Advertisement
2017 ರಲ್ಲಿ ನಡೆಸಲಾದ ವೈದ್ಯಕೀಯ ಶಿಬಿರದಲ್ಲಿ ಪತ್ತೆಹಚ್ಚಲಾದ 1905 ಮಂದಿಯಲ್ಲಿ 18 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳನ್ನು ಸೇರಿಸುವಂತೆ ಎಂಡೋ ಸೆಲ್ ಸಭೆಯಲ್ಲಿ ತೀರ್ಮಾನವಾಗಿದ್ದರೂ ಈ ಮಕ್ಕಳಿಗೆ ಇದುವರೆಗೆ ಚಿಕಿತ್ಸಾ ಸೌಲಭ್ಯ ಸಹಿತ ಯಾವುದೇ ಸವಲತ್ತು ಲಭಿಸಿಲ್ಲ. 2017ರ ಸುಪ್ರೀಂ ಕೋರ್ಟ್ ತೀರ್ಪಿನನ್ವಯ ವಿಶೇಷ ವೈದ್ಯಕೀಯ ಶಿಬಿರದಲ್ಲಿ ಗುರುತಿಸಲ್ಪಟ್ಟ ಎಂಡೋ ಪೀಡಿತರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕೆಂಬ ಆದೇಶವನ್ನೂ ಪಾಲಿಸಿಲ್ಲ. ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಬಳಲುತ್ತಿರುವವರಿಗೆ ಪುನರ್ವಸತಿ ಕಲ್ಪಿಸಲು ಟ್ರಿಬ್ಯೂನಲ್ ಸ್ಥಾಪಿಸುವಂತೆ ಮಾಡಿಕೊಂಡ ಮನವಿಗೂ ಸರಕಾರದ ಸ್ಪಂದನೆಯಿಲ್ಲ.ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತರು ಮತ್ತೆ ಬೀದಿಗಿಳಿದು ಹೋರಾಡಲು ಸಿದ್ಧತೆ ನಡೆಸಿದ್ದಾರೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಜಾರಿಗೆ ಸರಕಾರ ಮುಂದಾಗುತ್ತಿಲ್ಲ ಎಂಬುದು ಸಂತ್ರಸ್ತರ ಪರ ಹೋರಾಟ ನಡೆಸುವ ಸಂಘಟನೆಗಳ ಪದಾಧಿಕಾರಿಗಳ ಆರೋಪವಾಗಿದೆ.
ಸೆಕ್ರೆಟರಿಯೇಟ್ ಮುತ್ತಿಗೆ
ಎಂಡೋ ದುಷ್ಪರಿಣಾಮದಿಂದ ಸಂಕಷ್ಟ ಅನುಭವಿಸುತ್ತಿರುವ ಎಂಡೋ ಸಂತ್ರಸ್ತರ ತಾಯಂದಿರು ಜ. 30ರಂದು ತಿರುವನಂತಪುರ ಸೆಕ್ರೆಟರಿಯೇಟ್ ಮುಂಭಾಗದಲ್ಲಿ ಧರಣಿ ನಡೆಸುವರು. 2019 ಜನವರಿ 30ರಂದು ತಿರುವನಂತಪುರ ಸೆಕ್ರೆಟರಿಯೇಟ್ ಮುಂಭಾಗ ನಡೆಸಿದ ನಿರಾಹಾರ ಸತ್ಯಾಗ್ರಹದ ಸಂದರ್ಭದಲ್ಲಿ ಸರಕಾರ ಮಧ್ಯ ಪ್ರವೇಶಿಸಿ ಕೈಗೊಂಡ ತೀರ್ಮಾನ ಇದುವರೆಗೂ ಜಾರಿಯಾಗಿಲ್ಲ. ಸರಕಾರ ಎಂಡೋ ಸಂತ್ರಸ್ತರ ಪುನರ್ವಸತಿ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ಪ್ರತಿಭಟಿಸಿ ಹಾಗೂ ಪಿಂಚಣಿ ಸಹಿತ ವಿವಿಧ ಸವಲತ್ತುಗಳನ್ನು ಶೀಘ್ರವೇ ಮಂಜೂರು ಗೊಳಿಸುವಂತೆ ಒತ್ತಾಯಿಸಿ ಸೆಕ್ರೆಟರಿಯೇಟ್‌ಗೆ ಮುತ್ತಿಗೆ ಚಳವಳಿ ನಡೆಯುವುದು. ಇದರ ಪೂರ್ವಭಾವಿಯಾಗಿ ಜ. 19ರಂದು ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸಂತ್ರಸ್ತರು “ಹೋರಾಟ ಜ್ಯೋತಿ’ ಬೆಳಗಿಸುವ ಮೂಲಕ ಸೆಕ್ರೆಟರಿಯೇಟ್ ಎದುರು ನಡೆಯುವ ಧರಣಿಗೆ ಬೆಂಬಲ ಸೂಚಿಸಿದ್ದರು.