Advertisement

Parliament: ಗದ್ದಲ, ಗದ್ದಲ, ಗದ್ದಲ ಮತ್ತು ಗದ್ದಲ

12:06 AM Aug 12, 2023 | Team Udayavani |

ಹೊಸದಿಲ್ಲಿ: ಜು.20ಕ್ಕೆ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನ ಆ.11ಕ್ಕೆ ಮುಗಿದಿದೆ. ಇಡೀ ಅಧಿವೇಶನವನ್ನು ಸಂಪೂರ್ಣವಾಗಿ ಗದ್ದಲವೇ ಆಪೋಶನ ಪಡೆಯಿತು. ಅಧಿವೇಶನದ ಮುನ್ನವೇ ಗದ್ದಲದ ನಿರೀಕ್ಷೆಯಿತ್ತು. ಅದರಂತೆಯೇ ಇಡೀ ಅಧಿವೇಶನ ಗದ್ದಲದಿಂದಲೇ ಆರಂಭವಾಗಿ, ಗದ್ದಲದಲ್ಲೇ ಮುಗಿದುಹೋಗಿದೆ. ಮಣಿಪುರ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಸಂಸತ್ತಿನೊಳಗೆ ಪ್ರಧಾನಿ ಮೋದಿ ಹೇಳಿಕೆ ನೀಡಬೇಕೆಂಬ ಪಟ್ಟನ್ನು ವಿಪಕ್ಷಗಳು ಸಡಿಲಿಸಲಿಲ್ಲ. ಇನ್ನೊಂದು ಕಡೆ ಮೋದಿ ಸದನದೊಳಕ್ಕೆ ಅಂತಿಮ ದಿನದವರೆಗೆ ಕಾಲಿಡಲಿಲ್ಲ! ಕಡೆಗೆ ಅವಿಶ್ವಾಸ ಗೊತ್ತುವಳಿಯೂ ಅರ್ಥಪೂರ್ಣವಾಗಿ ಮುಗಿಯಲಿಲ್ಲ. ತಾವೇ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರೂ, ಅದನ್ನು ಮತಕ್ಕೆ ಹಾಕುವಾಗ ವಿಪಕ್ಷಗಳೇ ಸದನದಲ್ಲಿರಲಿಲ್ಲ. ಅಂತಿಮ ಫ‌ಲಿತಾಂಶ ಗದ್ದಲ, ಗದ್ದಲ ಮತ್ತು ಗದ್ದಲ ಮಾತ್ರ.

Advertisement

ನಡೆದಿದ್ದು ಬರೀ 17 ಕಲಾಪ: ಮಣಿಪುರ ಹಿಂಸಾಚಾರದ ವಿರುದ್ಧದ ನಿರಂತರ ಪ್ರತಿಭಟನೆಗೆ ಸಾಕ್ಷಿಯಾದ ಸಂಸತ್‌ನ ಎರಡೂ ಸದನಗಳು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿವೆ. ಕಾಂಗ್ರೆಸ್‌ ಸದಸ್ಯ ಗೌರವ್‌ ಗೊಗೋಯ್‌ ಮಂಡಿಸಿದ್ದ ಕೇಂದ್ರ ಬಿಜೆಪಿ ಸರಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿ ಕುರಿತು ಸುಮಾರು 20 ಗಂಟೆಗಳ ಕಾಲ ಚರ್ಚೆ ನಡೆದಿದ್ದು, 60 ಸದಸ್ಯರು ಇದರಲ್ಲಿ ಭಾಗಿಯಾಗಿದ್ದರು. ಈ ಅಧಿವೇಶನದಲ್ಲಿ ಸುಮಾರು 44 ಗಂಟೆ, 13 ನಿಮಿಷಗಳ ಕಾಲ ಒಟ್ಟಾರೆ 17 ಕಲಾಪಗಳು ನಡೆದಿವೆ. 20 ಸರಕಾರಿ ಮಸೂದೆಗಳು ಮಂಡನೆಯಾಗಿದ್ದು, 22 ಕರಡು ಮಸೂದೆಗಳು ಲೋಕಸಭೆಯಲ್ಲಿ ಅಂಗೀಕಾರಗೊಂಡವು ಎಂದು ಸ್ಪೀಕರ್‌ ಓಂ ಬಿರ್ಲಾ ತಿಳಿಸಿದ್ದಾರೆ.

ಕೊನೆ ದಿನವೂ ಬಹಿಷ್ಕಾರ: ಲೋಕಸಭೆ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರ ಅಮಾನತು ಖಂಡಿಸಿ ಶುಕ್ರವಾರ ವಿಪಕ್ಷಗಳ ಒಕ್ಕೂಟದ ಸದಸ್ಯರು ಲೋಕಸಭೆ ಕಲಾಪವನ್ನು ಬಹಿಷ್ಕರಿಸಿ ಹೊರನಡೆದವು. ಜತೆಗೆ ಸ್ಪೀಕರ್‌ ಓಂ ಬಿರ್ಲಾ ಆಯೋಜಿಸಿದ್ದ ಚಹಾಕೂಟವನ್ನೂ ಐಎನ್‌ಡಿಐಎ ನಾಯಕರು ಬಹಿಷ್ಕರಿಸಿದರು. ಅಲ್ಲದೇ ಪ್ರತಿಭಟನಾರ್ಥವಾಗಿ ಸಂಸತ್‌ ಆವರಣದಲ್ಲಿರುವ ಡಾ| ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಯವರೆಗೆ ಪಾದಯಾತ್ರೆ ನಡೆಸಿದ್ದೂ ಕಂಡುಬಂತು. ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಚೌಧರಿ ಅವರನ್ನು ಗುರುವಾರ ಅಮಾನತು ಮಾಡಲಾಗಿತ್ತು. ಇದೇ ವೇಳೆ ಆಮ್‌ ಆದ್ಮಿ ಪಕ್ಷದ ರಾಜ್ಯಸಭೆ ಸದಸ್ಯರಾದ ರಾಘವ್‌ ಛಡ್ಡಾರನ್ನು ರಾಜ್ಯಸಭೆಯಿಂದ ಶುಕ್ರವಾರ ಅಮಾನತು ಮಾಡಲಾಯಿತು.

ಪ್ರಧಾನಿ ನಾಚಿಕೆಯಿಲ್ಲದಂತೆ ನಗುತ್ತಿದ್ದರು: ರಾಹುಲ್‌

“ಲೋಕಸಭೆಯಲ್ಲಿ ಮಣಿಪುರದಂಥ ಗಂಭೀರ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಪ್ರಧಾನಿ ಮೋದಿ ಅವರು ಜೋಕ್‌ ಮಾಡುತ್ತಾ, ವ್ಯಂಗ್ಯವಾಡುತ್ತಾ ಮಾತನಾಡುತ್ತಿದ್ದರು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ಶುಕ್ರವಾರ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಹುಲ್‌ “ನಿನ್ನೆ ಪ್ರಧಾನಿ ಮೋದಿಯವರು ಸುಮಾರು 2 ಗಂಟೆ, 13 ನಿಮಿಷಗಳ ಕಾಲ ಮಾತನಾಡಿದರು. ಇಡೀ ಭಾಷಣದಲ್ಲಿ ಕೊನೆಗೆ ಕೇವಲ 2 ನಿಮಿಷ ಮಾತ್ರ ಮಣಿಪುರದ ಬಗ್ಗೆ ಪ್ರಸ್ತಾವಿಸಿದರು. ಮಣಿಪುರವು ಹಲವು ತಿಂಗಳುಗಳಿಂದ ಹೊತ್ತಿ ಉರಿಯುತ್ತಿದೆ, ಜನರ ಸರಣಿ ಹತ್ಯೆ, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಮೋದಿಯವರು ನಾಚಿಕೆಯಿಲ್ಲದಂತೆ ನಗುತ್ತಾ, ಜೋಕ್‌ ಮಾಡುತ್ತಾ ಮಾತನಾಡುತ್ತಿದ್ದರು. ಇದು ಅವರ ಘನತೆಗೆ ತಕ್ಕುದಲ್ಲ’ ಎಂದು ಟೀಕಿಸಿದರು. ಮಣಿಪುರದ ಬೆಂಕಿಯನ್ನು ಆರಿಸಲು ಭಾರತೀಯ ಸೇನೆಗೆ 2 ದಿನಗಳು ಸಾಕು. ಆದರೆ ನಮ್ಮ ಪ್ರಧಾನಮಂತ್ರಿಗೆ ಮಣಿಪುರದ ಬೆಂಕಿ ಆರಿಸುವುದು ಬೇಕಾಗಿಲ್ಲ ಎಂದೂ ರಾಹುಲ್‌ ಹೇಳಿದರು.

Advertisement

ನಿವೃತ್ತ ಯೋಧರ ಕಲ್ಯಾಣ ನಿಧಿ ಹೆಚ್ಚಳ:ರಾಜನಾಥ್‌

ನಿವೃತ್ತ ಸೈನಿಕರು ಹಾಗೂ ಅವರ ಕುಟುಂಬಗಳ ಕಲ್ಯಾಣಕ್ಕೆ ನೀಡುತ್ತಿರುವ ಅನುದಾನವನ್ನು ಕೇಂದ್ರ ಸರಕಾರ ಹೆಚ್ಚಳಗೊಳಿಸಿದೆ. ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಈ ಪ್ರಸ್ತಾವವನ್ನು ಅನು ಮೋದಿಸಿದ್ದಾರೆ. ನಿವೃತ್ತ ಯೋಧರು ಮತ್ತವರ ಕುಟುಂಬಗಳನ್ನು ಪ್ರಧಾನಿ ಮೋದಿ ನೇತೃತ್ವದ ಸರಕಾರ ಆದ್ಯತೆಯಾಗಿ ಪರಿಗಣಿಸುತ್ತದೆ. ಈ ಹಿನ್ನೆಲೆಯಲ್ಲಿ ಸುಗಮ ಜೀವನ ನಿರ್ವಹಣೆ ನೀತಿಯ ಅನ್ವಯ ಹಣಕಾಸು ನೆರವನ್ನು ಹೆಚ್ಚಿಸಲಾಗಿದೆ ಎಂದು ರಾಜನಾಥ್‌ ತಿಳಿಸಿದ್ದಾರೆ. ಹೊಸ ಬದಲಾವಣೆಯ ಪ್ರಕಾರ, ಹುತಾತ್ಮ ಯೋಧರ ಪತ್ನಿಯರಿಗೆ ತರಬೇತಿಗೆ ನೀಡುವ ಅನುದಾನವನ್ನು 20 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಜತೆಗೆ ಪಿಂಚಣಿದಾರರಲ್ಲದ ನಿವೃತ್ತ ಸೈನಿಕರು ಅಥವಾ ವಿಧವೆಯರಿಗೆ ನೀಡಲಾಗುತ್ತಿದ್ದ ವೈದ್ಯಕೀಯ ಅನುದಾನವನ್ನು 30,000 ರೂ.ಗಳಿಂದ 50,000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಅಲ್ಲದೇ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ನೀಡುವ ಅನುದಾನವನ್ನು 1.25 ಲಕ್ಷ ರೂ.ಗಳಿಂದ 1.50 ಲಕ್ಷ ರೂ.ಗಳಿಗೆ ಏರಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.

ಚು.ಆಯೋಗವನ್ನು ನಿಯಂತ್ರಿಸಲು ಯತ್ನ

ಮುಖ್ಯ ಚುನಾವಣ ಆಯುಕ್ತರು ಮತ್ತು ಇತರೆ ಚುನಾವಣ ಆಯುಕ್ತರ ನೇಮಕದ ಮೇಲೆ ನಿಯಂತ್ರಣ ಹೇರುವ ಮಸೂದೆಯ ಕುರಿತು ಟೀಕೆ ಮುಂದುವರಿಸಿರುವ ಕಾಂಗ್ರೆಸ್‌, “ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ, ಚುನಾವಣ ಆಯೋಗದ ಮೇಲೆ ನಿಯಂತ್ರಣ ಸಾಧಿಸುವುದೇ ಕೇಂದ್ರ ಸರಕಾರದ ಉದ್ದೇಶ’ ಎಂದು ಆಕ್ರೋಶ ವ್ಯಕ್ತಪಡಿಸಿದೆ. “ಸಾಂವಿಧಾನಿಕ ಸಂಸ್ಥೆಗಳ ನೇಮಕವನ್ನು ಯಾವತ್ತೂ ನಿಷ್ಪಕ್ಷವಾಗಿ ಮಾಡುವ ಮೂಲಕ ಪಕ್ಷಪಾತೀಯವಾಗಿ ಆಯ್ಕೆ ಮಾಡಲಾಗಿದೆ ಎಂಬ ಭಾವನೆ ಮೂಡದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿ ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರು 2012ರಲ್ಲಿ ಅಂದಿನ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಅವರಿಗೆ ಬರೆದಿದ್ದ ಪತ್ರವನ್ನು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಹಂಚಿಕೊಂಡಿದ್ದಾರೆ.

ಜಿಎಸ್‌ಟಿ ತಿದ್ದುಪಡಿ ಮಸೂದೆ ಅಂಗೀಕಾರ

ಆನ್‌ಲೈನ್‌ ಗೇಮಿಂಗ್‌, ಕ್ಯಾಸಿನೋಗಳು ಮತ್ತು ಕುದುರೆ ರೇಸ್‌ ಕ್ಲಬ್‌ಗಳ ಮೇಲೆ ಶೇ.28ರಷ್ಟು ತೆರಿಗೆ ವಿಧಿಸುವ ಕೇಂದ್ರ ಮತ್ತು ಸಮಗ್ರ ಜಿಎಸ್‌ಟಿ ಕಾನೂನುಗಳಿಗೆ ತಿದ್ದುಪಡಿ ತರುವ ಮಸೂದೆಗಳು ಶುಕ್ರವಾರ ಸಂಸತ್‌ನ ಅಂಗೀಕಾರ ಪಡೆದಿವೆ. ಅದರಂತೆ ಮುಂದೆ ರಾಜ್ಯಗಳು ತಮ್ಮ ತಮ್ಮ ವಿಧಾನಸಭೆಗಳಲ್ಲಿ ರಾಜ್ಯ ಜಿಎಸ್‌ಟಿ ಕಾನೂನುಗಳ ತಿದ್ದುಪಡಿಗೆ ಅಂಗೀಕಾರ ಪಡೆಯಬೇಕು. ಕಳೆದ ವಾರವಷ್ಟೇ ಜಿಎಸ್‌ಟಿ ಮಂಡಳಿಯು ಈ ತಿದ್ದುಪಡಿಗಳಿಗೆ ಒಪ್ಪಿಗೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next