ಟೊಕಿಯೊ: ಅಮೆರಿಕ ಎಷ್ಟೇ ಎಚ್ಚರಿಕೆ ನೀಡಿದರೂ ಜಗ್ಗದ ಉತ್ತರಕೊರಿಯಾ ಯುದ್ಧೋನ್ಮಾದ ಮುಂದುವರಿಸಿದ್ದು, ಶುಕ್ರವಾರ ಇನ್ನೊಂದು ಖಂಡಾಂತರ ಛೇದಕ ಕ್ಷಿಪಣಿಯನ್ನು ಜಪಾನ್ ಕರಾವಳಿಯತ್ತ ಹಾರಿಸಿ ಉದ್ಧಟತನ ಮೆರೆದಿದೆ. ಇದು ತಿಂಗಳೊಳಗೆ ಉತ್ತರ ಕೊರಿಯಾ ಹಾರಿಸಿದ 2 ನೇ ಕ್ಷಿಪಣಿಯಾಗಿದೆ.
ಕ್ಷಿಪಣಿ ಜಪಾನ್‌ನ ಉತ್ತರ ಭಾಗದ ಹೊಕಾಯಿಡೊ ಫೆಸಿಫಿಕ್ ಸಾಗರವನ್ನ ತಲುಪಿದೆ ಎಂದು ಜಪಾನ್ ಮತ್ತು ದಕ್ಷಿಣ ಕೊರಿಯಾದ ಮೂಲಗಳು ತಿಳಿಸಿವೆ.
”ರೋಗಗ್ರಸ್ತ ನಾಯಿಯನ್ನು ಹೊಡೆದು ಕೊಂದಂತೆ ಅಮೆರಿಕವನ್ನು ಸಾಯಿಸುತ್ತೇವೆ,ಜಪಾನ್‌ನ ನಾಲ್ಕು ದ್ವೀಪಗಳನ್ನು ಮುಳುಗಿಸುತ್ತೇವೆ” ಎಂದು ಪ್ಯಾಂಗ್ ಯಾಂಗ್ ಬೆದರಿಕೆ ಹಾಕಿದ ಬೆನ್ನಲ್ಲೇ ಕ್ಷಿಪಣಿ ಹಾರಿ ಬಿಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ‘ಜಪಾನ್ ಇಂತಹದ್ದನ್ನು ಸಹಿಸುವುದಿಲ್ಲ. ಉತ್ತರಕೊರಿಯಾದ ಅಪಾಯಕಾರಿ, ಪ್ರಚೋದನಕಾರಿ ಕ್ರಮ ವಿಶ್ವ ಶಾಂತಿಗೆ ಮಾರಕ’ ಎಂದು ಕಿಡಿ ಕಾರಿದ್ದಾರೆ.
ಗುರುವಾರ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಉತ್ತರ ಕೊರಿಯಾದ ಖಂಡಾಂತರ ಛೇದಕ ಕ್ಷಿಪಣಿ ಪ್ರಯೋಗ ಮತ್ತು ಅಣ್ವಸ್ತ್ರ ಸಜ್ಜಿತ ಕ್ಷಿಪಣಿ ತಯಾರಿಕೆಯನ್ನು ವಿರೋಧಿಸಿ 8 ಹೊಸ ನಿರ್ಬಂಧಗಳನ್ನು ಹೇರಿತ್ತು.