ಪ್ಯೊಗ್ಯಾಂಗ್: ದಕ್ಷಿಣ ಕೊರಿಯಾದಿಂದ ಉತ್ತರ ಕೊರಿಯಾಕ್ಕೆ ಈ ತಿಂಗಳು ಅಕ್ರಮವಾಗಿ ಗಡಿ ನುಸುಳಿ ಬಂದಿರುವ ವ್ಯಕ್ತಿಯೊಬ್ಬರಿಗೆ ಕೋವಿಡ್ ವೈರಸ್ ತಗುಲಿರುವ ಶಂಕೆ ವ್ಯಕ್ತಪಡಿಸಲಾಗಿದ್ದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಉನ್ನತ ಅಧಿಕಾರಿಗಳ ಸಭೆ ಕರೆದು ರಾಜ್ಯ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.
ಉತ್ತರಕೊರಿಯಾದ ಗಡಿ ನಗರ ಕೈಸೋಂಗ್ ನಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು, ಕೋವಿಡ್ ಹರಡದಂತೆ ಗರಿಷ್ಠ ತುರ್ತು ವ್ಯವಸ್ಥೆ ಮತ್ತು ದೇಶಾದ್ಯಂತ ಎಚ್ಚರಿಕೆ ಗಂಟೆ ಮೊಳಗಿಸಲಾಗಿದೆ. ಚೀನಾದ ವುಹಾನ್ ನಲ್ಲಿ ಆರಂಭಗೊಂಡ ಕೋವಿಡ್ ವೈರಸ್ ಉತ್ತರಕೊರಿಯಾ ಹೊರತುಪಡಿಸಿ ಜಗತ್ತಿನಾದ್ಯಂತ ಕಬಂಧಬಾಹು ಚಾಚಿತ್ತು. ಇದೀಗ ಮೊದಲ ಶಂಕಿತ ಪ್ರಕರಣ ಕಾಣಿಸಿಕೊಂಡಿದ್ದು ಖಚಿತವಾದರೆ ಮೊದಲ ಪ್ರಕರಣ ಎನಿಸಿಕೊಳ್ಳಲಿದೆ.
ಉತ್ತರ ಕೊರಿಯಾದಲ್ಲಿ ಸಾಂಕ್ರಮಿಕ ರೋಗ ಖಚಿತವಾದರೆ ಗಂಭೀರವಾದ ಪರಿಣಾಮ ಬೀರಲಿದ್ದು ಈ ದೇಶದಲ್ಲಿ ವೈದ್ಯಕೀಯ ಮೂಲ ಸೌಕರ್ಯ ಶೋಚನೀಯ ಮತ್ತು ಅಸಮರ್ಪಕವಾಗಿದೆ. ಇದು ಅಪಾಯಕಾರಿ ಮತ್ತು ವಿನಾಶಕಾರಿ ವಿಪತ್ತಿಗೆ ಕಾರಣವಾಗಬಹುದು ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ
ಇದೀಗ ದಕ್ಷಿಣ ಮತ್ತು ಉತ್ತರ ಕೊರಿಯಾ ಗಡಿ ನಗರ ಕೈಸೊಂಗ್ನಲ್ಲಿ ಕೋವಿಡ್ ರೋಗಿ ಪತ್ತೆಯಾಗಿದ್ದು, ಆತನನ್ನು ಕಠಿಣ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಅಲ್ಲದೆ ಆತನ ಸಂಪರ್ಕಕ್ಕೆ ಬಂದವರನ್ನೂ ಕ್ವಾರಂಟೈನ್ ಮಾಡಲಾಗಿದೆ,
ದಕ್ಷಿಣ ಕೊರಿಯಾದಲ್ಲಿ ಕೋವಿಡ್ ಈಗಾಗಲೇ ಹರುತ್ತಿದ್ದು ಪ್ರಸ್ತುತ ದಿನಕ್ಕೆ 40 ರಿಂದ 60 ಪ್ರಕರಣಗಳನ್ನು ದಾಖಲಿಸುತ್ತಿದೆ.