Advertisement

ಅನ್ನದಾತರ ಬವಣೆ ಯಾರೂ ಪರಿಹರಿಸಿಲ್ಲ

11:24 AM Nov 19, 2017 | Team Udayavani |

ಬೆಂಗಳೂರು: “ಈವರೆಗೆ ಆಡಳಿತ ನಡೆಸಿದ ಯಾವ ಸರ್ಕಾರವೂ ರೈತರ ಬವಣೆ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಪ್ರಯತ್ನ ಮಾಡಿದ್ದರೂ ಯಶಸ್ವಿಯಾಗಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

Advertisement

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ-2017ರ 3ನೇ ದಿನವಾದ ಶನಿವಾರ ಹಾಸನ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. 

ಸಮಾಜದಲ್ಲಿ ಬದುಕಲು ರೈತರಿಗೆ ಒಂದು ಉತ್ತಮ ವೇದಿಕೆ ಮತ್ತು ವ್ಯವಸ್ಥೆಯ ಅಗತ್ಯವಿದ್ದು, ಸ್ವಾಭಿಮಾನ, ಸ್ವಂತಿಕೆಯಿಂದ ಬದುಕಬಲ್ಲೆ ಎಂದು ಧೈರ್ಯ ತುಂಬುವ ಕೆಲಸವಾಗಬೇಕು. ಯಾವುದೇ ಸರ್ಕಾರಗಳು ಮಾಡದ ಆ ಕೆಲಸವನ್ನು ಇಂತಹ ಕೃಷಿ ಮೇಳಗಳು ನಿರ್ವಹಿಸುತ್ತಿವೆ. ಯುವಜನರಲ್ಲಿ ಕೃಷಿಯಿಂದ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬಲ್ಲೆ ಎಂಬ ಆತ್ಮಸ್ಥೈರ್ಯ ಬೆಳೇಸುವ ಕೆಲಸವಾಗುತ್ತಿರುವುದು ಪ್ರಶಂಸಾರ್ಹ ಎಂದರು.

ಯುವಜನರಿಗೆ ವಿಶ್ವಾಸ ಮೂಡುತ್ತಿಲ್ಲ: ಕೃಷಿಯೇ ಬೆನ್ನೆಲುಬಾಗಿರುವ ದೇಶದಲ್ಲಿ ರೈತರ ಮತ್ತು ಕೃಷಿ ಕಾರ್ಮಿಕರ ಅನೇಕ ಸಮಸ್ಯೆಗಳನ್ನು ಪರಿಹರಿಸಲು, ಅವರ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕಾರಣ, ದೇಶದ ಜನಸಂಖ್ಯೆ ಬೆಳೆಯುತ್ತಲೇ ಇದೆ. ಸ್ವಾತಂತ್ರ್ಯಪೂರ್ವದಲ್ಲಿ ಇದ್ದ 33 ಕೋಟಿ ಜನಸಂಖ್ಯೆ ಇಂದು 130 ಕೋಟಿ ಮೀರಿದೆ.

ದುಡಿಯುವ ಕೈಗಳಿಗೆ ಉದ್ಯೋಗ ಬೇಕು ಎನ್ನುವ ಯುವಜನ ಕೃಷಿ ಆಧಾರಿತ ಉದ್ಯೋಗ ಅನುಸರಿಸಿ ಸ್ವಾಭಿಮಾನದಿಂದ ಬದುಕು ಆಗುತ್ತಿಲ್ಲ. ಕೃಷಿ ಲಾಭದಾಯಕ ವೃತ್ತಿಯಲ್ಲ, ಈ ಕ್ಷೇತ್ರಕ್ಕೆ ಮೂಲ ಸೌಲಭ್ಯಗಳೇ ಇಲ್ಲ ಎಂಬ ಅಭಿಪ್ರಾಯವಿರುವ ಕಾರಣ, ಕೃಷಿ ಮೂಲಕ ಭವಿಷ್ಯ ಕಟ್ಟಿಕೊಳ್ಳಬಲ್ಲೆ ಎನ್ನುವ ವಿಶ್ವಾಸ ಯುವಜನರಲ್ಲಿ ಮೂಡುತ್ತಿಲ್ಲ ಎಂದು ಹೇಳಿದರು.

Advertisement

ಹೋಟೆಲ್‌ಗ‌ಳಲ್ಲಿ ಐದಾರು ಸಾವಿರಕ್ಕೆ ದುಡಿಯುವ ಬದಲು ಯುವಕರು ತಮ್ಮದೇ ನೆಲದಲ್ಲಿ ಶ್ರಮ ವಹಿಸಿ ದುಡಿದು, ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿ ಪರಿವರ್ತಿಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ ಎಂದ ಸಚಿವ ಸದಾನಂದಗೌಡ,

ಮಧ್ಯಮ ವರ್ಗದ ಸಣ್ಣ ಹಿಡುವಳಿದಾರರಿಗೆ ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ಸಮಗ್ರ ಮಾಹಿತಿ ನೀಡುವಲ್ಲಿ ಕೃಷಿ ಮೇಳ ಸಹಕಾರಿಯಾಗಿದ್ದು, ಈ ಮೂಲಕ ಕೃಷಿ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕೃಷಿ ವಿವಿ ಕುಲಪತಿ ಡಾ.ಎಚ್‌.ಶಿವಣ್ಣ, ಮಂಡ್ಯ ಕೃಷಿ ಮಹಾವಿದ್ಯಾಲಯ ಡೀನ್‌ ಡಾ.ಟಿ.ಶಿವಶಂಕರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ಹಾಸನ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ ಹಾಗೂ ಹಾಸನ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳ ತಾಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿತರಿಸಿದರು. ಅತ್ಯುತ್ತಮ ವೈಜ್ಞಾನಿಕ ಲೇಖನಗಳಿಗೆ ಡಾ.ಆರ್‌.ದ್ವಾರಕೀನಾಥ್‌ ಮತ್ತು ಪ್ರೊ.ಬಿ.ವಿ.ವೆಂಕಟರಾವ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next