Advertisement

ಬೋರ್‌ವೆಲ್‌ ಇದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿ

12:40 AM May 12, 2019 | Sriram |

ಇಲ್ಲಿನ ಬೋರ್‌ವೆಲ್‌ಗ‌ಳಲ್ಲಿ ನೀರಿದ್ದರೂ ನಿರ್ವಹಣೆಯಿಲ್ಲದೆ ಸಮಸ್ಯೆಯಾಗಿದೆ. ನಗರಸಭೆ ನೀರಿಗೆ ಕಾಯುವುದು ಕಷ್ಟ. ಟ್ಯಾಂಕರ್‌ ನೀರು ಕೂಡ ಕಷ್ಟ ಎಂಬಂತಾಗಿದೆ ಸರಳೇಬೆಟ್ಟು ನಿವಾಸಿಗಳ ಸ್ಥಿತಿ.

Advertisement

ಉಡುಪಿ:ಸರಳೇಬೆಟ್ಟು ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು, ಜನ ಅಲೆದಾಡಬೇಕಾಗಿದೆ.ಬೋರ್‌ವೆಲ್‌ಗ‌ಳಲ್ಲಿ ನೀರಿದ್ದರೂ ಬವಣೆ ತಪ್ಪಿಲ್ಲ.ಗಂಡಸರು ಕೆಲಸಕ್ಕೆ ರಜೆ ಹಾಕಿ ದೂರ ಪ್ರದೇಶಗಳಿಂದ ನೀರು ಹೊತ್ತು ತರುತ್ತಿದ್ದಾರೆ. ಸಮಸ್ಯೆ ತೀವ್ರವಾಗಿರುವ ನೆಹರೂನಗರ, ವಿಜಯನಗರ ಹಾಗೂ ಗಣೇಶ್‌ಬಾಗ್‌ ಮೊದಲಾದೆಡೆ ಉದಯವಾಣಿ ತಂಡ ಭೇಟಿ ನೀಡಿದಾಗ ಅಲ್ಲಿನ ಜನರು ಸಮಸ್ಯೆ ಬಿಚ್ಚಿಟ್ಟಿದ್ದಾರೆ.

ದನಕರುಗಳಿಗೆ ನೀರಿಲ್ಲ
ಮನುಷ್ಯರಿಗೆ ಕುಡಿಯಲು ನೀರಿಲ್ಲ. ಇದರ ನಡುವೆ ಮೂಕ ಪ್ರಾಣಿಗಳ ವೇದನೆ ಬೇರೆ. ಈಗ ಬಾವಿ ನೀರೂ ಬತ್ತಿದೆ. ನಗರಸಭೆಯ ನೀರು ನಂಬಿದರೆ ಪ್ರಯೋಜನವಿಲ್ಲ. ಮನೆಯಲ್ಲಿ 4 ದನಗಳಿಗೆ ಪ್ರತಿನಿತ್ಯ ಸುಮಾರು ಕನಿಷ್ಟ 12 ಬಕೆಟ್‌ ನೀರಾದರೂ ಬೇಕು. ಆದರೆ ನಾವು ಕೆವಲ 8 ಬಕೆಟ್‌ ಮಾತ್ರ ನೀಡುತ್ತಿದ್ದೇವೆ. ಬೇಸಗೆಯಾಗಿರುವುದರಿಂದ ಪ್ರಾಣಿಗಳು ನೀರಿಗಾಗಿ ರೋದಿಸುತ್ತಿವೆ. ಹೀಗೆ ಮುಂದುವರಿದರೆ ಅವುಗಳನ್ನು ಮಾರಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ಸರಳೆಬೆಟ್ಟು ನಿವಾಸಿ ಮೀನಾಕ್ಷಿ ಆತಂಕ ವ್ಯಕ್ತಪಡಿಸಿದರು.

ಬೋರ್‌ವೆಲ್‌ ಪ್ರಯೋಜನಕ್ಕಿಲ್ಲ ವಾರ್ಡ್‌ನಲ್ಲಿರುವ ಬೋರ್‌ವೆಲ್‌ಗ‌ಳು ಊಟಕ್ಕಿಲ್ಲದ ಉಪ್ಪಿನಕಾಯಿಗಳಂತಾಗಿವೆ. ಸರಿಯಾದ ನಿರ್ವಹಣೆಯಿಲ್ಲದೆ ಹಾಳಾಗಿವೆ. ಟ್ಯಾಂಕರ್‌ ನೀರಿನ್ನೇ ಅವಲಂಬಿಸಬೇಕಾಗಿದೆ ಎನ್ನುತ್ತಾರೆ ನೆಹರೂ ನಗರದ ನಿವಾಸಿ ವಿಜಯ ಕುಮಾರ್‌.

ವಾರಕ್ಕೊಮ್ಮೆ ರಜೆ
ಮೂರು ದಿನಕ್ಕೆ ಒಮ್ಮೆ ಬರುವ ನೀರು ದಿನ ಬಳಕೆಗೂ ಸಾಕಾಗುತ್ತಿಲ್ಲ. ದೂರದ ಎತ್ತರ ಪ್ರದೇಶಕ್ಕೆ ಸಾಗಿ ನೀರು ತರಬೇಕು.

Advertisement

ಮಹಿಳೆಯರಿಗೆ ಅದು ಕಷ್ಟ ಸಾಧ್ಯ. ಅದಕ್ಕಾಗಿ ಮನೆ ಗಂಡಸರು ವಾರಕ್ಕೊಮ್ಮೆ ರಜೆ ಹಾಕಿ ದೂರದ ಪ್ರದೇಶಗಳಿಗೆ ತೆರಳಿ ನೀರು ತರುತ್ತಾರೆ. ನೀರಿನ ಸಮಸ್ಯೆಯಿಂದಾಗಿ ಮನೆಯ ಹೊರಗೂ ಹಾಗೂ ಒಳಗೂ ದುಡಿಯುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳುತ್ತಾರೆ ಗಣೇಶ್‌ಭಾಗ್‌ ನಿವಾಸಿ ಭಾಸ್ಕರ್‌.

ವಾರ್ಡ್‌ ಜನರ ಬೇಡಿಕೆ
– ಟ್ಯಾಂಕರ್‌ ನೀರು ಒದಗಿಸಿ
– ಹಾಳಾಗಿರುವ ಬೋರ್‌ವೆಲ್‌ ದುರಸ್ತಿಗೊಳಿಸಿ.
– ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಿ

ಸಮಸ್ಯೆಹೆಚ್ಚಾಗಿದೆ
ನೀರಿನ ಸಮಸ್ಯೆ ಹೆಚ್ಚಾಗಿರುವ ಕಡೆ ಟ್ಯಾಂಕರ್‌ ಮೂಲಕ ನೀರು ನೀಡಲಾಗುತ್ತಿದೆ. ಎತ್ತರ ಪ್ರದೇಶವಾದ ಗಣೇಶ್‌ಭಾಗ್‌, ವಿಜಯ ನಗರ ಹಾಗೂ ನೆಹರೂ ನಗದಲ್ಲಿ ಸಮಸ್ಯೆ ಹೆಚ್ಚಾಗಿದೆ.
– ವಿಜಯಲಕ್ಷ್ಮೀ,
ನಗರಸಭೆ ಸದಸ್ಯರು.

ನೀರು ಸಾಕಾಗುತ್ತಿಲ್ಲ
ನಗರ ಸಭೆ ಕೊಡುವ ನೀರು ಸಾಕಾಗುತ್ತಿಲ್ಲ. ಇತರೆ ಪ್ರದೇಶಕ್ಕೆ ಹೋಗಿ ನೀರು ತರುವುದು ಕಷ್ಟ ಸಾಧ್ಯ. ನಗರಸಭೆ ಹಾಳಾಗಿರುವ ಬೋರ್‌ವೆಲ್‌ಗ‌ಳನ್ನು ರಿಪೇರಿ ಮಾಡಿ ಸ್ಥಳೀಯರಿಗೆ ನೀರು ಬಳಕೆ ಮಾಡಲು ಅನುವು ಮಾಡಿಕೊಡಬೇಕು.
– ಸುಶೀಲಾ,
ವಿಜಯನಗರ ನಿವಾಸಿ.

ಉದಯವಾಣಿ ಆಗ್ರಹ
ಸರಳೆಬೆಟ್ಟು ವಾರ್ಡ್‌ನಲ್ಲಿ ಹಾಳಾಗಿರುವ ಬೋರವೆಲ್‌ ದುರಸ್ತಿಗೊಳಿಸಿ ಜನರಿಗೆ ನೀರು ಬಳಸಲು ಅವಕಾಶ ಕಲ್ಪಿಸಬೇಕು.

ಮಾಹಿತಿ ನೀಡಿ
ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ವಾಟ್ಸಪ್‌ ನಂಬರ್‌ 9148594259 ಮಾಹಿತಿ ಕಳುಹಿಸಿ.

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next