Advertisement

ಮಾಲ್ದಿ, ಮುರುಕು ಮತ್ತೂಂದಿಷ್ಟು…

07:14 PM Sep 24, 2019 | mahesh |

ಉತ್ತರಕರ್ನಾಟಕದ ಮಂದಿ ರೊಟ್ಟಿಯನ್ನು ಬಹುವಾಗಿ ಇಷ್ಟಪಡುತ್ತಾರೆ. ಜೋಳದ ರೊಟ್ಟಿ- ಶೇಂಗಾ ಹಿಂಡಿ ಇಲ್ಲದಿದ್ದರೆ ಅವರಿಗೆ ಊಟವೇ ಸೇರುವುದಿಲ್ಲ. ಗೋಧಿ, ಜೋಳವನ್ನು ಬಳಸಿ ಅಲ್ಲಿನವರು ಮತ್ತಷ್ಟು ಖಾದ್ಯಗಳನ್ನು ತಯಾರಿಸುತ್ತಾರೆ. ಅವುಗಳ ರೆಸಿಪಿ ಇಲ್ಲಿದೆ.

Advertisement

1. ಮಾಲ್ದಿ
ಉತ್ತರಕರ್ನಾಟಕ ಭಾಗಗಳಲ್ಲಿ ಮಾಲ್ದಿ ಎನ್ನುವುದು ಸಾಮಾನ್ಯತಿಂಡಿ. ಇದನ್ನು ಗರ್ಭಿಣಿಯರ ಕುಬಸ ಕಾರ್ಯಕ್ರಮದ ಬುತ್ತಿ ಕೊಡುವ ಸಂದರ್ಭದಿಂದ ಹಿಡಿದು, ದೇವರ ನೈವೇದ್ಯದವರೆಗಿನ ಎಲ್ಲ ಸಂದರ್ಭದಲ್ಲೂ ತಯಾರಿಸುವ ಪರಿಪಾಠವಿದೆ.

ಬೇಕಾಗುವ ಸಾಮಗ್ರಿ: ಚಪಾತಿ- 5-6, ಬೆಲ್ಲ- ಒಂದು ಕಪ್‌/ ಸಕ್ಕರೆ - 8-10 ಚಮಚ, ಒಣಕೊಬ್ಬರಿ ತುರಿ- 5 ಚಮಚ, ಹುರಿಗಡಲೆ-5 ಚಮಚ, ಏಲಕ್ಕಿ ಪುಡಿ- ಚಿಟಿಕೆ, ಗೋಡಂಬಿ, ದ್ರಾಕ್ಷಿ.

ಮಾಡುವ ವಿಧಾನ: ಈಗಾಗಲೇ ಮಾಡಿರುವ ಚಪಾತಿಗಳನ್ನು ಸಣ್ಣದಾಗಿ ಚೂರು ಮಾಡಿ, ಗರಿಗರಿಯಾಗಿ ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ. ರುಬ್ಬಿದ ಚಪಾತಿ ಪುಡಿಗೆ ಸಕ್ಕರೆ ಅಥವಾ ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ . ಆ ಮಿಶ್ರಣಕ್ಕೆ ಏಲಕ್ಕಿ ಪುಡಿ, ಒಣಕೊಬ್ಬರಿ, ಹುರಿಗಡಲೆ, ಗೋಡಂಬಿ, ದ್ರಾಕ್ಷಿ ಹಾಕಿದರೆ ಮಾಲ್ದಿ ರೆಡಿ. ಇದನ್ನು ತುಪ್ಪ, ಮಾವಿನಹಣ್ಣಿನ ಸೀಕರಣೆ, ಬಿಸಿ ಹಾಲಿನೊಂದಿಗೆ ಸವಿಯಬಹುದು.

1. ರೊಟ್ಟಿಮುರಿ (ಮುರುಕು)
ಉತ್ತರ ಕರ್ನಾಟಕ ಎಂದರೆ ರೊಟ್ಟಿ, ರೊಟ್ಟಿಯೆಂದರೆ ಉತ್ತರಕರ್ನಾಟಕ ಎನ್ನುವ ಮಾತಿದೆ. ಇಲ್ಲಿ ರೊಟ್ಟಿಯಷ್ಟೇ ಫೇಮಸ್ಸು ರೊಟ್ಟಿಮುರುಕು. ಉತ್ತರ ಕರ್ನಾಟಕದ ಮಂದಿಗೆ, ಬೆಳಗ್ಗಿನ ನಾಷ್ಟಕ್ಕೂ, ರಾತ್ರಿ ಊಟಕ್ಕೂ ರೊಟ್ಟಿಮುರುಕು ಬೇಕೇಬೇಕು.

Advertisement

ಬೇಕಾಗುವ ಸಾಮಗ್ರಿ: ರೊಟ್ಟಿ 5-8, ಅಡುಗೆ ಎಣ್ಣೆ- 5-10 ಚಮಚ, ಈರುಳ್ಳಿ 1-2, ಹಸಿಮೆಣಸಿನಕಾಯಿ- 5, ಟೊಮೇಟೊ- 1, ಸಾಸಿವೆ ಮತ್ತು ಜೀರಿಗೆ ತಲಾ ಅರ್ಧ ಚಮಚ, ಕರಿಬೇವು 5-10, ಕೊತ್ತಂಬರಿ- 2 ಚಮಚ, ಶೇಂಗಾ- 2 ಚಮಚ, ಕಡಲೆ ಬೇಳೆ- 2 ಚಮಚ, ಬೆಳ್ಳುಳ್ಳಿ-4, ಹುಣಸೆ ರಸ -ಅರ್ಧ ಕಪ್‌, ಬೆಲ್ಲ -2 ಚಮಚ, ರುಚಿಗೆ ತಕ್ಕಷ್ಟು ಉಪ್ಪು , ಖಾರದಪುಡಿ, ಚಿಟಿಕೆ ಅರಶಿಣ, ಸಾಂಬಾರ ಮಸಾಲ- 1ಚಮಚ.

ಮಾಡುವ ವಿಧಾನ: ರೊಟ್ಟಿಯನ್ನು ಚೆನ್ನಾಗಿ ಮುರಿದಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆಗೆ ಜೀರಿಗೆ, ಸಾಸಿವೆ, ಶೇಂಗಾ, ಕಡಲೆಬೇಳೆ, ಕರಿಬೇವು, ಕೊತ್ತಂಬರಿ, ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೇಟೊವನ್ನು ಹಂತಹಂತವಾಗಿ ಹಾಕಿ ಹುರಿದುಕೊಳ್ಳಿ. ಬೇಯಿಸಿದ ಒಗ್ಗರಣೆಗೆ ಹುಣಸೆ ರಸ ಹಾಕಿ, ನಂತರ ಅದಕ್ಕೆ ಬೆಲ್ಲ, ಸ್ವಲ್ಪ ನೀರು ಹಾಕಿ. ನೀರು ಕುದಿಯಲು ಪ್ರಾರಂಭಿಸಿದಾಗ ಅದಕ್ಕೆ ಖಾರದಪುಡಿ, ಅರಿಶಿಣ, ಉಪ್ಪು, ಸಾಂಬಾರ ಮಸಾಲ ಹಾಕಿ. ಈಗಾಗಲೇ ಮುರಿದಿರುವ ರೊಟ್ಟಿ ಮುರುಕಗಳನ್ನು ನೀರಲ್ಲಿ 2-3 ಬಾರಿ ತೊಳೆದು, ಕುದಿಯವ ನೀರಿಗೆ ಹಾಕಿ ಕಲಸಿ. ನಂತರ ಮುಚ್ಚಳ ಮುಚ್ಚಿ 10-15 ನಿಮಿಷ ಬಿಡಿ. (ಇದೇ ವಿಧಾನದಲ್ಲಿ ರೊಟ್ಟಿಯ ಬದಲಿಗೆ ಚಪಾತಿ ಕೂಡ ಬಳಸಬಹುದು). ಮೊಸರಿನೊಂದಿಗೆ ತಿನ್ನಲು ಇದು ಬಲು ರುಚಿ.

2. ಜೋಳದ ಅಂಬಲಿ (ಗಂಜಿ)
ಹಿಟ್ಟಂ ತಿಂದಂ ಬೆಟ್ಟಂ ಕಿತ್ತಟ್ಟಂ ಎಂಬ ಗಾದೆ ಕೇವಲ ರಾಗಿಗೆ ಮಾತ್ರವಲ್ಲ, ಜೋಳಕ್ಕೂ ಅನ್ವಯಿಸುತ್ತೆ. ಉತ್ತರಕರ್ನಾಟಕ ಜನರನ್ನು ಗಟ್ಟಿಯಾಗಿ ಇರಿಸುವುದೇ ಜೋಳದ ಅಂಬಲಿ. ಆರು ತಿಂಗಳ ಹಸುಗೂಸಿನಿಂದ 5 ವರ್ಷದ ಮಕ್ಕಳವರೆಗೆ, ಎಲ್ಲ ವಯೋಮಾನದವರಿಗೂ ಇದು ಪೌಷ್ಟಿಕ ಆಹಾರವಾಗಿದೆ.

ಬೇಕಾಗುವ ಸಾಮಗ್ರಿ: ಜೋಳದ ಹಿಟ್ಟು- ಒಂದು ಕಪ್‌, ಜೀರಿಗೆ, ನೀರು,ಉಪ್ಪು, ಕರಿಬೇವು, ಬೆಳ್ಳುಳ್ಳಿ.
ಮಾಡುವ ವಿಧಾನ: ಬಾಣಲಿಗೆ ನೀರು ಹಾಕಿ ಕಾಯಿಸಲು ಇಡಿ. ಜೋಳದ ಹಿಟ್ಟನ್ನು ತಣ್ಣೀರಿನಲ್ಲಿ ಪೇಸ್ಟ್‌ನ ಹದಕ್ಕೆ ಕಲಸಿ. ಆ ಹಿಟ್ಟನ್ನು ಬಿಸಿನೀರಿಗೆ ಹಾಕಿ, ಚೆನ್ನಾಗಿ ಕಲಸಿ. ನಂತರ ಕರಿಬೇವು, ಜೀರಿಗೆ, ಜಜ್ಜಿದ ಬೆಳ್ಳುಳ್ಳಿ ಹಾಕಿ 5 ನಿಮಿಷ ಕುದಿಯಲು ಬಿಡಿ. ಇದನ್ನು ಮೊಸರಿನೊಂದಿಗೆ ಕುಡಿಯಬಹುದು.

3. ಜೋಳದ ನುಚ್ಚು.
ಜೋಳದ ನುಚ್ಚನ್ನು ಉತ್ತರ ಕರ್ನಾಟಕದ ಬೇಸಿಗೆ ಸ್ಪೆಷಲ್‌ ಅನ್ನಬಹುದು. ಬಿಸಿಲು ಜಾಸ್ತಿ ಇರುವ ದಿನಗಳಲ್ಲಿ, ದೇಹ ತಂಪಾಗಿ ಇರಲೆಂದು ಇದನ್ನು ತಯಾರಿಸುತ್ತಾರೆ.

ಬೇಕಾಗುವ ಸಾಮಗ್ರಿಗಳು: ಜೋಳದ ನುಚ್ಚು ,ನೀರು, ಉಪ್ಪು.
ಮಾಡುವ ವಿಧಾನ : ಬಾಣಲೆಯಲ್ಲಿ ಸ್ವಲ್ಪ ನೀರು ಕುದಿಸಿ. ಜೋಳದ ನುಚ್ಚನ್ನು ತೊಳೆದು, ಕುದಿಯುವ ನೀರಿಗೆ ಹಾಕಿ 15 ನಿಮಿಷ ನುಚ್ಚನ್ನು ಬೇಯಿಸಿ, ಉಪ್ಪು ಸೇರಿಸಿ. ಇದನ್ನು ಉಪ್ಪಿನಕಾಯಿ ಅಥವಾ ಸಾಂಬಾರಿನೊಂದಿಗೆ ಬೆರೆಸಿ, ಕುಡಿಯಬಹುದು.

-ಭಾಗ್ಯ ಎಸ್‌. ಬುಳ್ಳಾ

Advertisement

Udayavani is now on Telegram. Click here to join our channel and stay updated with the latest news.

Next