Advertisement
ಈ ಬಾರಿಯ ಫಲಿತಾಂಶವನ್ನು ಅವಲೋಕಿಸಿದರೆ, ಕಾಂಗ್ರೆಸ್ ಪರಾಭವದ ಅಂತರ ಕಳೆದ ಬಾರಿಯ ಚುನಾವಣೆಗಿಂತಲೂ ಜಾಸ್ತಿಯಾಗಿದೆ. ಇದು ಪಕ್ಷದ ನಾಯಕರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 2009 ಮತ್ತು 2014ರ ಚುನಾವಣೆಗಳಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. 2009ರಲ್ಲಿ ಸಿಪಿಎಂ ಅಭ್ಯರ್ಥಿ ಬಿ. ಮಾಧವ ಅವರು 18,328 ಮತ್ತು 2014ರಲ್ಲಿ ಯಾದವ ಶೆಟ್ಟಿ 9394 ಮತಗಳನ್ನು ಗಳಿಸಿದ್ದರು. ಈ ಬಾರಿ ಸ್ಪರ್ಧೆ ಮಾಡದೆ, ಕೋಮವಾದಿ ಶಕ್ತಿಗಳನ್ನು ಸೋಲಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಪ್ರಬಲ ಜಾತ್ಯತೀತ ಪಕ್ಷವನ್ನು ಬೆಂಬಲಿಸುವುದಾಗಿ ಎಡಪಕ್ಷಗಳು ಕೂಡ ಘೋಷಣೆ ಮಾಡಿದ್ದವು. ಆ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು. ಅಲ್ಲದೆ ರಾಜ್ಯದಲ್ಲಿ ಮೈತ್ರಿಯ ಭಾಗವಾಗಿ, ಈ ಹಿಂದೆ ಪ್ರತ್ಯೇಕ ಸ್ಪರ್ಧಿಸಿದ್ದ ಜೆಡಿಎಸ್ ಕೂಡ ಕಾಂಗ್ರೆಸ್ ಬೆಂಬಲಿಸಿತ್ತು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಮತ ಗಳಿಕೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಗಮನ ಸೆಳೆದಿದೆ. 2014 ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹನೀಫ್ ಖಾನ್ ಕೋಡಾಜೆಯವರು 27,254 ಮತಗಳನ್ನು ಗಳಿಸಿದ್ದರು. ಈ ಬಾರಿ ಮಹಮ್ಮದ್ ಇಲ್ಯಾಸ್ ಸ್ಪರ್ಧಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮತಗಳ ಮೇಲೆ ಪ್ರಭಾವ ಬೀರಬಹುದು ಎನ್ನುವ ಲೆಕ್ಕಾಚಾರ ಇತ್ತು. ಕಳೆದ ಲೋಕಸಭೆ ಚುನಾವಣೆಗಿಂತ ಈ ಸಲ ಎಸ್‌ಡಿಪಿಐ ಹೆಚ್ಚಿನ ಸಂಖ್ಯೆ ಮತಗಳನ್ನು ಗಳಿಸಿವೆ. ಆದರೆ ಈ ಬಾರಿಯ ಚುನಾವಣೆಯಲ್ಲಿಯೂ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುವುದಕ್ಕೆ ಎಸ್‌ಡಿಪಿಐ ಪಕ್ಷದಿಂದ ಸಾಧ್ಯವಾಗಿಲ್ಲ.