Advertisement

ನೋಕಿಯಾ ಮರಳಿ ಮರಳಿ ಬರುತಿದೆ!

08:37 PM Nov 03, 2019 | Lakshmi GovindaRaju |

ಸ್ಮಾರ್ಟ್‌ ಫೋನ್‌ಗಳ ಅಬ್ಬರದಲ್ಲಿ ಕೀ ಪ್ಯಾಡ್‌ ಮೊಬೈಲ್‌ಫೋನ್‌ಗಳು ಮೂಲೆಗೆ ಸರಿದಿವೆ. ಆದರೂ ಇವುಗಳನ್ನು ಖರೀದಿಸುವವರು ಇದ್ದಾರೆ. ಒಂದು ಎಕ್ಸ್‌ಟ್ರಾ ಇರಲಿ ಎಂದೋ ಅಥವಾ ಸರಳತೆ ಇರಲೆಂದೋ ಇದನ್ನು ಇಷ್ಟಪಡುವವರಿದ್ದಾರೆ. ನೋಕಿಯಾ ಕಂಪೆನಿ, ಇಂದಿಗೂ ಕೀಪ್ಯಾಡ್‌ ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇತ್ತೀಚಿಗಷ್ಟೆ ಸಂಸ್ಥೆ, 1600 ರೂ. ಬೆಲೆಯ, ಹೊಸ ಕ್ಲಾಸಿಕ್‌ ಫೋನ್‌ ನೋಕಿಯಾ 110 ಅನ್ನು ಬಿಡುಗಡೆಗೊಳಿಸಿದೆ.

Advertisement

ಇದು ಸ್ಮಾರ್ಟ್‌ಫೋನ್‌ಗಳ ಜಮಾನ. ಹಣವಿರಲಿ, ಇಲ್ಲದಿರಲಿ ಕೈಯಲ್ಲೊಂದು ಸ್ಮಾರ್ಟ್‌ಫೋನ್‌ ಇರಲೇಬೇಕು ಎಂಬ ಧೋರಣೆ ಅನೇಕರದ್ದು. ಹೀಗಾಗಿ, ಮನೆಯ ಎಲ್ಲಾ ಸದಸ್ಯರ ಬಳಿಯೂ ಒಂದೊಂದು, ಕೆಲವರ ಬಳಿ ಎರಡು ಮೂರು ಸ್ಮಾರ್ಟ್‌ ಫೋನ್‌ಗಳಿರುವ ಕಾಲವಿದು. ಇಷ್ಟೆಲ್ಲ ಸ್ಮಾರ್ಟ್‌ಫೋನ್‌ ಇದ್ದರೂ ಕೀ ಪ್ಯಾಡ್‌ ಮೊಬೈಲ್‌ಫೋನ್‌ಗಳು ಮಾರುಕಟ್ಟೆಯಲ್ಲಿರುವುದು ಸೋಜಿಗ. ಅದಕ್ಕೆ ಕಾರಣ ಇಲ್ಲದಿಲ್ಲ. ತಂತ್ರಜ್ಞಾನವನ್ನು ಬಳಸಲು ತಿಣುಕಾಡುವವರಿಗೆ ಹಾಗೂ ಸ್ಮಾರ್ಟ್‌ಫೋನ್‌ ಅಡಿಕ್ಷನ್‌ ಸಾಕಾಗಿದೆ ಎನ್ನುವವರಿಗೂ ಕೀಪ್ಯಾಡ್‌ ಮೊಬೈಲ್‌ ಸೂಕ್ತ ಆಯ್ಕೆ.

ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಮುಂದಿರುವ ಟಾಪ್‌ ಕಂಪೆನಿಗಳು, ಕೀ ಪ್ಯಾಡ್‌ ಫೋನ್‌ ತಯಾರಿಸುತ್ತಿಲ್ಲ. ಆದರೆ ನೋಕಿಯಾ ಕಂಪೆನಿ ಮಾತ್ರ ಆಗಾಗ ಹೊಸ ಕೀಪ್ಯಾಡ್‌ ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. “ಮೊಬೈಲ್‌ ಫೋನೆಂದರೆ ಅದು ನೋಕಿಯಾ. ಅದನ್ನು ಹೊರತುಪಡಿಸಿ ಇನ್ಯಾವ ಫೋನ್‌ ಸಹ ಫೋನ್‌ ಅಲ್ಲ’ ಎನ್ನುತ್ತಿದ್ದ ಕಾಲವೊಂದಿತ್ತು. 1 ಸಾವಿರದಿಂದ 20 ಸಾವಿರದವರೆಗೂ ನೋಕಿಯಾ, ಕೀಪ್ಯಾಡ್‌ ಫೋನ್‌ಗಳು ದೊರಕುತ್ತಿದ್ದವು. ತನ್ನ ಪರಂಪರೆಯನ್ನು ಬಿಡದ ನೋಕಿಯಾ ಕೀಪ್ಯಾಡ್‌ ಫೋನ್‌ಗಳ ತಯಾರಿಕೆಯನ್ನು ನಿಲ್ಲಿಸಿಲ್ಲ. ಅದಕ್ಕಾಗಿ ಕೀಪ್ಯಾಡ್‌ ಫೋನ್‌ಗಳನ್ನೇ ನೆಚ್ಚಿಕೊಂಡವರು ನೋಕಿಯಾಗೆ ಥ್ಯಾಂಕ್ಸ್‌ ಹೇಳಬೇಕು.

ಅಗತ್ಯ ಇರುವುದೆಲ್ಲವೂ ಇದರಲ್ಲಿದೆ: “ನೋಕಿಯಾ 110′, ಹೆಸರು ಕೇಳಿದೊಡನೆ ದಶಕಗಳ ಹಿಂದೆ ಬಳಕೆಯಲ್ಲಿದ್ದ ನೋಕಿಯಾ 3310, 3315, 1100 ಇತ್ಯಾದಿ ಹೆಸರುಗಳು ನೆನಪಿಗೆ ಬರಲಿಕ್ಕೂ ಸಾಕು! ಇದು 1.77 ಇಂಚಿನ ಕ್ಯೂಕ್ಯೂ ವಿಜಿಎ ಕಲರ್‌ ಡಿಸ್‌ಪ್ಲೇ ಹೊಂದಿದೆ. 115 ಮಿ.ಮೀ. ಉದ್ದ, 50 ಮಿ.ಮೀ ಅಗಲ, 14 ಮಿ.ಮೀ. ದಪ್ಪ ಹೊಂದಿದೆ. ಇದು ನೋಕಿಯಾ ಸಿರೀಸ್‌30 ಪ್ಲಸ್‌ ಸಾಫ್ಟ್ವೇರ್‌ ಹೊಂದಿದೆ. 4 ಎಂ.ಬಿ ರ್ಯಾಮ್‌ ಇದ್ದು, ಆಂತರಿಕ ಮೆಮೋರಿ ಸಹ 4 ಎಂ.ಬಿ ಇದೆ, ಇದು ಕಾಂಟ್ಯಾಕ್ಟ್ಗಳನ್ನು ಶೇಖರಿಸಿಕೊಳ್ಳಲು ಸಹಕಾರಿ.

ಆದರೆ, ನೀವು ಹೆಚ್ಚುವರಿಯಾಗಿ 32 ಜಿಬಿ ಮೆಮೊರಿ ಕಾರ್ಡ್‌ ಹಾಕಿಕೊಳ್ಳಬಹುದು. ಎಫ್ಎಂ ರೇಡಿಯೋ ಇದ್ದು, ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ ಕನೆಕ್ಟ್ ಮಾಡಲು 3.5 ಎಂ.ಎಂ. ಆಡಿಯೋ ಜಾಕ್‌ ಇದೆ. ಎಂ.ಪಿ3 ಹಾಡುಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಕೇಳಬಹುದು. 800 ಎಂಎಎಚ್‌ ರಿಮೂವೆಬಲ್‌ (ಬದಲಿಸಬಹುದಾದ) ಬ್ಯಾಟರಿ ಇದೆ. ಸತತ 14 ಗಂಟೆಗಳ ಕಾಲ ಮಾತನಾಡುವ, ಎಂ.ಪಿ3 ಪ್ಲೇಯರ್‌ನಲ್ಲಿ 27 ಗಂಟೆಗಳ ಕಾಲ ಹಾಡು ಕೇಳುವುದಕ್ಕೆ ಸಾಕಾಗುವಷ್ಟು ಪವರ್‌ ಬ್ಯಾಟರಿ ಹೊಂದಿದೆ ಎಂದು ಕಂಪೆನಿ ಹೇಳಿದೆ.

Advertisement

ಹಳೆಯ ಗೇಮ್‌ಗಳಿವೆ: ಬ್ಯಾಟರಿ ಚಾರ್ಜ್‌ ಮಾಡಲು ಮೈಕ್ರೋ ಯುಎಸ್‌ಬಿ ಪೋರ್ಟ್‌ ಇದೆ. ಅಂದಹಾಗೆ, ಇದು ಡ್ಯುಯೆಲ್‌ ಸಿಮ್‌ ಮೊಬೈಲ್‌. ಮಿನಿ ಸಿಮ್‌ ಹಾಕಬೇಕು. (ಈಗ ನೆಟ್‌ವರ್ಕ್‌ ಕಂಪೆನಿಗಳು ಒಂದೇ ಸಿಮ್‌ ಅನ್ನು ನಿಮಗೆ ಯಾವ ಸೈಜ್‌ ಬೇಕಾದರೂ ಹಾಕಿಕೊಳ್ಳುವ ರೀತಿ, ಮೊದಲೇ ಕತ್ತರಿಸಿ ಮಾರ್ಕ್‌ ಮಾಡಿರುತ್ತವೆ. ಹಾಗಾಗಿ ಹಿಂದಿನಂತೆ ದೊಡ್ಡ ಸಿಮ್‌, ಮಿನಿ ಸಿಮ್‌ ಅಥವಾ ನ್ಯಾನೋ ಸಿಮ್‌ ಎಲ್ಲ ಒಂದೇ ಸಿಮ್‌ನಲ್ಲಿ ಇರುತ್ತವೆ). ಫೋನನ್ನು ಗುಣಮಟ್ಟದ ಪಾಲಿಕಾರ್ಬೊನೇಟ್‌ನಿಂದ ತಯಾರಿಸಲಾಗಿದೆ. ನೆಪಕ್ಕೊಂದು ಕ್ಯೂ ವಿಜಿಎ ಹಿಂಬದಿ ಕ್ಯಾಮರಾ ಇದೆ. ಆದರೆ, ಇದರಿಂದ ಹೆಚ್ಚೇನೂ ನಿರೀಕ್ಷಿಸುವಂತಿಲ್ಲ. ಇದರ ವಿನ್ಯಾಸ ಚೆನ್ನಾಗಿದೆ.

ಕರೆ ಮಾಡಲು, ನಂಬರ್‌ಗಳನ್ನು ಒತ್ತಲು, ಕೀ ಪ್ಯಾಡ್‌ಗಳನ್ನು ಸುಲಭವಾಗಿ ಗುರುತಿಸುವಂತೆ ವಿನ್ಯಾಸ ಮಾಡಲಾಗಿದೆ. ಇದರಲ್ಲಿ ಎಲ್‌ಇಡಿ ಟಾರ್ಚ್‌ ಲೈಟ್‌ ಸೌಲಭ್ಯ ಕೂಡಾ ಇದೆ. ಹಿಂದೆ ನೋಕಿಯಾ ಫೋನ್‌ ಬಳಸುತ್ತಿದ್ದವರ ಫೇವರಿಟ್‌ ಆಗಿದ್ದ ಸ್ನೇಕ್‌ಗೇಮ್‌ ಸಹ ಇದರಲ್ಲಿದೆ! ಜೊತೆಗೆ ನಿಂಜಾ ಅ್ಯಪ್‌, ಏರ್‌ ಸ್ಟ್ರೈಕ್‌, ಫ‌ುಟ್‌ಬಾಲ್‌ ಕಪ್‌ ಮತ್ತು ಡೂಡಲ್‌ ಜಂಪ್‌ ಗೇಮ್‌ಗಳನ್ನು ಇನ್‌ಸ್ಟಾಲ್‌ ಮಾಡಲಾಗಿದೆ. ಒಟ್ಟಿನಲ್ಲಿ, 1600 ರೂ. ದರದ ಆಸುಪಾಸಿನಲ್ಲಿ ಚೆನ್ನಾಗಿರುವ ಕೀಪ್ಯಾಡ್‌ ಫೋನೊಂದು ಬೇಕು ಎನ್ನುವವರು ಇದನ್ನು ಪರಿಗಣಿಸಬಹುದು. ಈ ಫೋನಿನ ದರ 1600 ರೂ. ಪಿಂಕ್‌ ಮತ್ತು ಕಪ್ಪು ಬಣ್ಣದಲ್ಲಿ ದೊರಕುತ್ತದೆ. ಸದ್ಯಕ್ಕೆ ನಿಮ್ಮೂರಿನ ಮೊಬೈಲ್‌ ಅಂಗಡಿಗಳಲ್ಲಿ ಮತ್ತು ನೋಕಿಯಾ ಆನ್‌ಲೈನ್‌ ಸ್ಟೋರ್‌ನಲ್ಲಿ ಲಭ್ಯವಿದೆ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next