ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೋಟ್ಯಂತರ ರೂ. ವೆಚ್ಚದಲ್ಲಿ ತಾಲೂಕಿನ ರಾ.ಹೆ.234ರ ಬಸ್ ಗೇಟ್‌ಗಳಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದ ಅವೈಜ್ಞಾನಿಕ ತಂಗುದಾಣಗಳನ್ನು ನಿರ್ಮಿಸಿದ್ದಾರೆಂಬ ಕೂಗು ಜನಸಾಮಾನ್ಯರಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಜಿಲ್ಲೆಯ ಶ್ರೀನಿವಾಸಪುರದಿಂದ ಮುಳಬಾಗಿಲಿನ ಆಂಧ್ರದ ಗಡಿವರೆಗೂ ಹಾದು ಹೋಗಿರುವ ಸುಮಾರು 40 ಕಿ.ಮೀ ಜಿಲ್ಲಾ ಮಟ್ಟದ ರಸ್ತೆಯನ್ನು ಸರ್ಕಾರ 2006ರಲ್ಲಿ ಮೇಲ್ದರ್ಜೆಗೇರಿಸಿ ರಾಜ್ಯ ಹೆದ್ದಾರಿ 58 ಆಗಿ ಘೋಷಿಸಿದ ನಂತರ 2009-10ರಲ್ಲಿ ರಾಷ್ಟ್ರೀಯ ಹೆದ್ದಾರಿ 234 ಆಗಿ ಘೋಷಣೆಯಾಗಿದೆ.
219 ಕೋಟಿ. ರೂ. ವೆಚ್ಚ: ಈ ರಸ್ತೆಯನ್ನು ಕಳೆದ 2015ರಲ್ಲಿಯೇ ಎರಡನೇ ಹಂತದ ಕಾಮಗಾರಿಯಲ್ಲಿ ಚಿಕ್ಕಬಳ್ಳಾಪುರದಿಂದ ಮುಳಬಾಗಿಲುವರೆಗೂ 82-821ಕಿ.ಮೀ. ರಸ್ತೆಯನ್ನು 219 ಕೋಟಿ ರೂ.ಗಳ ವೆಚ್ಚದಲ್ಲಿ ದ್ವಿಪಥದ ರಸ್ತೆ ಅಭಿವೃದ್ಧಿ ಮಾಡಲು ಅಶೋಕ್ ಬಿಲ್zಕಾನ್ ಕಂಪನಿ ಗುತ್ತಿಗೆ ಪಡೆದು 7 ಮೀ. ಡಾಂಬರೀಕರಣ ಹಾಗೂ ಎರಡೂ ಕಡೆಗಳಲ್ಲಿ 5 ಮೀ ಮಣ್ಣಿನ ರಸ್ತೆ ಮತ್ತು ಇಕ್ಕೆಲಗಳಲ್ಲಿ ಚರಂಡಿ ಸೇರಿದಂತೆ 16 ಮೀ ರಸ್ತೆ ಅಗಲ ವಿಸ್ತೀರ್ಣದಲ್ಲಿ ರಸ್ತೆಯ ನಿರ್ಮಾಣದಲ್ಲಿ ನಿಗದಿತ ಸೌಕರ್ಯಗಳೊಂದಿಗೆ 2018ರ ಒಳಗಾಗಿ ಅಭಿವೃದ್ಧಿ ಪಡಿಸಲು ಕಾಮಗಾರಿ ನಡೆದು ಪೂರ್ಣಗೊಂಡಿದೆ.
ಎರಡೂ ಕಡೆ ತಂಗುದಾಣ: ಆದರೆ ಸದರೀ ಕಂಪನಿಯು ರಸ್ತೆಯನ್ನು ಅಭಿವೃದ್ಧಿ ಪಡಿಸಲು ಜೆಎಸ್‌ಆರ್ ಕಂಪನಿಗೆ ಉಪ ಗುತ್ತಿಗೆ ನೀಡಲಾಗಿದ್ದು ಅದರಂತೆ ರಸ್ತೆ ನಿರ್ಮಾಣ ಮಾಡಲಾಗಿದೆ. ಪ್ರಯಾಣಿಕರು ಹಳ್ಳಿಗಳಿಂದ ಹೊರ ಊರುಗಳಿಗೆ ತೆರಳಲು ಬಸ್ ಗೇಟ್‌ಗೆ ಬಂದಾಗ ಪ್ರಯಾಣಿಕರು ಕುಳಿತುಕೊಂಡು ದಣಿವಾರಿಸಿಕೊಳ್ಳಲು ಮತ್ತು ಬಿಸಿಲು, ಮಳೆ, ಗಾಳಿಯಿಂದ ಪಾರಾಗಲು ಸದರೀ ರಸ್ತೆಯ ಉತ್ತನೂರು ಕ್ರಾಸ್, ಮುಡಿಯನೂರು, ಬೆಸ್ತರಹಳ್ಳಿ, ಬೇವಹಳ್ಳಿ, ಗೋಪಾಲಪುರ, ಕೂತಾಂಡಹಳ್ಳಿ, ಕುರುಡುಮಲೆ ಕ್ರಾಸ್, ಮಲ್ಲಸಂದ್ರ, ದೊಡ್ಡಗುರ್ಕಿ ಕ್ರಾಸ್, ಕದರೀಪುರ ಪ್ರತಿಯೊಂದು ಗೇಟ್‌ನ ರಸ್ತೆಯ ಎರಡೂ ಕಡೆಗಳಲ್ಲಿ ಸುರಕ್ಷತೆಯುಳ್ಳ ತಂಗುದಾಣ ನಿರ್ಮಾಣ ಮಾಡಬೇಕು ಆದರೆ ಕಂಪನಿ ಸುರಕ್ಷತೆ ಇಲ್ಲದ ತಂಗುದಾಣ ನಿರ್ಮಾಣ ಮಾಡಿದ್ದಾರೆ.
ಸಾರ್ವಜನಿಕರ ಆರೋಪ: ಆದರೆ ಅಶೋಕ್ ಬಿಲ್ಕಾನ್ ಲಿಮಿಟೆಡ್ ಕಂಪನಿಯು ಉಪ ಗುತ್ತಿಗೆದಾರ ಚಿಕ್ಕಬಳ್ಳಾಪುರ ಲಕ್ಷ್ಮೀನಾರಾಯಣ ಎಂಬುವರು ಉತ್ತನೂರು ಕ್ರಾಸ್, ಬೇವಹಳ್ಳಿ ಗೇಟ್, ಗೋಪಾಲಪುರ ಗೇಟ್‌ಗಳಲ್ಲಿ ಮಾತ್ರ 15/9 ಅಡಿ ಅಗಲ ಮತ್ತು 10 ಅಡಿ ಎತ್ತರವುಳ್ಳ ವಿಸ್ತೀರ್ಣದ ತಂಗುದಾಣದಲ್ಲಿ 8 ಜನರು ಮಾತ್ರ ಕುಳಿತು ಕೊಳ್ಳುವಷ್ಟು ಕಲ್ಲು ಚಪಡಿಗಳ ಆಸನ, ಅದರ ಸುತ್ತಲೂ 4 ಅಡಿ ಎತ್ತರದ ಗೋಡೆ ನಾಮಕೇವಾಸ್ತೆ ನಿರ್ಮಾಣ ಮಾಡಿಸಲಾಗಿದೆ.
ಗ್ರಾಮಗಳಿಂದ ದೂರವಿರುವ ಈ ಬಸ್ ಗೇಟ್‌ಗಳಲ್ಲಿ ಪ್ರಯಾಣಿಕರು ಬಿಸಿಲು, ಮಳೆ, ಗಾಳಿಯಿಂದ ಪಾರಾಗಲು ಈ ತಂಗುದಾಣಗಳನ್ನು ಆಶ್ರಯಿಸಿದರೆ ಮಳೆ, ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಪರದಾಡು ವಂತಹ ಸನ್ನಿವೇಶ ಎದುರಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದರು.
● ಎಂ.ನಾಗರಾಜಯ್ಯ