Advertisement

ಕಡಲ ಮಕ್ಕಳ ನಿಲ್ಲದ ಪಯಣ

07:28 AM Feb 11, 2019 | |

ಜೀವನ ಎಂದೂ ನಿಂತ ನೀರಾಗಿರಬಾರದು. ಎಷ್ಟೇ ಕಷ್ಟಗಳು ಬಂದರೂ ಮುಂದುವರಿಯುತ್ತಾ ಸಾಗಬೇಕು ಎನ್ನುವ ಸಾರವನ್ನಿಟ್ಟುಕೊಂಡು ಹೆಣೆದ ಚಿತ್ರ ‘ದಿ ಡಿಸಪಿಯರ್ಡ್‌’.

Advertisement

ಶ್ಯಾಂಡಿ ಮಿಚೆಲ್‌ ನಿರ್ದೇಶಿಸಿರುವ ಆಂಗ್ಲ ಭಾಷೆಯಲ್ಲಿ 2012ರಲ್ಲಿ ತೆರೆಗೆ ಬಂದ ಈ ಚಿತ್ರಕ್ಕೆ ಸ್ಫೂರ್ತಿಯಾಗಿದ್ದು 92 ವರ್ಷದ ಮೀನುಗಾರ, ತನ್ನ ವೃತ್ತಿಗೆ ವಿದಾಯ ಹೇಳಿದಾಗ, ಆತನೊಂದಿಗೆ ಮಾತಿಗೆ ಕುಳಿತಾಗ ಈ ಕತೆಯ ಎಳೆ ಹೊಳೆಯಿತಂತೆ.

ಬೃಹತ್‌ ಸಾಗರ, ಪುಟ್ಟ ದೋಣಿ, ಕ್ಷಣಕ್ಷಣಕ್ಕೂ ಮೇಲೆ ಕೆಳಗಾಗುವ ಅಲೆಗಳಂತೆ ಆ 6 ಮಂದಿಯ ಉಸಿರು ಕೂಡ. ಸಂಪೂರ್ಣವಾಗಿ ನೀರಿನ ಮೇಲೆ ನಡೆಯುವ ಸಾಹಸವೇ ‘ದಿ ಡಿಸಪಿಯರ್ಡ್‌’ ಎನ್ನುವ ದೃಶ್ಯ ಕಾವ್ಯ.

ಆರು ಮಂದಿ ಮೀನುಗಾರರು, ಮೀನು ಹಿಡಿಯಲೆಂದು ಉತ್ತರ ಅಟ್ಲಾಂಟಿಕ್‌ ಸಾಗರದ ಮಧ್ಯಕ್ಕೆ ಹೋಗಿರುತ್ತಾರೆ. ರಭಸದಿಂದ ಬಂದಪ್ಪಳಿಸಿದ ಅಲೆಗೆ, ದೋಣಿ ಯಾವ ದಿಕ್ಕಿನತ್ತ ಚಲಿಸುತ್ತಿದೆ ಎಂದೇ ಅರಿವಿಗೆ ಬರೋದಿಲ್ಲ. ಹುಟ್ಟು ಹಾಕುತ್ತಾ ಹಾಕುತ್ತಾ, ಕಾಣದ ತೀರಕ್ಕಾಗಿ ಕಾತರಿಸುವ ಆ ಮುಖಗಳಲ್ಲಿ ಸಾವಿನ ಆತಂಕ ಕಾಡುತ್ತಿರುತ್ತದೆ. ದೋಣಿಯಲ್ಲಿದ್ದ ಮೀನುಗಾರರ ಸಂಸಾರದ ಕತೆಗಳನ್ನು ತೋರಿಸುತ್ತಲೇ ನೋಡುಗರನ್ನೂ ಆ ಸಮುದ್ರದ ನಟ್ಟ ನಡುವೆ ನಿಲ್ಲಿಸುತ್ತಾರೆ ನಿರ್ದೇಶಕರು.

ದೋಣಿಯಲ್ಲಿದ್ದ ನೀರು, ಅಲ್ಪ ಆಹಾರ ಎಲ್ಲವೂ ಮುಗಿದು ಹೋದ ಮೇಲೆ, ಜೀವ ಉಳಿಸಿಕೊಳ್ಳುವುದೇ ಅವರವರಿಗೆ ಮುಖ್ಯವಾದಾಗ, ಅಲ್ಲಿ ಹುಟ್ಟುವ ಸ್ವಾರ್ಥ ಭಾವಗಳು ಮತ್ತೆ ಎಲ್ಲರನ್ನೂ ಧೃತಿಗೆಡಿಸುತ್ತವೆ. ಅವುಗಳನ್ನೆಲ್ಲ ಮೀರಿ, ಸಹಬಾಳ್ವೆಯೊಂದು ಅವರಿಗೆ ಜತೆಯಾಗುತ್ತದೆ. ಸಾಗರ ತಂದೊಡ್ಡುವ ಪ್ರತಿ ಕ್ಷಣದ ಸವಾಲುಗಳನ್ನು ಎದುರಿಸುತ್ತಾ, ಅವರೆಲ್ಲ ಹೇಗೆ ಜೀವ ಉಳಿಸಿಕೊಂಡು, ಮನೆಗೆ ತಲುಪುತ್ತಾರೆ ಎನ್ನುವುದನ್ನು ಅತ್ಯಂತ ರೋಚಕವಾಗಿ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ಕಾಣಸಿಗುವ ಬದುಕಿನ ತಲ್ಲಣಗಳು, ಕಷ್ಟಗಳು ಎದುರಾದಾಗ ನಾವು ಅದಕ್ಕೆ ಪ್ರತಿಸ್ಪಂದಿಸುವ ರೀತಿ, ಸಾವು ಎದುರಾದಾಗ ನಾವೇನು ಮಾಡಬಹುದು ಎನ್ನುವ ದೃಶ್ಯಗಳು ಬದುಕಿಗೆ ಅತ್ಯಮೂಲ್ಯ ಪಾಠವನ್ನು ನೀಡುವಂತಿವೆ. ಒಟ್ಟಿನಲ್ಲಿ ಮನೋಜ್ಞವಾಗಿ ಮೂಡಿ ಬಂದಿರುವ ಈ ಸಿನೆಮಾ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವಂತೆ ಮಾಡಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next