ಶನಿವಾರಸಂತೆ: ಸ್ಥಳೀಯ ಗ್ರಾ.ಪಂ.ಆಡಳಿತ ಮಂಡಳಿಯ ಸಾಮಾನ್ಯ ಸಭೆ ಗ್ರಾ.ಪಂ.ಅಧ್ಯಕ್ಷ ಮಹಮ್ಮದ್‌ಗೌಸ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಸಾಮಾನ್ಯ ಸಭೆಯಲ್ಲಿ ಬಹುತೇಕ ವಾರ್ಡ್ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಯಾವುದೆ ಕೆಲಸ ಕಾರ್ಯಗಳು ನಡೆಯದಿರುವ ಬಗ್ಗೆ ಅಧ್ಯಕ್ಷರು ಮತ್ತು ಗ್ರಾ.ಪಂ.ಅಧಿಕಾರಿಗಳ ಬಗ್ಗೆ ಅಸಮಾಧಾನ ಹೊರಹಾಕಿದರು.
ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಅಸಮರ್ಪಕ ಕಸವಿಲೆವಾರಿ, ರಸ್ತೆ-ಚರಂಡಿ ದುರಸ್ಥಿ ಪಡಿಸದಿರುವುದು, ಬೀದಿದೀಪ ಅಳವಡಿಸದಿರುವುದು ಸೇರಿದಂತೆ ಉದ್ಯೋಗ ಖಾತರಿ ಯೋಜನೆಯಿಂದ ಈ ವಾರ್ಡ್‌ನಲ್ಲಿ ಯಾವುದೆ ಕಾವåಗಾರಿ ಕಾರ್ಯ ನಡೆದಿಲ್ಲ ಎಂದು ಸದಸ್ಯ ಸರ್ದಾರ್ ಆಹಮ್ಮದ್ ಅಸಮಾಧಾನ ವ್ಯಕ್ತಪಡಿಸುತ್ತಾ ಪ್ರತಿಯೊಂದು ಸಾಮಾನ್ಯ ಮತ್ತು ವಿಶೇಷ ಸಭೆಗಳಲ್ಲಿ ಈ ಕುರಿತು ಪ್ರಸ್ತಾಪಿಸುತ್ತಿದ್ದರೂ ಯಾಕೆ ಏನೋ ಅಧ್ಯಕ್ಷರು ಮತ್ತು ಪಿಡಿಒಗಳು ಸ್ಪಂದಿಸುತ್ತಿಲ್ಲ ಗ್ರಾ.ಪಂ.ಆಡಳಿತ ಅವಧಿ ಮುಗಿಯುತ್ತಿದ್ದರೂ ಗುಂಡುರಾವ್ ಬಡಾವಣೆ ಅಭಿವೃದ್ದಿಯಾಗುತ್ತಿಲ್ಲ ಇದರಿಂದ ವಾರ್ಡ್ ವ್ಯಾಪ್ತಿಯ ಜನರಿಗೆ ಮುಖ ತೋರಿಸಲಾಗುತ್ತಿಲ್ಲ ಎಂದು ಅಧ್ಯಕ್ಷ ಮತ್ತು ಗ್ರಾ.ಪಂ.ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ಎಸ್.ಎನ್.ಪಾಂಡು, ಎನ್.ಕೆ.ಆದಿತ್ಯ, ಉಷಾ ಜಯೇಶ್ ಅವರುಗಳು ಪಟ್ಟಣದ ಸಂತೆ ಮಾರುಕಟ್ಟೆಯನ್ನು ಸಹ ಅಭಿವೃದ್ದಿ ಪಡಿಸಿಲ್ಲ ಎಂದು ಆರೋಪಿಸಿದರು.
ಪಕ್ಕದ ಆದಾಯ ಇಲ್ಲದ ಗ್ರಾ.ಪಂ.ಗಳು ಅಭಿವೃದ್ದಿಯಾಗುತ್ತಿದ್ದು ನಮ್ಮ ಗ್ರಾ.ಪಂ.ಗೆ ಆದಾಯ ಇದ್ದರೂ ಸಹ ಇಚ್ಚಾಸಕ್ತಿಯ ಕೊರತೆಯಿಂದ ಪಟ್ಟಣವನ್ನು ಅಭಿವೃದ್ದಿ ಪಡಿಸುತ್ತಿಲ್ಲ ಎಂದು ಸರ್ದಾರ್ ಆಹಮದ್, ಎಚ್.ಆರ್.ಹರೀಶ್ ಆರೋಪಿಸಿದರು. ಸರಕಾರದಿಂದ ನಮ್ಮ ಗ್ರಾ.ಪಂ.ಗೆ ಇಲ್ಲಿಯ ವರೆಗೆ ಬಡವರಿಗಾಗಿ ಯಾವುದೆ ಯೋಜನೆ ವತಿಯಿಂದ ವಸತಿ ಸೌಲಭ್ಯ ಬಂದಿಲ್ಲ ಎಂದು ಸದಸ್ಯೆ ಹೇಮಾವತಿ ದೂರಿದರು. ಸಾಮಾನ್ಯ ಸಭೆಯಲ್ಲಿ ಬಹಳಷ್ಟು ಸಮಸ್ಯೆಗಳು ಸದಸ್ಯರುಗಳ ದೂರುಗಳಾಗಿದ್ದವು.
ಸಭೆಯಲ್ಲಿ ಪಟ್ಟಣದ 1ನೇ ವಿಭಾಗ ಮತ್ತು ಸಂತೆ ಮಾರುಕಟ್ಟೆ ವಿಭಾಗಗಳಲ್ಲಿ ಕಸವಿಲೇವಾರಿ ಸ್ಥಳ ಪರಿಶೀಲನೆಗಾಗಿ ತಕ್ಷಣದಿಂದ ಸಿಸಿ ಟಿವಿ ಅಳವಡಿಸುವಂತೆ ನಿರ್ಣಯಿಸಲಾಯಿತು. ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಸವಿಲೆವಾರಿಗಾಗಿ ಸರಕಾರ ಜಾಗ ಗೊತ್ತು ಮಾಡಿದ ಸ್ಥಳದಲ್ಲಿ ಕಸವಿಲೇವಾರಿ ಮಾಡುವಂತೆ ಮತ್ತು ಈ ಹಿಂದೆ ದುಂಡಳ್ಳಿ ಗ್ರಾ.ಪಂ.ಯಲ್ಲಿ ನಡೆದ ಸಮನ್ವಯ ಸಭೆಯಲ್ಲಿ ದುಂಡಳ್ಳಿ ಗ್ರಾ.ಪಂ.ಯವರು ಕಸವಿಲೇವಾರಿಗಾಗಿ ಅಡ್ಡಿಪಡಿಸುವುದಿಲ್ಲ ಎಂದು ಭರವಸೆ ನೀಡಿದ್ದರು ಅದರಂತೆ ನಮ್ಮ ಗ್ರಾ.ಪಂ.ಯಿಂದ ಕಾರ್ಮಿಕರು ಕಸವಿಲೇವಾರಿ ಮಾಡಲು ಹೋಗುವ ಸಂದರ್ಭದಲ್ಲಿನ ಅಲ್ಲಿನ ಕೆಲವರು ಅಡ್ಡಿಪಡಿಸುತ್ತರಿರುವ ಕುರಿತು ಚರ್ಚೆ ನಡೆಸಲಾಯಿತು.
ಮುಂದಿನ ದಿನಗಳಲ್ಲಿ ಈ ಕುರಿತು ಕಾನೂನು ಪ್ರಕಾರದಂತೆ ಅಲ್ಲಿ ಕಸವಿಲೆವಾರಿ ಮಾಡುವಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಾರ್ಮಿಕರು ಕಸ ಸ್ವಚ್ಚಗೊಳಿಸುವ ದಿನಗಳನ್ನು ಹಂಚಿಕೆ ಮಾಡಲಾಯಿತು. ಸಮಪರ್ಕವಾಗಿ ಕುಡಿಯುವ ನೀರು ಸರಬರಾಜು ಮಾಡುವ ಕುರಿತು ನೀರುಗಂಟಿಗಳಿಗೆ ಸೂಚನೆ ನೀಡಲಾಯಿತು. ಗ್ರಾ.ಪಂ.ಉಪಾಧ್ಯಕ್ಷೆ ಗೀತಹರೀಶ್, ಸದಸ್ಯರುಗಳಾದ ಸರ್ದಾರ್ ಆಹಮ್ಮದ್, ಎಚ್.ಆರ್.ಹರೀಶ್, ಎಸ್.ಎನ್.ಪಾಂಡು, ಹೇಮಾವತಿ, ಉಷಾ ಜಯೇಶ್, ಎನ್.ಎ.ಆದಿತ್ಯ, ರಜನಿರಾಜು, ಪಿಡಿಒ ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯ ಆಚಾರ್, ಲೆಕ್ಕಾಧಿಕಾರಿ ವಸಂತ್, ಪೌಜಿಯಾ ಬಾನುಉಪಸ್ಥಿತರಿದ್ದರು.