ರವಿಚಂದ್ರನ್ ಕನಸುಗಾರ. ಇದು ಗೊತ್ತಿರದ ವಿಷಯವೇನಲ್ಲ. ಅವರು ಕಂಡ ಬೆಟ್ಟದಷ್ಟು ಕನಸುಗಳಲ್ಲಿ ಅದೆಷ್ಟೋ ನನಸಾಗಿವೆ. ಅವರು ಕೊಟ್ಟ ಯಶಸ್ಸುಗಳ ಸರಮಾಲೆ ಕಣ್ಣ ಮುಂದಿವೆ. ಈಗ ರವಿಚಂದ್ರನ್ ಅವರ ಮೂರು ದಶಕದ ಕನಸೊಂದು ನನಸಾಗುವ ಸಮಯ ಹತ್ತಿರವಾಗುತ್ತಿದೆ. ಆ ಕನಸು ಬೇರೇನೂ ಅಲ್ಲ, ನಾನ್‌ಸ್ಟಾಪ್ ಮ್ಯೂಸಿಕಲ್ ಸಿನಿಮಾ ಮಾಡಬೇಕೆಂಬುದೇ ಅವರ ಬಹುದೊಡ್ಡ ಕನಸು. ಆ ಕನಸು ಕುರಿತು ರವಿಚಂದ್ರನ್ ಹೇಳಿದ್ದಿಷ್ಟು…
* ಅದು “ಪ್ರೇಮಲೋಕ’ ನಂತರದ ಆಸೆ. 1986 ರ ಆಸುಪಾಸಿನಲ್ಲಿ ನಾನ್‌ಸ್ಟಾಪ್ ಮ್ಯೂಸಿಕಲ್ ಸಿನಿಮಾ ಮಾಡಬೇಕು ಎಂಬ ಆಸೆ ಹುಟ್ಟುಕೊಂಡಿತು. ಬೇಸಿಕಲಿ ನಾನು ಒಂದು ವಿಷಯ ಯೋಚಿಸಿ, ಅದನ್ನು ಮನಸ್ಸಿಗೆ ಹಾಕಿಕೊಂಡರೆ, ಅದು ಒಳಗೊಳಗೇ ಚರ್ಚೆ ನಡೆಸುತ್ತಿರುತ್ತೆ. ಅದು ನನಗೂ ಗೊತ್ತಿರಲ್ಲ. ಆ ಹುಡುಕಾಟ ನನ್ನೆದೆಯಲ್ಲಷ್ಟೇ ಇರುತ್ತೆ. ನಾನು ಹಂಸಲೇಖರನ್ನ ಬಿಡುವ ಸಮಯದಲ್ಲಿ ನನಗೊಂದು ರಾತ್ರಿ ಕನಸು ಬೀಳುತ್ತೆ. ಆಗ ಎದ್ದೇಳುತ್ತೇನೆ. ತಕ್ಷಣವೇ, ಬರೆಯಲು ಕೂರುತ್ತೇನೆ. ಹಾಗೆ ಬರೆದಾಗ, ಒಂದೊಳ್ಳೆಯ ಕಥೆ ಹುಟ್ಟುಕೊಳ್ಳುತ್ತೆ. ಫ್ರೇಮ್ ಟು ಫ್ರೇಮ್ ಕಥೆ ರೆಡಿ ಮಾಡಿದ್ದು ಗೊತ್ತೇ ಆಗಲಿಲ್ಲ. ನನ್ನ ಕೈಗಳೆಲ್ಲವೂ ಬೆವರಿದ್ದವು. ಕೇವಲ ಒಂದೂವರೆ ತಾಸಿನಲ್ಲೇ ಆ ರಾತ್ರಿ ಕಥೆ ರೆಡಿಯಾಗಿತ್ತು.
* ನಾನು ಮ್ಯೂಸಿಕಲ್ ಸಿನಿಮಾ ಮಾಡಬೇಕು ಎಂಬ ಆಸೆ ಬಂದಾಗಲೇ, ಸ್ಟುಡಿಯೋ ಕಟ್ಟಿದ್ದು, ಏನೇನೋ ಪ್ರಯತ್ನ ನಡೆಸಿದ್ದು. ಆದರೆ, ಅದ್ಯಾವುದೂ ನಾನು ಅಂದುಕೊಂಡಂತೆ ಆಗಲಿಲ್ಲ. ಎಲ್ಲವೂ ರೆಕಾರ್ಡ್ ಆಗುತ್ತಿತ್ತು. ಹಣ ಖರ್ಚು ಆಗುತ್ತಿತ್ತು. ಯಾರಿಗೂ ಹೇಳಲಿಲ್ಲ. ಯಾಕೆಂದರೆ, ಅದು ಒಂದು ಶೇಪ್ ಆಗಬೇಕಿತ್ತು. ಇಡೀ ಸಿನಿಮಾ ಸೌಂಡ್ ಎಫೆಕ್ಟ್ ವಿತ್ ರೆಕಾರ್ಡ್ ಆಗಬೇಕು. ಹೇಗೆಂದರೆ, ಗಾಳಿ ಸೌಂಡ್ ಬರುತ್ತೆ ಅಂದ್ರೆ ಗಾಳಿ ಸೌಂಡ್ ಕೇಳಿಸಬೇಕು. ಶೂ ಅಂದ್ರೆ, ಶೂ ಸೌಂಡ್ ಕೇಳಿಸಬೇಕು. ಗಡಿಯಾರ ಬಡಿದುಕೊಳ್ಳುತ್ತೆ ಅಂದ್ರೆ, ಅದರ ಸೌಂಡ್ ಹಾಕಬೇಕು. ಶೇ.60 ರಷ್ಟು ಎಫೆಕ್ಟ್ಸ್ ಹಾಕಬೇಕು. ಉಳಿದ ಶೇ.40 ರಷ್ಟು ಆಮೇಲೆ ಮಾಡ್ಕೊಬಹುದು. 2 ಗಂಟೆಗೆ ರೆಕಾರ್ಡ್ ಆಗಬೇಕು. ಸಿನಿಮಾ ಏನಿದೆ ಅನ್ನೋದು ಇಲ್ಲಿ ಕಾಣಿಸಬೇಕು. ಒಬ್ಬ ನಗ್ತಾನೆ, ನಡೆದುಕೊಂಡು ಬರ್ತಾನೆ ಅಂದರೆ ಫ್ರೇಮ್‌ನಲ್ಲಿ ಇರಬೇಕು ಅದು. ಅದು ನನ್ನ ಒನ್ ಆಫ್ ದಿ ಡ್ರೀಮ್ ಥಾಟ್. ಆದರೆ ಅದು ಶೇಪ್ ಆಗಲಿಲ್ಲ. ಮಾಡೋಕು ಸಾಧ್ಯವಾಗಲಿಲ್ಲ.
* ನನ್ನ ಮಗಳ ಹುಟ್ಟುಹಬ್ಬದ ದಿನ ಆ ಕನಸು ಚಿಮ್ಮಿದೆ. ಅ.18 ರಂದು ಮಗಳ ಬರ್ತ್‌ಡೇ. ಅಂದೇ ನನಗೆ ಡಾಕ್ಟರೇಟ್ ಕೊಡುತ್ತಿದ್ದೇವೆ ಎಂಬ ಫೋನ್ ಕಾಲ್ ಬರುತ್ತೆ. ಅದೇ ದಿನ ನಾನು ನನ್ನ ಕನಸಿನ ನಾನ್‌ಸ್ಟಾಪ್ ಮ್ಯೂಸಿಕಲ್ ಸಿನಿಮಾ ಕೆಲಸಕ್ಕೂ ಮುಂದಾಗ್ತಿàನಿ. ಸಂಗೀತ ನಿರ್ದೇಶಕ ಗೌತಮ್ ಸೇರಿದಂತೆ ಒಂದಷ್ಟು ಮಂದಿಯನ್ನು ಕರೆದೆ. ಸುಮಾರು 2 ಸಾವಿರ ಟ್ಯೂನ್ ಕಂಪೋಸ್ ಮಾಡಿಟ್ಟಿದ್ದನ್ನೆಲ್ಲಾ ಕೇಳಿಸಿದ್ದೇನೆ. ನಾನು ಅಂದು, ಇದನ್ನೇ ಬರೆಯುತ್ತೇನೆ ಅಂದುಕೊಂಡಿರಲಿಲ್ಲ. ಒಂದುವರೆ ಗಂಟೆಯಲ್ಲೇ ಕಥೆ ಬರೆದೆ. ಯಾವುದೇ ಸೀನ್ ಇರದೆ, ಹಾಡಲ್ಲೇ ಸಿನಿಮಾ ತೋರಿಸುತ್ತೇನೆ.
ಎರಡು ಗಂಟೆ ಸಂಗೀತವೇ ಇರುತ್ತೆ. ಅದು ಯಾರಿಗೂ ಬೋರ್ ಎನಿಸಬಾರದು. ಪ್ರತಿಯೊಂದು ಮ್ಯೂಸಿಕಲ್‌ನಲ್ಲೇ ಹೇಳಬೇಕು. ಸಾಂಗ್ ಮೂಲಕ ಸಿನಿಮಾ ಕಥೆ ಹೇಳಿಕೊಂಡು ಹೋಗಬೇಕು. ನನ್ನೊಳಗಿದ್ದ 30 ವರ್ಷದ ಪ್ರಶ್ನೆಗೆ ಈಗ ಒಂದು ದಾರಿ ಸಿಕ್ಕಿದೆ. “ರಾಜೇಂದ್ರ ಪೊನ್ನಪ್ಪ’, “ರವಿ ಬೋಪಣ್ಣ’ ಮುಗಿಯಬೇಕು ಜನವರಿ ನಂತರ ಮ್ಯೂಸಿಕ್‌ಗೆ ಕೂರುತ್ತೇನೆ. ಅದಕ್ಕೇ ಸಮಯ ಕೊಡ್ತೀನಿ. ಒಂದು ವರ್ಷ ಬರೀ ಸಂಗೀತಕ್ಕೆ ಸೀಮಿತ. ಒಂದು ಶೇಪ್ ಬರೋವರೆಗೆ ಕೆಲಸ ಆಗುತ್ತೆ. ಆ ಸಿನಿಮಾ ಎಲ್ಲಾ ಭಾಷೆಯಲ್ಲೂ ಬರುತ್ತೆ. ವಿಶ್ವದಾದ್ಯಂತ ಚಿತ್ರ ಬಿಡುಗಡೆ ಮಾಡ್ತೀನಿ. ಅ.18 ರಿಂದ ನನ್ನಲ್ಲಿ ಒಂದು ಬದಲಾವಣೆ ಆಗಿದೆ. ಬರೀ ಮಾತಲ್ಲಿ ಉತ್ತರಿಸಲ್ಲ. ಪರದೆ ಮೇಲೆ ನನ್ನ ಉತ್ತರ ಇರುತ್ತೆ. ಬಹುಶಃ ಆ ಸಿನಿಮಾ 2021, 2021 ಕ್ಕೆ ಆಗಬಹುದೇನೋ ಗೊತ್ತಿಲ್ಲ.
* ಎಲ್ಲರೂ ಮಣ್ಣಲ್ಲಿ ಬೀಜ ನೆಡುತ್ತಾರೆ. ನಾನು ಹೃದಯದಲ್ಲಿ ನೆಟ್ಟಿದ್ದೇನೆ. ನನಗೆ ಮಣ್ಣಿನ ಋಣವಿಲ್ಲ. ಹಾಗಾಗಿ ಮಣ್ಣನ್ನು ಖರೀದಿಸಿಲ್ಲ. ಹಣ್ಣು ಕೊಡುತ್ತೆ ಎಂಬ ನಂಬಿಕೆ ಇದೆ. ಯಾವಾಗ ಕೊಡುತ್ತೋ ಗೊತ್ತಿಲ್ಲ. ಈಗ ಆ ಸಮಯ ಬಂದಿದೆ ಅಂದುಕೊಂಡಿದ್ದೇನೆ. ಅದೊಂದು ಲವ್ ಸಬ್ಜೆಕ್ಟ್ ಆಗಿರುತ್ತೆ.ನನ್ನ ಮಗಳ ಬರ್ತ್‌ಡೇ ದಿನ ಆದ ಖುಷಿ, ನನ್ನ ವೃತ್ತಿ ಜೀವನದಲ್ಲೆಂದೂ ಆಗಿಲ್ಲ. ಸಕ್ಸಸ್ ಬಂದಾಗಲೂ ನಾನು ಅಷ್ಟೊಂದು ಖುಷಿ ಆಗಿಲ್ಲ. ನಾನ್‌ಸ್ಟಾಪ್ ಮ್ಯೂಸಿಕಲ್ ಸಿನಿಮಾ ನನ್ನ ಸ್ವಂತದ್ದು. “ಏಕಾಂಗಿ’ ರೀತಿಯ ಚಿತ್ರವದು. “ಏಕಾಂಗಿ’,”ಅಪೂರ್ವ’ ಹೊಸ ತರಹದ ಚಿತ್ರಗಳು. ಈ ಸಿನಿಮಾ ಕೂಡ ಅಪರೂಪದ ಚಿಂತನೆ ಇರುವಂಥದ್ದು. ಎರಡು ಗಂಟೆ ಹಾಡಲ್ಲೇ ಸಿನಿಮಾ ಕಟ್ಟಿಕೊಡೋದು ಚಾಲೆಂಜ್.