Advertisement
ಒಂದು ಹಂತದಲ್ಲಿ ಸಾಲ ಮನ್ನಾ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಪ್ರಸ್ತಾಪಿಸಿ ಅವರ ಹೇಳಿಕೆಗಳನ್ನು ಉಲ್ಲೇಖೀಸಿದಾಗ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕ್ರಿಯಾಲೋಪ ಎತ್ತಿದ್ದು ಸದನದಲ್ಲಿ ಸ್ವಲ್ಪ ವಾದ ಪ್ರತಿವಾದಕ್ಕೆ ಕಾರಣವಾಯಿತು. ಜೆಡಿಎಸ್ ಸದಸ್ಯರು ಜಗದೀಶ್ ಶೆಟ್ಟರ್ ಮೇಲೆ ಮುಗಿಬಿದ್ದರೆ ಕಾಂಗ್ರೆಸ್ ಸದಸ್ಯರು ಅದಕ್ಕೆ ದನಿಗೂಡಿಸಿದರು. ಇದರಿಂದ ಸ್ವಲ್ಪ ಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು.
ಕೇಂದ್ರ ಸರ್ಕಾರ 2014-15ನೇ ಸಾಲಿನಲ್ಲಿ ಕಾರ್ಪೋರೇಟ್ ಕಂಪನಿಗಳ 2.77 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಅಲ್ಲದೆ, 2004-05ರಿಂದ ಇದುವರೆಗೆ ಆ ವಲಯಕ್ಕೆ 31 ಲಕ್ಷ ಕೋಟಿ ರೂ. ತೆರಿಗೆ ವಿನಾಯಿತಿ ಕೊಟ್ಟಿದೆ. ಆದರೆ, ರೈತರ ಸಾಲ ಮನ್ನಾ ಮಾಡಿ ಎಂದರೆ ದೇಶದ ಆರ್ಥಿಕ ವ್ಯವಸ್ಥೆಯೇ ಕುಸಿಯುತ್ತದೆ ಎಂಬ ರೀತಿ ಹೇಳುತ್ತಾರೆ. ಇನ್ನೊಂದೆಡೆ ಬ್ಯಾಂಕ್‌ಗಳು ಮತ್ತು ಸಿಎಜಿ ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಹೇಳಿಕೊಂಡು ರಾಜ್ಯ ಸರ್ಕಾರವೂ ರೈತರ ಸಾಲ ಮನ್ನಾ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.
Related Articles
ಈ ಮಧ್ಯೆ ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಮತ್ತು ಅವರ ಹೇಳಿಕೆಗಳನ್ನು ಪ್ರಸ್ತಾಪಿಸಿದ್ದು ವಿವಾದಕ್ಕೆ ಕಾರಣವಾಯಿತು. ನಾನು ಮುಖ್ಯಮಂತ್ರಿಯಾದರೆ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರು ಉಪ ಚುನಾವಣೆ ಪ್ರಚಾರದ ವೇಳೆ ಘೋಷಿಸಿದ್ದಾರೆ. ಆದರೆ, ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದಾಗ ಕ್ರಿಯಾಲೋಪ ಎತ್ತಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಈ ಸದನದ ಸದಸ್ಯರಲ್ಲದವರ ಹೆಸರು ಪ್ರಸ್ತಾಪಿಸಿದರೆ ಅದಕ್ಕೆ ಉತ್ತರಿಸಲು ಸಾಧ್ಯವಿಲ್ಲ. ಹೀಗಾಗಿ ಯಡಿಯೂರಪ್ಪ ಅವರ ಹೆಸರು ಪ್ರಸ್ತಾಪಿಸಲು ಅವಕಾಶ ನೀಡಬೇಡಿ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು ಒತ್ತಾಯಿಸಿದರು.
Advertisement
ಆದರೆ, ತಮ್ಮ ಹೇಳಿಕೆಯಿಂದ ಹಿಂದೆ ಸರಿಯದ ಕುಮಾರಸ್ವಾಮಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸದನದಲ್ಲಿ ನೀಡಿದ ಹೇಳಿಕೆ ಮತ್ತು ಅವರು ಈಗ ಹೇಳುತ್ತಿರುವ ಮಾತನ್ನು ಪ್ರಸ್ತಾಪಿಸುತ್ತಿದ್ದೇನೆ ಎಂದಾಗ ಜಗದೀಶ್ ಶೆಟ್ಟರ್ ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಸದಸ್ಯರು ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಮಾತನಾಡಿದರೆ ಅದಕ್ಕೆ ದನಿಗೂಡಿಸಿದ ಕಾಂಗ್ರೆಸ್ ಸದಸ್ಯರು, ಮಾತು ಮುಂದುವರಿಸುವಂತೆ ಒತ್ತಾಯಿಸಿದರು.
ಆದರೆ, ತಾವು ಎತ್ತಿದ ಕ್ರಿಯಾಲೋಪದ ಕುರಿತು ರೂಲಿಂಗ್ ನೀಡುವಂತೆ ಜಗದೀಶ್ ಶೆಟ್ಟರ್ ಪಟ್ಟು ಹಿಡಿದಾಗ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಸದನದಲ್ಲಿ ನೀಡಿದ ಹೇಳಿಕೆ ಬಗ್ಗೆ ಮಾತನಾಡಬಹುದು. ಆದರೆ, ಅವರು ಸದನದ ಹೊರಗೆ ನೀಡಿದ ಹೇಳಿಕೆಗಳನ್ನು ಪ್ರಸ್ತಾಪಿಸಬೇಡಿ ಎಂದು ಕುಮಾರಸ್ವಾಮಿ ಅವರಿಗೆ ಸೂಚಿಸಿದರು.
ನಂತರ ಮಾತು ಮುಂದುವರಿಸಿದ ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ (2009) ರಾಜ್ಯದಲ್ಲಿ ಅತಿವೃಷ್ಠಿಯಿಂದ ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿತ್ತು. ಆ ಸಂದರ್ಭದಲ್ಲಿ ಪ್ರತಿಪಕ್ಷಗಳು ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿದರೆ, ಈಗಿನ ಪರಿಸ್ಥಿತಿಯಲ್ಲಿ ಸಾಲ ಮನ್ನಾ ಸಾಧ್ಯವಿಲ್ಲ. ಬೇಕಿದ್ದರೆ ಕೇಂದ್ರಕ್ಕೆ ನಿಯೋಗ ಕೊಂಡೊಯ್ದು ಸಾಲ ಮನ್ನಾಕ್ಕೆ ಒತ್ತಾಯಿಸೋಣ. ಚುನಾವಣೆ ವೇಳೆ ಸಾಲ ಮನ್ನಾ ಭರವಸೆ ನೀಡಿದ ಮಾತ್ರಕ್ಕೆ ಅದನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ, ಈಗ ರಾಜ್ಯ ಸರ್ಕಾರ ಸಾಲ ಮನ್ನಾ ಕುರಿತು ಕೇಂದ್ರ ಸರ್ಕಾರದ ಮೇಲೆ ಹೇಳಿದಾಗ, ಕೇಂದ್ರದತ್ತ ಕೈತೋರಿಸಬೇಡಿ ಎನ್ನುತ್ತಾರೆ. ಈ ರೀತಿಯ ಡಬಲ್ ಸ್ಟಾಂಡರ್ಡ್ ಏಕೆ ಎಂದು ಪ್ರಶ್ನಿಸಿದರು.