ನೋಕಿಯಾ ಕಂಪೆನಿ ಭಾರತದಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಹೊಸ ಮೊಬೈಲ್ ಪೋನ್ ನೋಕಿಯಾ ಸಿ20 ಪ್ಲಸ್. ಭರ್ಜರಿ ಬ್ಯಾಟರಿ ಬಾಳಿಕೆ ಇದರ ವಿಶೇಷ. 4950 ಎಂಎಎಚ್ ಬ್ಯಾಟರಿ ಇದ್ದರೂ, ಇದೇ ಶ್ರೇಣಿಯ ಇತರ ಮೊಬೈಲ್ ಗಳಿಗಿಂತ ಹೆಚ್ಚಿನ ಸಮಯ ಬ್ಯಾಟರಿ ಬಾಳಿಕೆ ಬರುತ್ತದೆ. ಹಾಗೆ ನೋಡಿದರೆ, ನೋಕಿಯಾದ ಕೀಪ್ಯಾಡ್ ಫೋನ್ ಗಳೂ ಹಿಂದೆ ಬ್ಯಾಟರಿ ಬಾಳಿಕೆಗೆ ಪ್ರಸಿದ್ಧವಾಗಿದ್ದವಲ್ಲವೇ!
ಈ ಫೋನ್ ಆರಂಭಿಕ ದರ್ಜೆಯದು. 2 ಜಿಬಿ ರ್ಯಾಮ್ ಮತ್ತು 32 ಜಿಬಿ ಆಂತರಿಕ ಸಂಗ್ರಹ ಹಾಗೂ 3ಜಿಬಿ ರ್ಯಾಮ್ ಮತ್ತು 32 ಜಿಬಿ ಸಂಗ್ರಹದೊಡನೆ ಲಭ್ಯವಿದೆ. ಬೆಲೆ ಕ್ರಮವಾಗಿ 8,999 ರೂ. ಮತ್ತು 9,999 ರೂ. ನೀಲಿ ಮತ್ತು ಬೂದು ಬಣ್ಣದಲ್ಲಿ ಲಭ್ಯ.
ಬಜೆಟ್ ದರದಲ್ಲಿ ಕೊಳ್ಳಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಮಾಡೆಲ್ ಹೊರತರಲಾಗಿದೆ. ಇದರ ವಿನ್ಯಾಸ ಬಹಳ ಸದೃಢವಾಗಿದೆ. ಗಟ್ಟಿಮುಟ್ಟಾದ ಪಾಲಿಕಾರ್ಬೊನೇಟ್ ಬಾಡಿ ಹೊಂದಿದೆ. ಕೈಯಲ್ಲಿ ಹಿಡಿದಾಗಲೇ ಅದು ಅನುಭವಕ್ಕೆ ಬರುತ್ತದೆ. ಭರ್ಜರಿ ಬ್ಯಾಟರಿ ಇರುವುದರಿಂದ ಸ್ವಲ್ಪ ತೂಕವಾಗಿದೆ. ಫೋನ್ ಕೈಯಲ್ಲಿ ಜಾರದಂತೆ ಹಿಂಬದಿ ತರಿಯಾದ ವಿನ್ಯಾಸ ಮಾಡಲಾಗಿದೆ.
6.5 ಇಂಚಿನ ಐಪಿಎಸ್ ಎಲ್‍ಸಿಡಿ ಪರದೆ ನೀಡಲಾಗಿದೆ. ಎಚ್‍ಡಿ ಪ್ಲಸ್ (1440*720) ರೆಸ್ಯೂಲೇಷನ್ ಇದೆ. ಆದರೂ ಪರದೆಯ ವೀಕ್ಷಣೆ ತೃಪ್ತಿಕರವಾಗಿದೆ.
ಇದರಲ್ಲಿರುವುದು ಯೂನಿಸೋಕ್ ಎಸ್9863ಎ ಪ್ರೊಸೆಸರ್. ಸ್ನಾಪ್‍ಡ್ರಾಗನ್, ಮೀಡಿಯಾಟೆಕ್, ಎಕ್ಸಿನೋಸ್, ಕಿರಿನ್ ಪ್ರೊಸೆಸರ್ ಹೆಸರುಗಳು ಪರಿಚಿತ. ಆದರೆ ಯೂನಿಸೋಕ್ ಪ್ರೊಸೆಸರ್ ಅಷ್ಟಾಗಿ ಪರಿಚಯವಾಗಿಲ್ಲ. ಇದಕ್ಕೆ ಆಂಡ್ರಾಯ್ಡ್ 11 ಗೋ ಎಡಿಷನ್ ನೀಡಲಾಗಿದೆ. ಪ್ಯೂರ್ ಆಂಡ್ರಾಯ್ಡ್ ಅನುಭವ ದೊರಕುತ್ತದೆ. ಪ್ರೊಸೆಸರ್ ವೇಗ ಪರವಾಗಿಲ್ಲ. ಬಜೆಟ್ ದರದ ಫೋನಿನಲ್ಲಿ ಹೆಚ್ಚು ವೇಗ ನಿರೀಕ್ಷಿಸುವಂತೆಯೂ ಇಲ್ಲ!
ಕ್ಯಾಮರಾ ವಿಭಾಗಕ್ಕೆ ಬಂದರೆ, ಹಿಂಬದಿ 8 ಮೆ.ಪಿ. ಮುಖ್ಯ ಕ್ಯಾಮರಾ ಹಾಗೂ 2 ಮೆ.ಪಿ. ಡೆಪ್ತ್ ಲೆನ್ಸ್ ಇರುವ ಎರಡು ಕ್ಯಾಮರಾ ಇದೆ. ಮುಂಬದಿಗೆ 5 ಮೆ.ಪಿ. ಕ್ಯಾಮರಾ ನೀಡಲಾಗಿದೆ. ಬೆಳಗಿನ ವೇಳೆಯ, ಬೆಳಕು ಚೆನ್ನಾಗಿರುವ ಕಡೆ ಫೋಟೋಗಳು ಆ ದರದ ಫೋನುಗಳ ಹೋಲಿಕೆಯಲ್ಲಿ ಚೆನ್ನಾಗಿ ಮೂಡಿಬರುತ್ತವೆ. ಕಡಿಮೆ ಬೆಳಕಿನ ಒಳಾಂಗಣ ಹಾಗೂ ರಾತ್ರಿ ವೇಳೆಯಲ್ಲಿ ಅಷ್ಟೊಂದು ಚೆನ್ನಾಗಿ ಬರುವುದಿಲ್ಲ. ಮುಂಬದಿ ನೀಡಿರುವ ಸೆಲ್ಫೀ ಕ್ಯಾಮರಾ ಪರವಾಗಿಲ್ಲ. ಒಟ್ಟಾರೆ ಇದು ಎಂಟ್ರಿ ಲೆವೆಲ್ ಫೋನ್ ಆದ್ದರಿಂದ ಕ್ಯಾಮರಾ ವಿಭಾಗದಿಂದ ಹೆಚ್ಚು ನಿರೀಕ್ಷಿಸುವಂತಿಲ್ಲ.
ಇದರ ಬ್ಯಾಟರಿ ಬಾಳಿಕೆ ಆರಂಭದಲ್ಲೇ ಹೇಳಿದಂತೆ ಚೆನ್ನಾಗಿದೆ. ಫುಲ್ ಎಚ್‍ಡಿ ಪರದೆ ಇಲ್ಲದ್ದು, ಪವರ್ ಫುಲ್ ಪ್ರೊಸೆಸರ್ ಇಲ್ಲದಿರುವುದೂ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಕಾರಣ. ಎರಡು ದಿನ ಬ್ಯಾಟರಿಗೆ ಅಡ್ಡಿಯಿಲ್ಲ. ಈಗ ಬರುತ್ತಿರುವ ಫೋನ್‍ಗಳಿಗೆ ಯುಎಸ್‍ಬಿ ಟೈಪ್ ಸಿ ಪೋರ್ಟ್ ನೀಡಲಾಗಿರುತ್ತದೆ. ಈ ಫೋನಿನಲ್ಲಿ ಹಳೆಯ ಮೈಕ್ರೋ ಯುಎಸ್‍ಬಿ ಪೋರ್ಟ್ ಇದೆ. ಇದಕ್ಕೆ 10 ವ್ಯಾಟ್ಸ್ ಚಾರ್ಜರ್ ನೀಡಲಾಗಿದೆ.
ಇದನ್ನೂ ಓದಿ:‘’ಮನಿ ಹೈಸ್ಟ್’’ ಜಗತ್ತನ್ನೇ ದೋಚಿಬಿಟ್ಟ ಖದೀಮರ ಕತೆ…!
ಪ್ರತಿಸ್ಪರ್ಧಿ ಕಂಪೆನಿಗಳು 10 ಸಾವಿರ ರೂ.ಗೆ ಇದಕ್ಕಿಂತ ಹೆಚ್ಚು ಸ್ಪೆಸಿಫಿಕೇಷನ್ ನೀಡುತ್ತವೆ. ಆದರೆ ನೋಕಿಯಾ ತನ್ನ ಗ್ರಾಹಕನಿಗೆ ಹೆಚ್ಚು ಬಾಳಿಕೆ ದೊರಕಿಸುವ ಭರವಸೆಯನ್ನು ಇದರಲ್ಲಿ ನೀಡುತ್ತದೆ. ಎರಡು ವರ್ಷಗಳ ಕಾಲ ಇದಕ್ಕೆ ಸಾಫ್ಟ್ ವೇರ್ ಅಪ್ ಡೇಟ್ ಮತ್ತು ಸೆಕ್ಯುರಿಟಿ ಅಪ್ ಡೇಟ್ ನೀಡುವುದಾಗಿ ತಿಳಿಸಿದೆ.
ಇದಕ್ಕಿಂತಲೂ ವಿಶೇಷವೆಂದರೆ, ಒಂದು ವರ್ಷದೊಳಗೆ ಫೋನ್ ನಲ್ಲಿ ದೋಷ ಕಾಣಿಸಿಕೊಂಡರೆ, ರಿಪೇರಿಗೆ ಬಂದರೆ ರಿಪ್ಲೇಸ್‍ಮೆಂಟ್ ಗ್ಯಾರಂಟಿ ನೀಡಿದೆ. ಅಂದರೆ ಫೋನ್ ಕೆಟ್ಟರೆ ಹೊಸ ಫೋನನ್ನೇ ಬದಲಿಯಾಗಿ ನೀಡುತ್ತದೆ. ಈ ಅಂಶಗಳನ್ನು ಈಡೇರಿಸಲು ಸ್ಪೆಸಿಫಿಕೇಷನ್‍ನಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎನಿಸುತ್ತದೆ. ನೋಕಿಯಾ ಫೋನ್ ಬೇಕು, ಗಟ್ಟಿಮುಟ್ಟಾಗಿರಬೇಕು, ಬಜೆಟ್ 10 ಸಾವಿರದೊಳಗಿರಬೇಕು ಎನ್ನುವವರಿಗೆ ಸೂಕ್ತ ಫೋನ್ ಇದಾಗಿದೆ.
-ಕೆ.ಎಸ್. ಬನಶಂಕರ ಆರಾಧ್ಯ