Advertisement

ಉತ್ತರ ಕರ್ನಾಟಕದಲ್ಲಿ ಮುಂದುವರಿದ ಮಳೆ! ಸಾವಿರಾರು ಎಕರೆ ಬೆಳೆ ಜಲಾವೃತ

11:30 PM Sep 26, 2020 | sudhir |

ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಹುತೇಕ ಕಡೆ ಶುಕ್ರವಾರ ರಾತ್ರಿ ಬಳಿಕ ಭಾರೀ ಮಳೆಯಾಗಿದ್ದು, ನೂರಾರು ಮನೆಗಳು ಕುಸಿದು ಜನಜೀವನ ಅಸ್ತವ್ಯಸ್ತವಾಗಿದೆ. ಸಾವಿರಾರು ಎಕರೆ ಬೆಳೆ ಜಲಾವೃತವಾಗಿದೆ.

Advertisement

ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಎಲ್ಲೆರಿ ಗ್ರಾಮದಲ್ಲಿ ಹಳ್ಳ ದಾಟುತ್ತಿದ್ದಾಗ ದ್ವಿಚಕ್ರ ವಾಹನವೊಂದು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸವಾರರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಒಂಟಗೋಡಿ ಬಳಿ ಬೈಕ್‌ ಸವಾರ, ಡಿಸಿಸಿ ಬ್ಯಾಂಕ್‌ ಮುಧೋಳ ಶಾಖೆಯ ನೌಕರ ಸಂತೋಷ ಅಡವಿ (27) ಅವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ಬಳಿ ಲಾರಿಯೊಂದು ನೀರಿನಲ್ಲಿ ಕೊಚ್ಚಿಹೋಗಿದೆ.

ಕಲ್ಯಾಣ ಕರ್ನಾಟಕದಲ್ಲಿ ಜೋರು
ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು, ಅಪಾರ ಹಾನಿ ಉಂಟಾಗಿದೆ. ಕಲಬುರಗಿ -ಸೇಡಂ ಮತ್ತು ಚಿಂಚೋಳಿ -ಬೀದರ್‌ ನಡುವಿನ ರಸ್ತೆ ಸಂಚಾರ ಕಡಿತವಾಗಿದೆ. ಸೇಡಂ ತಾಲೂಕಿನ ಕಾಗಿಣಾ ನದಿಯ ಮಳಖೇಡ ಬಳಿಯ ಸೇತುವೆ ಮುಳುಗಿದೆ.

ಗಡಿನಾಡು ಬೀದರ್‌ನ ಬಹುತೇಕ ತಾಲೂಕುಗಳು ಮಳೆಯಿಂದ ನಲುಗಿವೆ. ನೂರಾರು ಮನೆಗಳು ಕುಸಿದಿವೆ. ಎನಗುಂದಾ-ಚಿಂತಾಕಿ, ಕಮಲನಗರ- ತೋರಣಾ ಮತ್ತು ಬೆಳಕುಣಿ ಸೇತುವೆಗಳು ಮುಳುಗಡೆಯಾಗಿ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

ರಾಯಚೂರು ಜಿಲ್ಲೆಯಲ್ಲೂ ಮಳೆ ಜೋರಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಗ್ರಾಮೀಣ ಭಾಗಳು ದ್ವೀಪದಂತಾಗಿವೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಕೃಷ್ಣಾ ನದಿಗೆ 1.55 ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗಿದೆ.

Advertisement

ಯಾದಗಿರಿ ಜಿಲ್ಲೆಯಲ್ಲೂ ಅಪಾರ ಹಾನಿಯಾಗಿದೆ. ಶಹಾಪುರ ತಾಲೂಕಿನ ಬೀರನೂರ ಹೋಬಳಿಯಲ್ಲಿ ರಾಜ್ಯದಲ್ಲಿಯೇ ದಾಖಲೆಯ 144 ಮಿ.ಮೀ. ಮಳೆಯಾಗಿದೆ.

ಬಾಗಲಕೋಟೆ, ಬೆಳಗಾವಿ, ಧಾರವಾಡ, ವಿಜಯಪುರ, ಗದಗ ಜಿಲ್ಲೆಯಲ್ಲೂ ಸತತ ಮಳೆಯಿಂದಾಗಿ ನೂರಾರು ಎಕರೆ ಬೆಳೆ ನಾಶವಾಗಿದ್ದು, ಹಲವೆಡೆ ರಸ್ತೆ ಸಂಪರ್ಕ ಕಡಿತ ಗೊಂಡಿದೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಾವೇರಿ ಜಿಲ್ಲಾ ದ್ಯಂತ ಶನಿವಾರ ಜಿಟಿಜಿಟಿ ಮಳೆಯಾಗಿದೆ.

ಮಧ್ಯ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ಕಲ್ಯಾಣ ಕರ್ನಾಟಕದ ಬಳ್ಳಾರಿ, ಕೊಪ್ಪಳ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next