ಕಲಬುರಗಿ: ಈಗಷ್ಟೇ ಮುಗಿದಿರುವ ರಾಜ್ಯ ವಿಧಾನಸಭೆ ಚುನಾವಣೆ ನಂತರ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಎದುರಾಗಿದೆ. ಜೂನ್ 8ರಂದು ನಡೆಯುವ ಚುನಾವಣೆಗೆ ಪ್ರಮುಖವಾಗಿ
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ಕಸರತ್ತು ನಡೆಸಿವೆ.
ಬಿಜೆಪಿಯಿಂದ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಹಾಲಿ ಸದಸ್ಯ ಅಮರನಾಥ ಪಾಟೀಲ ಅವರಿಗೆ ಎರಡನೇ ಬಾರಿಗೆ ಅವಕಾಶ
ನೀಡದೆ ಬಳ್ಳಾರಿಯ ಕೆ.ಬಿ. ಶ್ರೀನಿವಾಸ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಶ್ರೀನಿವಾಸ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಹೊಸಪೇಟೆ ಉದ್ಯಮಿ, ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ಕೆ.ಬಿ. ಶ್ರೀನಿವಾಸ ನಗರದ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ಚುನಾವಣಾ ಧಿಕಾರಿ ಆಗಿರುವ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರಿಗೆ ನಾಮಪತ್ರ ಸಲ್ಲಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ ನಮೋಶಿ,ಎಚ್‌ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಕೆ.ಬಿ. ಶ್ರೀನಿವಾಸ ಅವರ ಧರ್ಮಪತ್ನಿ ರಾಣಿ ಸಂಯುಕ್ತಾದೇವಿ ಮತ್ತಿತರರು ಇದ್ದರು.
ಗೆಲುವು ನಿಶ್ಚಿತ: ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಹಿಂದಿನಿಂದ ಬಿಜೆಪಿ ಗೆಲ್ಲುತ್ತಾ ಬಂದಿದೆ. ಈ ಬಾರಿಯೂ ತಮ್ಮದೇ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಶ್ರೀನಿವಾಸ ಅವರು, ಈ ಭಾಗದ ವಿದ್ಯಾರ್ಥಿ, ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮೇಲ್ಮನೆಯಲ್ಲಿ ಧ್ವನಿ ಎತ್ತಿ ಪರಿಹಾರ ಕಲ್ಪಿಸಲು ಸ್ಪರ್ಧಿಸುತ್ತಿದ್ದೇನೆ. ಪದವೀಧರ ಮತದಾರರು ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸವಿದೆ. ಪಕ್ಷದ ಮುಖಂಡರು ಪ್ರಚಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.
ಡಾ| ಚಂದ್ರಶೇಖರ ಪಾಟೀಲ ಇಂದು ನಾಮಪತ್ರ ಸಲ್ಲಿಕೆ: ಹುಮಾನಾಬಾದ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಹುಮನಾಬಾದ ಅವರ ಸಹೋದರ ಡಾ| ಚಂದ್ರಶೇಖರ ಪಾಟೀಲ ಏ. 21ರಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಅದೇ ರೀತಿ ಜೆಡಿಎಸ್ ಅಭ್ಯರ್ಥಿಯಾಗಿ ಬಳ್ಳಾರಿಯ ಪ್ರತಾಪರೆಡ್ಡಿ ಸಹ ಸೋಮವಾರವೇ ನಾಮಪತ್ರ ಸಲ್ಲಿಸುತ್ತಿದ್ದಾರೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಯಚೂರಿನ ರಜಾಕ್ ಉಸ್ತಾದ್ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರವೇ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ 22ರಂದು ಕಡೆ ದಿನ
ಜೂನ್ 8ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 22ರಂದು ಕಡೆ ದಿನ. 23ರಂದು ನಾಮಪತ್ರಗಳ ಪರಿಶೀಲನೆ. 25ರಂದು ನಾಮಪತ್ರ ವಾಪಸ್ಸಾತಿಗೆ ಕಡೆ ದಿನ.ಜೂನ್ 8ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ, ಜೂ.12ರಂದು ಮತಗಳ ಎಣಿಕೆ.