ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ನ ಬೆಂಗಳೂರು ಪದವೀಧರ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಪಕ್ಷ, ಜಾತಿ ಹಾಗೂ ಒಳ ಪಂಗಡದ “ರಾಜಕೀಯ’ ಹೋರಾಟದ ಕಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೊಂಡು ಸಂಪುಟ ರಚನೆ ಕಸರತ್ತುಗಳ ಸುತ್ತ ರಾಜಕೀಯ ಚಟುವಟಿಕೆಗಳು ಗಿರಕಿ ಹೊಡೆಯುತ್ತಿದ್ದರೂ ಅದರ ಬಗ್ಗೆ ಹೆಚ್ಚು ತಲೆಕಡಿಸಿಕೊಳ್ಳದ ಅಭ್ಯರ್ಥಿಗಳು ಜಿದ್ದಾಜಿದ್ದಿಗೆ ಬಿದ್ದಿದ್ದಾರೆ.
ಮೂರೂ ಪಕ್ಷದ ನಾಯಕರು ಬಿಡುವಿನ ಮಧ್ಯೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದು, ಪರಿಷತ್‌ನಲ್ಲಿ ಬಲ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಬೆಂಗಳೂರು ಪದವೀಧರ ಕ್ಷೇತ್ರವು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದ್ದರೆ, ಆಗ್ನೇಯ ಶಿಕ್ಷಕರ ಕ್ಷೇತ್ರ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು ವ್ಯಾಪ್ತಿ ಹೊಂದಿದೆ.
ಚುನಾವಣೆಯಲ್ಲಿ ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ಶಿಕ್ಷಣ ಸಮುದಾಯದ ಸಮಸ್ಯೆಗಳು, ಬೇಡಿಕೆಗಳ ಜತೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಾಜಕೀಯ ಪಕ್ಷಗಳು ಹಾಗೂ ನಾಯಕರ ಸಾಮರ್ಥ್ಯದ ಬಗ್ಗೆಯೂ ಪ್ರಚಾರ ನಡೆಯುತ್ತಿದೆ.
ಬೆಂಗಳೂರು ಪದವೀಧರ ಕ್ಷೇತ್ರ: ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಮೋಜಿಗೌಡ, ಬಿಜೆಪಿಯ ಅ.ದೇವೇಗೌಡ, ಜೆಡಿಎಸ್‌ನ ಅಚ್ಚೇಗೌಡ ಶಿವಣ್ಣ ಹಾಗೂ ಪಕ್ಷೇತರರಾಗಿ ಅಶ್ವಥ್‌ನಾರಾಯಣ ಸೇರಿ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಮೋಜಿಗೌಡ ಕಳೆದ ಬಾರಿಯೂ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಸೋತಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಿದ್ದ ಅ. ದೇವೇಗೌಡ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಬಿಜೆಪಿಯಿಂದ ಕಳೆದ ಬಾರಿ ಗೆಲುವು ಸಾಧಿಸಿದ್ದ ರಾಮಚಂದ್ರಗೌಡರು ಈ ಬಾರಿ ಚುನಾವಣೆಗೆ ಸ್ಪರ್ಧಿಸಿಲ್ಲ. ಹೀಗಾಗಿ, ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅ.ದೇವೇಗೌಡ ಬಿಜೆಪಿ ಸೇರಿ ಅಭ್ಯಥಿಯಾಗಿದ್ದಾರೆ. ಜೆಡಿಎಸ್‌ನಲ್ಲಿ ಎಲ್.ಆರ್.ಶಿವರಾಮೇಗೌಡ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತಾದರೂ ಕೊನೇ ಕ್ಷಣದಲ್ಲಿ ಅಚ್ಚೇಗೌಡ ಶಿವಣ್ಣ ಅಭ್ಯರ್ಥಿಯಾಗಿದ್ದಾರೆ.
ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಹಾಗೂ ಜಾತಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಬಾರಿಯೂ ಅಭ್ಯರ್ಥಿಗಳು ಅದನ್ನೇ ನಂಬಿದ್ದಾರೆ. ಅಭ್ಯರ್ಥಿಗಳು ತೀವ್ರ ಪ್ರಚಾರ ನಡೆಸುತ್ತಿದ್ದಾರೆ.
* ಎಸ್. ಲಕ್ಷ್ಮೀನಾರಾಯಣ