ವರದಿ: ಬಸವರಾಜ ಹೂಗಾರ
ಹುಬ್ಬಳ್ಳಿ: ಕಳೆದ ಎರಡು ವರ್ಷಗಳಿಂದ ಕೋವಿಡ್-19 ಹಿನ್ನೆಲೆಯಲ್ಲಿ ಗಣೇಶೋತ್ಸವದ ಮೇಲೆ ಕರಿಛಾಯೆ ಆವರಿಸಿದ್ದು, ಅನಿವಾಸಿ ಭಾರತೀಯರು ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಕಲಾವಿದರ ಬೆನ್ನಿಗೆ ನಿಂತಿದ್ದಾರೆ.
ಕಳೆದ ವರ್ಷ ವಿದೇಶದಲ್ಲಿದ್ದರೂ ಸುಮಾರು 25 ಗಣೇಶ ಮೂರ್ತಿಗಳನ್ನು ಖರೀದಿಸಿ ವರ್ಚುವಲ್ ಮೂಲಕ ಗಣೇಶೋತ್ಸವ ಆಚರಣೆ ಮಾಡಿದ್ದ ಅನಿವಾಸಿ ಭಾರತೀಯರು ಕಲಾವಿದರ ನೆರವಿಗೆ ಧಾವಿಸಿದ್ದರು. ಸುಮಾರು 4 ರಿಂದ 4.5 ಲಕ್ಷ ರೂ. ವೆಚ್ಚವನ್ನು ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕ ಮಂಜುನಾಥ ಹಿರೇಮಠ ಅವರಿಗೆ ನೀಡಿ ಪ್ರೋತ್ಸಾಹಿಸಿದ್ದರು.
ಕಳೆದ ವರ್ಷ ಕೋವಿಡ್ ಕಾರಣದಿಂದ ಮಾಡಿದ ಗಣೇಶಮೂರ್ತಿಗಳ ಖರೀದಿಯಾಗದೆ ಮಂಜುನಾಥ ಹಿರೇಮಠ ಅವರು ತೀವ್ರ ಸಂಕಷ್ಟ ಸ್ಥಿತಿಗೆ ತಲುಪಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯ ತಿಳಿದ ಅನಿವಾಸಿ ಭಾರತೀಯರು ಕಲಾವಿದನ ನೆರವಿಗೆ ಧಾವಿಸಿದ್ದರು. ಕಲಾವಿದನನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಮೂಲಕ ಅನಿವಾಸಿ ಭಾರತೀಯರು 25 ಗಣೇಶ ಮೂರ್ತಿಗಳಿಗೆ ವರ್ಚುವಲ್ ಮೂಲಕ ಐದು ದಿನ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಿಸಿದ್ದರು.
ಈ ವರ್ಷವೂ ಗಣೇಶೋತ್ಸವ ಮುಂದುವರಿಸಿಕೊಂಡು ಹೋಗಲು ಮುಂದೆ ಬಂದಿರುವ ಅನಿವಾಸಿ ಭಾರತೀಯರು ಜಾಗತಿಕ ಗಣೇಶೋತ್ಸವ ಹೆಸರಿನಲ್ಲಿ ಸುಮಾರು 11 ಗಣೇಶ ಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಅವುಗಳಿಗೆ ನಮ್ಮ ಹೆಸರಿನಲ್ಲಿ ಪೂಜೆ ಸಲ್ಲಿಸುವ ಮೂಲಕ ಗಣೇಶೋತ್ಸವ ಆಚರಣೆ ಮಾಡಬೇಕೆಂದು ಮೂರ್ತಿ ಕಲಾವಿದ ಮಂಜುನಾಥ ಹಿರೇಮಠ ಅವರಿಗೆ ತಿಳಿಸಿದ್ದಾರೆ. ಅದರಂತೆ 3ರಿಂದ 5 ಅಡಿ ಎತ್ತರದ 11 ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿ ಪೂಜೆಗೆ ಅಣಿಗೊಳಿಸಲಾಗುತ್ತಿದೆ.