ಕುಮಟಾ: ಯುವಾ ಬ್ರಿಗೇಡ್ ವತಿಯಿಂದ ಒಂದು ವರ್ಷದ ಹಿಂದೆ ಹೊನ್ಮಾವ್ ಬ್ರಿಜ್ ಬಳಿ ಮಳೆ, ಗಾಳಿ, ಚಳಿಯನ್ನೂ ಲೆಕ್ಕಿಸದೆ ಸುಮಾರು 16 ವಾರಗಳ ಕಾಲ ಸತತ ಸ್ವತ್ಛತಾ ಕಾರ್ಯ ನಡೆಸಿ, ಸುಮಾರು 27 ಟನ್ ಕಸವನ್ನು ತೆಗೆದು ಸಂಪೂರ್ಣವಾಗಿ ಸ್ವತ್ಛಗೊಳಿಸಲಾಗಿತ್ತು. ಆದರೆ ಅಧಿಕಾರಿಗಳ ಹಾಗೂ ಕೆಲ ಸಾರ್ವಜನಿಕರ ದಿವ್ಯ ನಿರ್ಲಕ್ಷ್ಯದಿಂದ ಈ ಜಾಗದಲ್ಲಿ ಮತ್ತೆ ತ್ಯಾಜ್ಯಗಳು ತುಂಬಲಾರಂಭಿಸಿದೆ ಎಂದು ಯುವ ಬ್ರಿಗೇಡ್ ನ ಕಾರ್ಯಕರ್ತ ಲಕ್ಷ್ಮೀಕಾಂತ ಬೇಸರ ವ್ಯಕ್ತಪಡಿಸಿದರು.
ಶನಿವಾರ ಹೊನ್ಮಾವ್ ಬ್ರಿಜ್ ಸಮೀಪ ಯುವ ಬ್ರಿಗೇಡ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯುವ ಬ್ರಿಗೇಡ್ ಈ ಸ್ಥಳವನ್ನು ಸ್ವತ್ಛಗೊಳಿಸಿದ ಬಳಿಕ ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಾಗೂ ಪುರಸಭೆಗೆ ಸ್ವತ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಿದ್ದರು. ಅಧಿಕಾರಿಗಳು ಈ ಸ್ಥಳದಲ್ಲಿ ಫಲಕ ಅಳವಡಿಸಿರುವುದನ್ನು ಹೊರತುಪಡಿಸಿ, ಕಸ ಹಾಕುವವರ ಬಗೆಗೆ ಬೇರಾವುದೇ ಕ್ರಮ ಕೈಗೊಂಡಿಲ್ಲ. ಇವರ ದಿವ್ಯ ನಿರ್ಲಕ್ಷದಿಂದಲೇ ಕೆಲ ಹೊಟೇಲ್ ಹಾಗೂ ಬಾರ್‌ಗಳಲ್ಲಿನ ತ್ಯಾಜ್ಯಗಳು ಇಲ್ಲಿ ತುಂಬಲಾರಂಭಿಸಿದೆ ಎಂದರು.
ನಂತರ ಕಿರಣ ಮಾತನಾಡಿ, ಏ.30 ರೊಳಗೆ ಇಲ್ಲಿ ಬಿದ್ದಿರುವ ಕಸದ ರಾಶಿಗಳು ಸ್ವಚ್ಚವಾಗದಿದ್ದರೆ ಇದನ್ನು ಸಂಬಂಧಪಟ್ಟ ಎಲ್ಲಾ ಕಚೇರಿಗಳ ಮುಂದೆ ಎಸೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಮದಾಸ ಮಾತನಾಡಿ, ಈ ಕುರಿತು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್‌ರನ್ನು ಭೇಟಿಯಾದಾಗ ಸಿ.ಸಿ.ಟಿವಿ ಅಳವಡಿಸುವ ಕುರಿತು ಭರವಸೆ ನೀಡಿದ್ದಲ್ಲದೆ, ಆಗಿನ ಸಹಾಯಕ ಆಯುಕ್ತೆ ಲಕ್ಷ್ಮೀಪ್ರಿಯಾ ಅವರಿಗೆ ಈ ಕುರಿತು ಶೀಘ್ರ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ನಂತರದ ದಿನದಲ್ಲಿ ಬಂದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಲಿಲ್ಲ. ಅಧಿಕಾರಿಗಳು ಈ ಕುರಿತು ಸರಿಯಾದ ಕ್ರಮಕೈಗೊಳ್ಳದಿದ್ದರೆ ಮುಂದಾಗುವ ತೊಂದರೆಗಳಿಗೆ ಅವರೇ ಜವಬ್ದಾರರು ಎಂದರು.
ಈ ಸಂದರ್ಭದಲ್ಲಿ ಸಿಕ್ಕಂತಹ ಕಸದ ರಾಶಿಯನ್ನು ಅದರಲ್ಲಿರುವ ವಿಳಾಸದವರಿಗೆ ಪಾರ್ಸಲ್ ಮಾಡಿರುವುದು ವಿಶೇಷವಾಗಿತ್ತು. ಯುವಾ ಬ್ರಿಗೇಡಿನ ಸದಸ್ಯರಾದ ಸತೀಶ, ಕಿಶೋರ, ಪ್ರಕಾಶ, ಸಂದೀಪ್, ಅಣ್ಣಪ್ಪ, ಅಶೋಕ್ ಇದ್ದರು.