Advertisement

ನೂಜಿಬಾಳ್ತಿಲ ಶಾಲೆ: ವಿವಿಧ ಬಗೆಯ ತರಕಾರಿ ತೋಟ

09:54 AM Nov 24, 2019 | mahesh |

ಕಲ್ಲುಗುಡ್ಡೆ: ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿಯೇ ಸಮೃದ್ಧ ತರಕಾರಿ ಕೃಷಿಯ ಕೈ ತೋಟ ನಿರ್ಮಿಸಿ, ಮಧ್ಯಾಹ್ನದ ಬಿಸಿಯೂಟಕ್ಕೆ ಅನುಕೂಲವಾಗುವಂತೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆದು ಮಾದರಿಯಾಗಿದ್ದಾರೆ ಈ ಶಾಲೆಯವರು.

Advertisement

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವಿಶೇಷ ತರಕಾರಿ ಕೈ ತೋಟವನ್ನು ಮಾಡಿದ್ದು, ಇದೀಗ ತರಕಾರಿ ಯಥೇತ್ಛವಾಗಿ ಬೆಳೆದು ಫ‌ಸಲು ಬಂದಿದೆ. ಶ್ರಮಪಟ್ಟ ತಂಡ ಇದೀಗ ಸಂತೋಷದ ನಗೆ ಬೀರಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 150ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಶಾಲಾ ಆವರಣದ ಖಾಲಿ ಜಾಗದಲ್ಲಿ ತರಕಾರಿ ಬೆಳೆಯಲಾಗಿದೆ.  ರಕ್ಷಣೆಯ ದೃಷ್ಟಿಯಿಂದ ಕೈ ತೋಟಕ್ಕೆ ಸುತ್ತ ತಡೆಬೇಲಿ ನಿರ್ಮಿಸಲಾಗಿದೆ.

ವಿವಿಧ ಬಗೆಯ ತರಕಾರಿ
ಇಲ್ಲಿ ನಿರ್ಮಿಸಲಾದ ತರಕಾರಿ ತೋಟದಲ್ಲಿ ಅಲಸಂಡೆ, ಬಸಳೆ, ಬೆಂಡೆಕಾಯಿ, ಬದನೆ, ತೊಂಡೆಕಾಯಿ ಸಹಿತ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯಲಾಗಿದೆ. ಸ್ಥಳೀಯವಾಗಿ ತರಕಾರಿ ಬೀಜಗಳನ್ನು ಪಡೆದು ಶಾಲಾ ಆವರಣದಲ್ಲಿಯೇ ಕೈತೋಟ ರಚಿಸಲಾಗಿದೆ.

ಎಸ್‌ಡಿಎಂಸಿ ಪ್ರಯತ್ನ
ಸರಕಾರಿ ಶಾಲೆಯಲ್ಲಿ ಈ ವಿನೂತನ ತರಕಾರಿ ತೋಟ ನಿರ್ಮಿಸಿರುವುದರ ಹಿಂದೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪ್ರಯತ್ನವಿದೆ. ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಗೌಡ ಅವರ ನೇತೃತ್ವದಲ್ಲಿ ತರಕಾರಿ ತೋಟ ರಚಿಸಲಾಗಿದೆ. ಶಾಲಾ ಶಿಕ್ಷಕರ, ಹೆತ್ತವರ ಸಹಕಾರದೊಂದಿಗೆ, ನೂಜಿಬಾಳ್ತಿಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸದಸ್ಯರ ಶ್ರಮದಾನವನ್ನು ಪಡೆಯಲಾಗಿದೆ. ಇದೀಗ ತರಕಾರಿ ತೋಟಕ್ಕೆ ಸ್ವತಃ ಎಸ್‌ಡಿಎಂಸಿ ಅಧ್ಯಕ್ಷರೇ ನೀರು ಹಾಯಿಸಲು ಮುತುವರ್ಜಿ ವಹಿಸಿದ್ದಾರೆ. ಜತೆಗೆ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಮಿತಿಯವರು ಕೈಜೋಡಿಸುತ್ತಿದ್ದಾರೆ. ತರಕಾರಿ ಬೆಳೆದು ಫ‌ಸಲು ಬಂದಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಜಾಸ್ತಿಯಾದ್ದಲ್ಲಿ ಅಂಗಡಿಗಳಿಗೆ ಕೊಟ್ಟು ಬದಲಿ ತರಕಾರಿ ಪಡೆಯಲಾಗುತ್ತದೆ ಎನ್ನುತ್ತಾರೆ ಶಿಕ್ಷಕರು.

ಮಾದರಿ ನಡೆ
ಕೃಷಿಯಲ್ಲಿ ಆಸಕ್ತಿ ಕಳೆದು ಕೊಳ್ಳುತ್ತಿರುವ ಈ ಕಾಲದಲ್ಲಿ ಶಾಲೆ ಯಲ್ಲಿಯೇ ತರಕಾರಿ ತೋಟ ನಿರ್ಮಿಸಿ, ಶಾಲಾ ಬಳಕೆಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಇಂತಹ ಪ್ರಯತ್ನಗಳಿಂದ ವಿದ್ಯಾರ್ಥಿಗಳಲ್ಲಿಯೂ ಕೃಷಿಯ ಕುರಿತು ಆಸಕ್ತಿ ಬೆಳೆಯಲು ಸಾಧ್ಯವಾಗಲಿದೆ.

Advertisement

ಅಧ್ಯಕ್ಷರ ಪ್ರಯತ್ನ
ನಮ್ಮ ಶಾಲೆಯಲ್ಲಿ ಸುಂದರವಾದ ತರಕಾರಿ ತೋಟ ನಿರ್ಮಿಸಿದ್ದು, ಇದೀಗ ಫ‌ಸಲು ಬಂದು ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಗೌಡ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೂ ಪ್ರತಿದಿನ ಬಗೆ ಬಗೆಯ ತರಕಾರಿಯಿಂದ ತಯಾರಿಸಿದ ಪದಾರ್ಥ ಸೇವಿಸಬಹುದಾಗಿದೆ.
– ಶ್ರೇಯಾನ್ಸ್‌ ಎಚ್‌.ಎಸ್‌.  ಮುಖ್ಯ ಶಿಕ್ಷಕ, ನೂಜಿಬಾಳ್ತಿಲ

ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next