ಷಿಪಣಿ ಮತ್ತು ಶಸ್ತ್ರಾಸ್ತ್ರಗಳ ಪ್ರಯೋಗ ಮತ್ತು ಪರೀಕ್ಷೆ ನಡೆಸುತ್ತಲೇ ಇದೆ. ಜತೆಗೆ ಗುರುವಾರದ ಪರೀಕ್ಷೆ ಐದು ವರ್ಷಗಳ ಹಿಂದೆ ನಡೆಸಿದ್ದಕ್ಕಿಂತ ಹೆಚ್ಚು ಪ್ರಭಾವ ಮತ್ತು ಶಕ್ತಿಯುತವಾಗಿದೆ. ಅದು 6,200  ಕಿಮೀ ದೂರ ತಲುಪುವ ಸಾಮರ್ಥ್ಯ ಹೊಂದಿವೆ ಎಂದು ಜಪಾನ್‌ನ ರಕ್ಷಣಾ ಸಚಿವಾಲಯ ದೃಢಪಡಿಸಿದೆ. ಅದು ಒಟ್ಟು 71 ನಿಮಿಷಗಳ ಕಾಲ ಹಾರಾಟ ನಡೆಸಿದೆ. ಜತೆಗೆ ಇದೊಂದು ಹೊಸ ಮಾದರಿಯ ಖಂಡಾತರ ಕ್ಷಿಪಣಿ ಎಂದೂ ಅಭಿಪ್ರಾಯಪಟ್ಟಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಪಾನ್‌ ಪ್ರಧಾನಿ ಫ್ಯೂಮೋ ಕಿಶಿದಾ ಉತ್ತರ ಕೊರಿಯಾ ನಡೆಸಿದ್ದು ದುಃಸ್ಸಾಹಸ. ಅದನ್ನು ಖಂಡಿಸುತ್ತೇವೆ ಎಂದಿದ್ದಾರೆ. ಪದೇ ಪದೆ ಕ್ಷಿಪಣಿ ಉಡಾವಣೆ ಮಾಡುತ್ತಿದ್ದ ಕಾರಣದಿಂದಲೇ ಅಮೆರಿಕ ಮತ್ತು ಇತರ ರಾಷ್ಟ್ರಗಳು ಉತ್ತರ ಕೊರಿಯಾಕ್ಕೆ ದಿಗ್ಬಂಧನ ಹೇರಿದ್ದವು. ಕ್ಷಿಪಣಿ ಉಡಾವಣೆ ನಡೆಸಿದ ಬೆನ್ನಲ್ಲಿಯೇ ದಕ್ಷಿಣ ಕೊರಿಯಾ ಸರ್ಕಾರ ತನ್ನ ಸೇನಾಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲು ಆದೇಶ ನೀಡಿದೆ ಮತ್ತು ಸರಣಿ ಸಮರಾಭ್ಯಾಸವನ್ನೂ ನಡೆಸಲು ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next