Advertisement

ಕುಂಬ್ಳೆಯ ಬೂಟಿನ ಲೇಸ್‌ ಕಟ್ಟುವ ಯೋಗ್ಯತೆ ಇವರಿಗಿದೆಯೇ?!

11:11 AM May 27, 2017 | Team Udayavani |

ಹೊಸದಿಲ್ಲಿ: ಭಾರತ ತಂಡ ಪ್ರತಿಷ್ಠಿತ ಚಾಂಪಿಯನ್ಸ್‌ ಟ್ರೋಫಿ ಆಡಲು ಇಂಗ್ಲೆಂಡಿಗೆ ತೆರಳಿದ ಹೊತ್ತಿನಲ್ಲೇ ಇತ್ತ ಕೋಚ್‌ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ ಕ್ರಮ ವನ್ನು ಮಾಜಿ ಕ್ರಿಕೆಟಿಗ ಬಿಷನ್‌ ಸಿಂಗ್‌ ಬೇಡಿ ಉಗ್ರವಾಗಿ ಟೀಕಿಸಿದ್ದಾರೆ. ಕುಂಬ್ಳೆ ನಿರ್ವಹಣೆ ಪ್ರಶ್ನಾತೀತ ಎಂದ ಅವರು, ಈ ಬಿಸಿಸಿಐ ಮಂದಿಗೆ ಕುಂಬ್ಳೆ ಬೂಟಿನ ಲೇಸ್‌ ಕಟ್ಟುವ ಯೋಗ್ಯತೆಯಾದರೂ ಇದೆಯೇ ಎಂದು ಪ್ರಶ್ನಿಸಿದ್ದಾರೆ.

Advertisement

“ನಮ್ಮ ತಂಡ ಚಾಂಪಿಯನ್ಸ್‌ ಟ್ರೋಫಿ 
ಉಳಿಸಿಕೊಳ್ಳಲು ಇಂಗ್ಲೆಂಡ್‌ ನೆಲದ ಮೇಲೆ ಕಾಲಿಟ್ಟಿದೆಯಷ್ಟೇ, ಅಷ್ಟರಲ್ಲಿ ಇಲ್ಲಿ ಬಿಸಿಸಿಐ ಮಂದಿ ಕೋಚ್‌ ಅಭ್ಯರ್ಥಿ ಗಳಿಗಾಗಿ ಜಾಹೀರಾತು ನೀಡಿದ್ದಾರೆ. ಇವರಿಗೆ ತಲೆ ಸರಿ ಇದೆಯೇ? ಹೀಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ ಮಂದಿಗೆ ಅನಿಲ್‌ ಕುಂಬ್ಳೆ ಅವರ ಬೂಟಿನ ಲೇಸ್‌ ಕಟ್ಟುವ ಯೋಗ್ಯತೆ ಕೂಡ ಇದೆ ಎಂದು ನನಗನಿಸದು. ನನಗೆ ಈ ಕ್ರಮದಿಂದ ನಿಜಕ್ಕೂ ಆಘಾತವಾಗಿದೆ…’ ಎಂದು ಬೇಡಿ ಎಂದಿನ ಉಗ್ರರೂಪ ತಾಳಿದ್ದಾರೆ. 

ಕುಂಬ್ಳೆ ನಿರ್ವಹಣೆಗೆ ಪ್ರಶಂಸೆ
ಬೇಡಿ ಮೊದಲಿನಿಂದಲೂ ಅನಿಲ್‌ ಕುಂಬ್ಳೆ ಅವರ ಕೋಚ್‌ ನಿರ್ವಹಣೆಯನ್ನು ಪ್ರಶಂಸಿಸುತ್ತ ಬಂದವರು. ಈಗಲೂ ಅವರ ಕರ್ತವ್ಯದ ಬಗ್ಗೆ ಎರಡು ಮಾತಿಲ್ಲ ಎನ್ನುವುದು ಬೇಡಿ ಅನಿಸಿಕೆ. ಅಂದಹಾಗೆ, 1990ರ ಇಂಗ್ಲೆಂಡ್‌ ಪ್ರವಾಸದಲ್ಲಿ ಕುಂಬ್ಳೆ ಟೆಸ್ಟ್‌ ಪಾದಾರ್ಪಣೆ ಮಾಡಿದ ವೇಳೆ ಬೇಡಿಯೇ ತಂಡದ ಮ್ಯಾನೇಜರ್‌ ಆಗಿದ್ದ ರೆಂಬುದು ಉಲ್ಲೇಖನೀಯ. 

ಇತ್ತೀಚೆಗೆ ಕ್ರಿಕೆಟಿಗರ ವೇತನವನ್ನು ಶೇ. 150 ರಷ್ಟು ಪ್ರಮಾಣದಲ್ಲಿ  ಹೆಚ್ಚಿಸಬೇಕೆಂದು ಕುಂಬ್ಳೆ ಬಿಸಿಸಿಐಯನ್ನು ಒತ್ತಾಯಿಸಿದ್ದರು ಹಾಗೂ ಎಲ್ಲದಕ್ಕೂ ಸರ್ವೋಚ್ಚ ನ್ಯಾಯಾ ಲಯ ನೇಮಿಸಿದ ಆಡಳಿತಾಧಿಕಾರಿಗಳತ್ತ ಹೋಗುತ್ತಿದ್ದರು. ಕುಂಬ್ಳೆ ವಿರುದ್ಧ ಬಿಸಿಸಿಐ ಗರಂ ಆಗಿರುವುದಕ್ಕೆ ಇದೇ ಕಾರಣ ಎಂಬುದು ರಹಸ್ಯವೇನಲ್ಲ. ಬೇಡಿ ಕೂಡ ಇದನ್ನೇ ಪ್ರಸ್ತಾವಿಸಿದ್ದಾರೆ.

“ಬಿಸಿಸಿಐ ಸದಸ್ಯರು ಕುಂಬ್ಳೆಯ ಈ ನಡವಳಿಕೆಯನ್ನು ಒಪ್ಪದೇ ಇರ ಬಹುದು, ಅಂದಮಾತ್ರಕ್ಕೆ ಈಗ ಅವರನ್ನು ಗುರಿಯಾಗಿಸುವುದು ಸರಿಯಲ್ಲ. ಕೆಲವರಿಗೆ ಯಾವತ್ತೂ ಯಾವ ಬಗ್ಗೆಯೂ ಸಮಾಧಾನ ಇರುವುದಿಲ್ಲ. ಬಿಸಿಸಿಐಗೆ ಬಿಸಿಸಿಐ ಮೇಲೆ ಸಮಾಧಾನ ಇದೆಯೇ ಎಂಬುದು ನನ್ನ ಪ್ರಶ್ನೆ. ನೆನಪಿರಲಿ, ಈ ಬಿಸಿಸಿಐ ಮಂದಿಯೆಲ್ಲ ಸುಪ್ರೀಂ ಕೋರ್ಟಿನ ಬಾಗಿಲಿನ ಮುಂದೆ ಹೋಗಿ ನಿಂತವರು…’ ಎಂದು ಬೇಡಿ ಚಾಟಿ ಬೀಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next