ಬೆಂಗಳೂರು: ವಿದೇಶದಿಂದ ರಾಜ್ಯಕ್ಕೆ ಹಾರಿಬಂದ ಸಾವಿರಾರು ಅನಿವಾಸಿ ಭಾರತೀಯರ ಪೈಕಿ ಇನ್ನೂ ನೂರಾರು ಜನ ಪತ್ತೆಯೇ ಆಗಿಲ್ಲ! ಮಾರ್ಚ್ 7ರಿಂದ 22ರವರೆಗೆ 40 ಸಾವಿರಕ್ಕೂ ಅಧಿಕ ಜನ ರಾಜ್ಯಕ್ಕೆ ಬಂದಿಳಿದಿದ್ದಾರೆ. ಆ ಪೈಕಿ ಬಹುತೇಕ ಎಲ್ಲರನ್ನೂ ಪತ್ತೆ ಮಾಡಿ, ಕ್ವಾರಂಟೈನ್ ಮಾಡುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.
ಇದಲ್ಲದೆ, ಇನ್ನೂ ನೂರಾರು ಸಂಖ್ಯೆಯಲ್ಲಿ ಈ “ವಿದೇಶಿ ವರ್ಗ’ ಹರಿದುಹಂಚಿ ಹೋಗಿದ್ದು, ಇದುವರೆಗೆ ಅಂತಹವರ ಸುಳಿವು ಸಿಕ್ಕಿಲ್ಲ. ಚೆಕ್‌ಔಟ್ ಆಗುವಾಗ ನೀಡಿದ ಮಾಹಿತಿ ಹಾಗೂ ಪಾಸ್‌ಪೋರ್ಟ್ ವಿಳಾಸದ ಜಾಡುಹಿಡಿದು ಆರೋಗ್ಯ ಇಲಾಖೆ, ಪೊಲೀಸರು ಮತ್ತು ಗುಪ್ತಚರ ಇಲಾಖೆ ಈಗ ಈ ನಾಪತ್ತೆಯಾದವರ ಹಿಂದೆಬಿದ್ದಿದೆ.
ಉದ್ದೇಶಪೂರ್ವಕ ಹಳೆಯ ವಿಳಾಸ?: ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆಗಳನ್ನು ಆಗಾಗ್ಗೆ ಬದಲಾಯಿಸುವುದು ಮಾಮೂಲು. ಆದರೆ, ಪಾಸ್‌ಪೋರ್ಟ್‌ನಲ್ಲಿರುವ ವಿಳಾಸ ಹಲವು ವರ್ಷಗಳ ಹಿಂದಿನದ್ದಾಗಿರುತ್ತದೆ. ತಮ್ಮನ್ನೂ ಕ್ವಾರಂಟೈನ್ ಮಾಡಬಹುದು ಎಂಬ ಆತಂಕದಲ್ಲಿ ಪ್ರಸ್ತುತ ವಿಳಾಸವನ್ನೂ ಕೆಲವರು ಪಾಸ್‌ಪೋರ್ಟ್‌ನಲ್ಲಿದ್ದ ಮಾಹಿತಿಯನ್ನೇ ದಾಖಲಿಸಿದ್ದಾರೆ. ಹೀಗಾಗಿ, ಪತ್ತೆಹಚ್ಚುವುದು ಕಷ್ಟವಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲೇ ಎಂಟು ವಲಯಗಳಿದ್ದು, ತಲಾ ಒಂದರಲ್ಲಿ ಇಂತಹ ಸರಾಸರಿ 50 ಪ್ರಕರಣಗಳನ್ನು ಕಾಣಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
ಹಾಗಂತ, ಇವರಿಂದ ಅಪಾಯ ಕಾದಿದೆ ಎಂದಲ್ಲ; ಆದರೆ, ಸರ್ಕಾರಕ್ಕೆ ಅವರೆಲ್ಲಿದ್ದಾರೆ ಎಂಬುದಾದರೂ ಗೊತ್ತಾಗಲೇಬೇಕು. ಜತೆಗೆ ಎಲ್ಲೆಲ್ಲಿ ಓಡಾಡಿದ್ದಾರೆ ಎನ್ನುವುದೂ ತಿಳಿಯಬೇಕು. ಮಾ. 7ರಿಂದ ಲೆಕ್ಕಹಾಕಿದರೆ, ಕೆಲವರು ಈಗಾಗಲೇ 14 ದಿನಗಳ ಅವಧಿ ಪೂರೈಸಿಬಿಟ್ಟಿದ್ದಾರೆ. ಅದರಲ್ಲಿ ತಿಂಗಳ ಕೊನೆಗೆ ಬಂದವರೂ ಇದ್ದಾರೆ. ಹಾಗಾಗಿ, ನಿರ್ಲಕ್ಷಿಸುವಂತೆಯೂ ಇಲ್ಲ ಎಂದು ಅಧಿಕಾರಿಗಳು ಹೇಳಿದರು.
ಸಿಕ್ಕ ಮಾಹಿತಿ ಪೊಲೀಸರಿಗೆ ರವಾನೆ: ಉಳಿದಂತೆ ಎಲ್ಲರನ್ನೂ ಪತ್ತೆಹಚ್ಚಿ, ಜಿಪಿಎಸ್ ಆಧಾರಿತ ಮನೆ ವಿಳಾಸ ಸಹಿತ ಎಲ್ಲ ಮಾಹಿತಿಯನ್ನು ಆಯಾ ವ್ಯಾಪ್ತಿಗೆ ಬರುವ ಠಾಣೆಗೆ ಹಸ್ತಾಂತರಿಸಲಾಗಿದೆ. ಕ್ವಾರಂಟೈನ್ ಮಾಡಿ, ಕಾವಲು ಕಾಯಲಾಗುತ್ತಿದೆ. ಆದ್ದರಿಂದ ಸಮಸ್ಯೆ ಇಲ್ಲ ಎನ್ನಲಾಗಿದೆ. ಈ ಪತ್ತೆಯಾಗದ ಪ್ರಕರಣಗಳ ಸಂಬಂಧ ಹಲವು ಬಾರಿ ಆರೋಗ್ಯ ಇಲಾಖೆ ಅಧಿಕಾರಿಗಳ ಭೇಟಿಗೆ ಪ್ರಯತ್ನಿಸಿದರೂ, ಪ್ರತಿಕ್ರಿಯೆ ಸಿಗಲಿಲ್ಲ.
ಈ ಮಧ್ಯೆ ಮಹದೇವಪುರ ಸೇರಿದಂತೆ ಕೆಲವು ಕಡೆಗಳಲ್ಲಿ ಸ್ಥಳೀಯ ನಿವಾಸಿಗಳ ಸಂಘಗಳ ನೆರವಿನಿಂದ ಮನೆ-ಮನೆ ಸಮೀಕ್ಷೆ ನಡೆಸಿ, ವಿದೇಶದಿಂದ ಬಂದರೂ ಮುದ್ರೆ ಹಾಕಿರದ ನೂರಾರು ಜನರ ಮಾಹಿತಿ ಕಲೆಹಾಕಲಾಗಿದೆ. ಹಲವರು ಸ್ವಯಂಪ್ರೇರಿತವಾಗಿಯೂ ಹೆಸರು ನೋಂದಾಯಿಸಿದ್ದಾರೆ. ಕೇವಲ ಫೋರ್ಸ್ ಗ್ರೇಟರ್ ವೈಟ್ ಫೀಲ್ಡ್ ಇಂತಹ 250ಕ್ಕೂ ಅಧಿಕ ಜನರನ್ನು ಪತ್ತೆ ಮಾಡಿ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಸೀಗೇಹಳ್ಳಿಯ ಲಿಂಗರಾಜ ಅರಸ್ ತಿಳಿಸಿದರು.
ವಿಳಾಸ ಅದೇ; ವ್ಯಕ್ತಿ ಬೇರೆ! : ದುಬೈ, ಜರ್ಮನಿ, ಅಮೆರಿಕ ಸೇರಿದಂತೆ ವಿವಿಧ ದೇಶಗಳಿಂದ ಬಂದ ಜನ ಬೆಂಗಳೂರು, ಮಂಗಳೂರು, ಮೈಸೂರು ಮತ್ತಿತರ ಮಹಾನಗರಗಳಲ್ಲಿ ಹರಿದುಹಂಚಿ ಹೋಗಿದ್ದಾರೆ. ಈ ಪೈಕಿ ಅರ್ಧಕ್ಕರ್ಧ ಅಂದರೆ ಸುಮಾರು 20 ಸಾವಿರಕ್ಕೂ ಅಧಿಕ ಜನ ಬೆಂಗಳೂರಿನಲ್ಲೇ ಇದ್ದಾರೆ. ಅದರಲ್ಲಿ ಅಂದಾಜು 800ಕ್ಕೂ ಹೆಚ್ಚು ಜನ ನೀಡಿರುವ ವಿಳಾಸಕ್ಕೆ ಭೇಟಿ ನೀಡಿದರೆ, ಆ ವ್ಯಕ್ತಿಯೇ ಇರುವುದಿಲ್ಲ. ನಂತರ ಫೋನಾಯಿಸಿದರೆ, ಸ್ವಿಚ್ಡ್ ಆಫ್ ಅಥವಾ ನಂಬರ್ ಅಸ್ತಿತ್ವದಲ್ಲೇ ಇರುವುದಿಲ್ಲ. ಹಾಗಾಗಿ, ಗುಪ್ತಚರ ಸಿಬ್ಬಂದಿ ನೆರವೂ ಪಡೆಯಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
-ವಿಜಯಕುಮಾರ್ ಚಂದರಗಿ