Advertisement

ಕನ್ನಡೇತರ ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಬೇಕು

05:30 AM Jul 20, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕನ್ನಡೇತರ ಅಧಿಕಾರಿಗಳು ಕನ್ನಡವನ್ನು ಕಲಿತು ವ್ಯವಹರಿಸ ಬೇಕು ಮತ್ತು ಕನ್ನಡ ಮಾತೃಭಾಷೆಯಾಗಿರುವ ಅಧಿಕಾರಿಗಳು ಕಡತವನ್ನು ಇಂಗ್ಲಿಷ್‌ನಲ್ಲಿ ಬರೆಯುವುದೂ ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಕನ್ನಡ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ನಗರದ ಗಾಂಧಿಭವನದಲ್ಲಿ ಬುಧವಾರ ಆಯೋಜಿಸಿದ್ದ ಕೇಂದ್ರ ಲೋಕಸೇವಾ ಆಯೋಗದ 2016ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ಕನ್ನಡಿಗ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.ಕನ್ನಡ ಮಾತೃಭಾಷೆಯಾಗಿರುವ ಕೆಲವು ಅಧಿಕಾರಿಗಳು ಇಂಗ್ಲಿಷ್‌ನಲ್ಲೇ ಕಡತ ಬರೆಯುವುದನ್ನು ಚಾಳಿ ಮಾಡಿಕೊಂಡಿದ್ದಾರೆ.

ಕನ್ನಡೇತರ ಅಧಿಕಾರಿಗಳು ಕನ್ನಡ ಕಲಿಯಲು ಬೇಕಾದ ನಿಯಮ ರೂಪಿಸಿದ್ದೇವೆ. ಕನ್ನಡ ಕಲಿತು, ಕನ್ನಡದಲ್ಲೇ ವ್ಯವಹರಿಸಬೇಕು. ಈ ವಿಚಾರವಾಗಿ ರಾಜಿ ಇಲ್ಲ. ಕನ್ನಡ ಭಾಷೆ ಕಲಿಯಲು ಒಪ್ಪದ ಅಧಿಕಾರಿಯೊಬ್ಬರನ್ನು ಇತ್ತೀಚೆಗೆ ಕೇಂದ್ರ ಸರ್ಕಾರದ ಸೇವೆಗೆ ವಾಪಸ್‌ ಕಳುಹಿಸಿದ್ದೇವೆ” ಎಂದು ಹೇಳಿದರು.

ಕನ್ನಡ ಅಭಿವೃದ್ದಿ  ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ವಿವಿಧ ಇಲಾಖೆಯಲ್ಲಿ ಕನ್ನಡ ತಂತ್ರಾಂಶ ಅಳವಡಿಕೆಯಲ್ಲಿ ಹಿಂದಿದ್ದೇವೆ. ಇಲಾಖೆ ವೆಬ್‌ಸೈಟ್‌ನಲ್ಲಿ ಕನ್ನಡವೇ ಮುಖ್ಯವಾಗಿರಬೇಕು ಎಂದರು.
2016ನೇ ಸಾಲಿನಲ್ಲಿ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಮೊದಲ ಸ್ಥಾನ ಪಡೆದ ಕೋಲಾರದ ಕೆ.ಆರ್‌.ನಂದಿನಿ ಸೇರಿದಂತೆ 59 ಕನ್ನಡಿಗ ಅಭ್ಯರ್ಥಿಗಳಿಗೆ ಸನ್ಮಾನಿಸಲಾಯಿತು. ಇದರಲ್ಲಿ ಐವರು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ಪಾಸಾಗಿದ್ದಾರೆ ಹಾಗೂ 20 ಅಭ್ಯರ್ಥಿಗಳ ಐಚ್ಛಿಕ ವಿಷಯ ಕನ್ನಡ ಸಾಹಿತ್ಯವಾಗಿದೆ. ಸಚಿವೆ ಉಮಾಶ್ರೀ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಯಾ, ವಿಧಾನಪರಿಷತ್‌ ಸದಸ್ಯರಾದ ಎಚ್‌.ಎಂ. ರೇವಣ್ಣ, ಗೋವಿಂದರಾಜು, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಇದ್ದರು.

ಕನ್ನಡ ಕಾವಲು ಸಮಿತಿ ರಚನೆಗೆ ಕನ್ನಡಿಗರ ನಿರಾಭಿಮಾನವೇ ಕಾರಣವಾಗಿತ್ತು. ಎಲ್ಲಾ ಸ್ತರದಲ್ಲೂ ಕನ್ನಡ ಅನುಷ್ಠಾನ ಸಮರ್ಪಕವಾಗಬೇಕು ಮತ್ತು ಅದು ಅಗ್ರಸ್ಥಾನದಲ್ಲೇ ಇರಬೇಕು. ಇದರ ನಿರ್ವಹಣೆ ಹಾಗೂ ಅನುಷ್ಠಾನ ಕಾವಲು ಸಮಿತಿಯ ಕಾರ್ಯವಾಗಿತ್ತು. ಈಗ ಅದನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ಮಾಡುತ್ತಿದೆ. 
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

ನಮ್ಮ ಸೇವಾ ಅವಧಿಯಲ್ಲಿ ಕನ್ನಡಿಗರು ಸಿಕ್ಕಾಗ ಅವರೊಂದಿಗೆ ಕನ್ನಡದಲ್ಲೇ ವ್ಯವಹರಿಸಲು ತುಂಬಾ ಖುಷಿ ಪಡುತ್ತೇವೆ. ರ್‍ಯಾಂಕ್‌ಗಿಂತ ಮುಖ್ಯವಾಗಿ ನಾವೆಲ್ಲರೂ ಶ್ರದ್ಧೆ ಮತ್ತು ಶ್ರಮಪಟ್ಟು ಸಮಾನ ದುಡಿಮೆ ಮಾಡಬೇಕು.
– ಕೆ.ಆರ್‌.ನಂದಿನಿ, ಯುಪಿಎಸ್‌ಸಿ ಟಾಪರ್‌

Advertisement

Udayavani is now on Telegram. Click here to join our channel and stay updated with the latest news.

Next