“ಈ ಚಿತ್ರ ನನ್ನ ಗೆಳೆಯರಿಗಲ್ಲ, ಹಿತೈಷಿಗಳಿಗಲ್ಲ, ಹೊಗಳುವವರಿಗಲ್ಲ, ಸಿನಿಮಾದವರಿಗೂ ಅಲ್ಲ…!
-ಹೀಗೆ ಹೇಳಿಕೊಂಡ ನಿರ್ದೇಶಕ ಗಿಣಿ, “ಇದು ಹೊಸಬರಿಗೆ ಹಾಗೂ ಗೊತ್ತಿಲ್ಲದವರಿಗೆ ಮಾಡಿರುವ ಚಿತ್ರ’ ಅಂತ ಹೇಳಿ ಕ್ಷಣ ಕಾಲ ಸುಮ್ಮನಾದರು. ಅವರು ಹೇಳಿದ್ದು ತಮ್ಮ ನಿರ್ದೇಶನದ “19 ಏಜ್ ನಾನ್ಸೆನ್ಸ್’ ಬಗ್ಗೆ. ಹೌದು, ಇಂದು ಈ ಚಿತ್ರ ಬಿಡಗುಡೆಯಾಗಿದೆ. ತಮ್ಮ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟ ನಿರ್ದೇಶಕ ಗಿಣಿ, “ಈ ಚಿತ್ರವನ್ನು ಹೊಸಬರು ನೋಡಬೇಕು. ಸಿನಿಮಾ ಭಾಷೆ ಗೊತ್ತಿಲ್ಲದವರು ಬರಬೇಕು. ಶೀರ್ಷಿಕೆ ನೋಡಿ, ಬರೀ ಆ ಏಜ್‌ನವರು ಮಾತ್ರವಲ್ಲ, ಎಲ್ಲಾ ವರ್ಗದವರೂ ಈ ಚಿತ್ರ ನೋಡಬೇಕು. ಇದು ಈಗಿನ ಟ್ರೆಂಡ್ ಕಥೆ ಹೊಂದಿರುವ ಸಿನಿಮಾ. ಪಕ್ಕಾ ಯೂಥ್ ಮನದಲ್ಲಿಟ್ಟುಕೊಂಡು ಚಿತ್ರ ಮಾಡಿದ್ದೇನೆ. ಈಗಾಗಲೇ ಸಿನಿಮಾ ನೋಡಿರುವ ತಮಿಳು ಚಿತ್ರರಂಗದ ಗೆಳೆಯರು, ತಮಿಳಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು ಮಾತುಕತೆ ನಡೆಸಿದ್ದಾರೆ. ಈಗಾಗಲೇ ಟ್ರೇಲರ್, ಹಾಡುಗಳಿಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ’ ಎಂದರು ನಿರ್ದೇಶಕ ಗಿಣಿ.
ಈ ಚಿತ್ರದ ಮೂಲಕ ನಾಯಕರಾಗಿರುವ ಮನುಶ್ ಅವರಿಗೆ ಇದು ಮೊದಲ ಚಿತ್ರ. ತಮ್ಮ ಅನುಭವ ಹಂಚಿಕೊಂಡ ಅವರು, “ಇದು ಹೊಸ ಬಗೆಯ ಕಥೆ ಹೊಂದಿದೆ. ಟೀನೇಜ್ ಹುಡುಗರ ಪ್ರೀತಿಯ ಕಥೆ ಮತ್ತು ವ್ಯಥೆ ಇಲ್ಲಿದೆ. ನಾನಿಲ್ಲಿ ಕಾಲೇಜ್ ಹುಡುಗನಾಗಿ ನಟಿಸಿದ್ದೇನೆ. ಕಾಲೇಜ್ ಇದೆ, ಕಾಲೇಜ್ ಸ್ಟೋರಿ ಇಲ್ಲ. ಲವ್ ಇದೆಯಾದರೂ ಪೂರ್ಣ ಪ್ರಮಾಣದ ಲವ್‌ಸ್ಟೋರಿ ಇಲ್ಲ. ಇದು ಎಲ್ಲವನ್ನೂ ಒಳಗೊಂಡಿರುವಂತಹ ಚಿತ್ರ. ಚಿತ್ರಕ್ಕೆ ಬರುವ ಮುನ್ನ ಡ್ಯಾನ್ಸ್, ಫೈಟ್,ನಟನೆ ತರಬೇತಿ ಪಡೆದು ಬಂದಿದ್ದೇನೆ. ನಿಮ್ಮೆಲ್ಲರ ಬೆಂಬಲ ಇರಲಿ’ ಎಂದರು ಮನುಶ್.
ನಾಯಕಿ ಮಧುಮಿತ ಅವರಿಗೆ ಇದು ಕನ್ನಡದಲ್ಲಿ ಮೊದಲ ಚಿತ್ರ. ಈ ಹಿಂದೆ ತಮಿಳಿನ ಒಂದು ಚಿತ್ರದಲ್ಲಿ ನಟಿಸಿರುವ ಅವರಿಗೆ ಈ ಚಿತ್ರದಲ್ಲಿ ಕಾಲೇಜ್ ಹುಡುಗಿಯ ಪಾತ್ರ ಸಿಕ್ಕಿದೆಯಂತೆ. “ಇದು ಲವ್ ಕಮ್ ಆಕ್ಷನ್ ಹೊಂದಿರುವ ಪ್ರೇಮಕಥಾಹಂದರ ಹೊಂದಿರುವ ಚಿತ್ರ. 19 ರಿಂದ 25 ವಯೋಮಿತಿ ಇರುವ ಹರೆಯದ ವಯಸ್ಸಿನ ನಾಯಕಿಯೊಬ್ಬಳ ಬದುಕಿನಲ್ಲಿ ನಡೆಯುವ ಘಟನೆಗಳೇ ಚಿತ್ರದ ಹೈಲೈಟ್’ ಎಂದರು ಮಧುಮಿತ.
ನಟ ಬಾಲು ಅವರು ಈ ಹಿಂದೆ ಮಾಡಿದ ಪಾತ್ರಗಳಿಗಿಂತಲೂ ಇಲ್ಲಿ ಭಿನ್ನವಾದ ಪಾತ್ರ ಸಿಕ್ಕಿದೆಯಂತೆ. ನಿರ್ಮಾಪಕ ಲೋಕೇಶ್ ಅವರಿಗೆ ಇದು ಮೊದಲ ಚಿತ್ರ. ಚಿತ್ರದಲ್ಲಿ ಕಾವ್ಯಾ ಪ್ರಕಾಶ್ ನಾಯಕಿ ತಾಯಿ ಪಾತ್ರ ಮಾಡಿದ್ದಾರಂತೆ.