ನಾರ್ಬರ್ಟ್ ವೀನರ್, ಹೆಸರಾಂತ ಗಣಿತಜ್ಞ. ಅಮೆರಿಕಾದ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಗಣಿತ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ಸೈಬರ್‌ನೆಟಿಕ್ಸ್‌ನ ಜನಕ ಎಂದೇ ಇವರನ್ನು ಜಗತ್ತು ನೆನೆಯುತ್ತದೆ. ಆದರೆ, ಪ್ರತಿಯೊಬ್ಬ ಶ್ರೇಷ್ಠ ವ್ಯಕ್ತಿಗೂ ಒಂದು ನೆಗೆಟಿವ್ ಸೈಡ್ ಇರಬೇಕಲ್ಲ? ಪಾಂಡಿತ್ಯದಲ್ಲಿ ವೀನರ್ ಎಷ್ಟು ಮೇಲ್ಮಟ್ಟದವರೋ ಗಾಡಿ ಓಡಿಸುವುದರಲ್ಲಿ ಅಷ್ಟೇ ಅಪಾಯಕಾರಿ ಮನುಷ್ಯ! ವೀನರ್‌ಗೆ ದೃಷ್ಟಿದೋಷವಿತ್ತು. ಸಮೀಪದ ವಸ್ತುಗಳು ಅವರಿಗೆ ಕಾಣಿಸುತ್ತಿರಲಿಲ್ಲ. ಜೊತೆಗೆ ಅವರು ಮರೆಗುಳಿ (ಆಬ್ಸೆಂಟ್ ಮೈಂಡೆಡ್) ಪ್ರಾಧ್ಯಾಪಕ ಎಂದೂ ಹೆಸರು ಮಾಡಿದವರು.
ಅದೊಮ್ಮೆ ಒಬ್ಬ ಫ್ರೆಂಚ್ ಗಣಿತಜ್ಞ ಎಂಐಟಿಗೆ ಬಂದ. ಕೆಲವು ದಿನ ಅವನು ಅಲ್ಲೇ ಉಳಿದುಕೊಳ್ಳುವ ಕಾರ್ಯಕ್ರಮವಿತ್ತು. ಹೊರದೇಶಗಳಿಂದ ಬಂದ ಸಂದರ್ಶಕ ಪ್ರಾಧ್ಯಾಪಕರನ್ನು ಎಂಐಟಿಯ ಆಸುಪಾಸಿನಲ್ಲಿ ನಡೆಯುವ ವಿಶೇಷ ಪಾರ್ಟಿಗಳಿಗೆ ಅತಿಥಿಗಳಾಗಿ ಕರೆಯುವುದು ಅಲ್ಲಿನ ಸಂಪ್ರದಾಯ. ಹಾಗೆ ಆ ಫ್ರೆಂಚ್ ಗಣಿತಜ್ಞನಿಗೂ ಒಂದು ಪಾರ್ಟಿಗೆ ಆಮಂತ್ರಣ ಬಂತು. ಹೊರಗಿನಿಂದ ಬಂದವರನ್ನು ವಿಶೇಷ ಮುತುವರ್ಜಿಯಿಂದ ನೋಡಿಕೊಳ್ಳುವುದು ಶಿಷ್ಟಾಚಾರ ತಾನೆ? ವೀನರ್ ಅಂಥ ಶಿಷ್ಟಾಚಾರದಲ್ಲಿ ಎತ್ತಿದ ಕೈ! ಅವರು ಆ ಫ್ರೆಂಚ್ ಬಳಿ ಬಂದು ಪಾರ್ಟಿಗೆ ತಾನೇ ಕರೆದೊಯ್ಯುತ್ತೇನೆಂದು ಹೇಳಿದರು.
ಆ ದಿನ ವೀನರ್ ತಮ್ಮ ಕಾರಿನೊಂದಿಗೆ ಫ್ರೆಂಚ್ ಗಣಿತಜ್ಞನೆದುರು ಪ್ರತ್ಯಕ್ಷರಾದರು. ಆತ ಕೃತಜ್ಞತೆ ಸಲ್ಲಿಸಿ ಅವರ ಜೊತೆ ಕೂತ. ವೀನರ್ ಅವರ ಡ್ರೆçವಿಂಗ್ ಪ್ರತಿಭೆಯ ಬಗ್ಗೆ ಅವನಿಗೆ ಏನೇನೂ ಗೊತ್ತಿರಲಿಲ್ಲ! ಆದರೆ ಗೊತ್ತಾಗಲು ಹೆಚ್ಚು ಹೊತ್ತೇನೂ ಬೇಕಾಗಲಿಲ್ಲ. ಕಾರು ರಸ್ತೆಗಿಳಿದ ಮೇಲೆ ಅಡ್ಡಾದಿಡ್ಡಿಯಾಗಿ ಓಡಾಡತೊಡಗಿತು. ವಿಪರೀತ ವೇಗ ಬೇರೆ! ಇದೇ ಕಲಿಯುಗದ ಕೊನೆ ದಿನ ಎಂಬಂತೆ ಕಾರು ಓಡತೊಡಗಿತು. ಇನ್ನೇನು ಗುದ್ದಿಯೇಬಿಟ್ಟಿತು ಎಂಬಂಥ ಹಲವು ಸಂದರ್ಭಗಳನ್ನು ಹೇಗೋ ದೈವಕೃಪೆಯಿಂದ ತಪ್ಪಿಸಿಕೊಂಡು ನಾಗಾಲೋಟಕಿತ್ತಿದ್ದ ಕಾರು ಕೊನೆಗೆ ಒಂದು ಟೆಲಿಫೋನ್ ಕಂಬಕ್ಕೆ ಹೋಗಿ ಧಡ್ ಎಂದು ಬಡಿಯಿತು. ಪುಣ್ಯವಶಾತ್ ಆ ಫ್ರೆಂಚ್ ಗಣಿತಜ್ಞನಿಗೆ ಏನೂ ಅಪಾಯ ಎದುರಾಗಲಿಲ್ಲ.
ಜಖಂಗೊಂಡ ಕಾರಿನ ಬಳಿ ಪೊಲೀಸರು ಬಂದರು. ವೀನರ್ ಕಾರಿನಿಂದಿಳಿದು ಪೊಲೀಸರಿಗೆ ಅಪಘಾತದ ವಿವರ ಕೊಡತೊಡಗಿದರು. ಬದುಕಿದೆಯಾ ಬಡಜೀವವೇ ಎಂದುಕೊಂಡ ಆ ಫ್ರೆಂಚ್ ಬೇಗ ಬೇಗ ಹೆಜ್ಜೆಹಾಕುತ್ತ ನಡೆದು ಕೊನೆಗೆ ಪಾರ್ಟಿ ನಡೆಯುತ್ತಿದ್ದ ಸ್ಥಳ ಸೇರಿದ. ಆತ ಪಾರ್ಟಿಯ ಅಂಗಣಕ್ಕೆ ಹೋಗಿ ಎರಡು ಗಂಟೆ ಹೊತ್ತಾಗಿರಬೇಕು. ಮದ್ಯದ ಗ್ಲಾಸ್ ಹಿಡಿದು ಯಾರೊಡನೆಯೋ ಗಹನ ಚರ್ಚೆಯಲ್ಲಿ ತಲ್ಲೀನನಾಗಿದ್ದ ಆ ಫ್ರೆಂಚನ ಮುಖದ ಮುಂದೆ ಧುತ್ತನೆ ಒಂದು ಮುಖ ಕಾಣಿಸಿಕೊಂಡಿತು. ನೋಡಿದರೆ ವೀನರ್! ಹಲೋ ಗಣಿತಜ್ಞರೆ! ನಿಮ್ಮನ್ನು ಪಾರ್ಟಿಗೆ ಕರೆತಂದ ಮೇಲೆ ವಾಪಸ್ ಮನೆವರೆಗೆ ಕಳಿಸಿಕೊಡದಿದ್ದರೆ ಹೇಗೆ! ಅದಕ್ಕಾಗಿಯೇ ಬೇರೊಂದು ಕಾರು ಅರೇಂಜ್ ಮಾಡಿಕೊಂಡು ತಂದಿದ್ದೇನೆ ಎಂದರು ವೀನರ್.
– ರೋಹಿತ್ ಚಕ್ರತೀರ್ಥ