Advertisement

ಇವರು ನೊಬೆಲ್ ದಂಪತಿಗಳು ; ಪತಿ ಪತ್ನಿ ಗೆದ್ದ ನೊಬೆಲ್ ವಿವರ

10:00 AM Oct 15, 2019 | Hari Prasad |

ಭಾರತೀಯ ಸಂಜಾತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡಫ್ಲೋ ಅವರಿಬ್ಬರಿಗೆ ಈ ಬಾರಿಯ ಅರ್ಥಶಾಸ್ತ್ರ ವಿಭಾಗದಲ್ಲಿನ ನೊಬೆಲ್ ಪ್ರಶಸ್ತಿ ಲಭಿಸಿದೆ. ಈ ದಂಪತಿ ಜೊತೆ ಮೈಕೆಲ್ ಕ್ರೇಮರ್ ಅವರೂ ಸಹ ಬಾರಿ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ.

Advertisement

ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಪತಿ ಪತ್ನಿಯರಿಬ್ಬರೂ ಪಡೆದುಕೊಳ್ಳುವುದು ಒಂದು ವಿಶೇಷ. ಅದರಲ್ಲೂ ನೊಬೆಲ್ ನಂತಹ ಮಹೋನ್ನತ ಪ್ರಶಸ್ತಿಯನ್ನು ಒಂದೇ ವಿಷಯದ ಮೇಲೆ ಅಭಿಜಿತ್ ದಂಪತಿ ಪಡೆದುಕೊಂಡಿರುವುದು ಇನ್ನಷ್ಟು ವಿಶೇಷ.

ಹಾಗಾದರೆ, 1895ರಲ್ಲಿ ಅಲ್ಫ್ರೆಡ್ ನೊಬೆಲ್ ಮೂಲಕ ಪ್ರತಿಷ್ಠಾಪಿಸಲ್ಪಟ್ಟ ಈ ಪ್ರಶಸ್ತಿಯ ಇತಿಹಾಸದಲ್ಲಿ ಅದೆಷ್ಟು ದಂಪತಿಗಳು ಜೊತೆಯಾಗಿ ಅಥವಾ ಬೇರೆ ಬೇರೆಯಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂಬ ವಿವರ ಇಲ್ಲಿದೆ.

ಮೆಡಿಸಿನ್ ವಿಭಾಗದ ಸಾಧಕ ದಂಪತಿ : ಗ್ರೆಟ್ಟಿ ಮತ್ತು ಕಾರ್ಲ್ ಕೋರಿ


ವೈದ್ಯಕೀಯ ಕಾಲೇಜು ದಿನಗಳಿಂದಲೇ ಜೊತೆಗಾರರಾಗಿದ್ದ ಗ್ರೆಟ್ಟಿ ಮತ್ತು ಕಾರ್ಲ್ ಕೋರಿ ವಿವಾಹದ ಬಳಿಕವೂ ತಮ್ಮನ್ನು ವೈದ್ಯಕೀಯ ಸಂಶೋಧನೆಯಲ್ಲಿ ತೊಡಗಿಸಿಕೊಂಡ ದಂಪತಿ. ಗ್ಲೈಕೋಜಿನ್ ಹಾಗೂ ಗ್ಲುಕೋಸ್ ಕುರಿತಾದ 30 ವರ್ಷಗಳ ನಿರಂತರ ಜೊತೆ ಸಂಶೋಧನೆಗೆ ಈ ದಂಪತಿಗೆ 1947ರಲ್ಲಿ ಮೆಡಿಸಿನ್ ವಿಭಾಗದಲ್ಲಿನ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

ವೈದ್ಯಕೀಯ ವ್ಯಾಸಂಗದಿಂದ ಹಿಡಿದು ವಿಯೆನ್ನಾದಿಂದ ನ್ಯೂಯಾರ್ಕ್ ನ ಬಫೆಲೋ ನಗರಕ್ಕೆ ವಲಸೆ ಬರುವಲ್ಲಿವರೆಗೆ ಮತ್ತು ಅಲ್ಲಿಂದ ಬಳಿಕ ವೈದ್ಯಕೀಯ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನೊಬೆಲ್ ಪ್ರಶಸ್ತಿ ಗೆಲುವಿನ ತನಕ ಇವರ ಸಾಂಗತ್ಯ ಮುಂದುವರಿಯುತ್ತದೆ. ಹಾರ್ಮೋನ್ ಗಳು ಹಾಗೂ ಎಂಝಿಮ್ ಗಳು ಹೇಗೆ ಪರಸ್ಪರ ಸಹಕಾರಿಯಾಗಿವೆ ಎಂಬುದು ಈ ದಂಪತಿಯ ಇನ್ನೊಂದು ಮಹತ್ವದ ಸಂಶೋಧನೆಯಾಗಿದೆ.

Advertisement

ಮೇರಿ ಮತ್ತು ಪಿಯರ್ ಕ್ಯೂರಿ


ಭೌತಶಾಸ್ತ್ರದಲ್ಲಿನ ಸಂಶೋಧನೆಗಾಗಿ 1903ರಲ್ಲಿ ಈ ದಂಪತಿ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾದರು. ಈ ದಂಪತಿ 1898ರಲ್ಲಿ ಪೊಲೋನಿಯಮ್ ಮತ್ತು ರೇಡಿಯಂ ಎಂಬೆರಡು ಹೊಸ ವಸ್ತುಗಳನ್ನೇ ಪತ್ತೆಹಚ್ಚುತ್ತಾರೆ.

ಇನ್ನೂ ವಿಶೇಷವೆಂದರೆ ಮೇರಿ ಕ್ಯೂರಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಎರಡೆರಡು ಬಾರಿ ಪಡೆದುಕೊಂಡರು ಮತ್ತು ಹೀಗೆ ಎರಡು ಬಾರಿ ಪ್ರತ್ಯೇಕ ವಿಭಾಗದಲ್ಲಿ (ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ) ನೊಬೆಲ್ ಗೆದ್ದ ಏಕೈಕ ಮಹಿಳೆ ಮಾತ್ರವಲ್ಲದೇ ನೊಬೆಲ್ ಗೌರವಕ್ಕೆ ಪಾತ್ರಳಾದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಯೂ ಮೇರಿಯದ್ದಾಗಿದೆ.

1903ರಲ್ಲಿ ಮೇರಿ ಮತ್ತು ಆಕೆಯ ಪತಿ ಭೌತಶಾಸ್ತ್ರ ಕ್ಷೇತ್ರಕ್ಕಾಗಿರುವ ನೊಬೆಲ್ ಗೌರವವನ್ನು ಪಡೆದುಕೊಂಡರೆ 1911ರಲ್ಲಿ ರಸಾಯನ ಕ್ಷೇತ್ರದ ನೊಬೆಲ್ ಪ್ರಶಸ್ತಿ ಮೇರಿಯನ್ನು ಅರಸಿ ಬಂದಿತ್ತು.

ಇರೆನ್ ಜೋಲಿಯೆಟ್ ಕ್ಯೂರಿ ಮತ್ತು ಫ್ರೆಡೆರಿಕ್ ಜೋಲಿಯೆಟ್


ನೊಬೆಲ್ ವಿಜೇತ ದಂಪತಿ ಪಿಯರ್ ಕ್ಯೂರಿ ಹಾಗೂ ಮೇರಿ ಕ್ಯೂರಿ ಮಗಳಾದ ಇರೆನ್ ತನ್ನ ಹೆತ್ತವರ ಹಾದಿಯಲ್ಲೇ ಸಾಗಿ ರಸಾಯನಶಾಸ್ತ್ರ ವಿಭಾಗದಲ್ಲಿ ಅಚ್ಚಳಿಯದ ಸಾಧನೆ ಮಾಡುತ್ತಾರೆ. ಪಿಯರ್ ಹಾಗೂ ಮೇರಿ ಸ್ಥಾಪಿಸಿದ್ದ ರೇಡಿಯಂ ಇನ್ ಸ್ಟಿಟ್ಯೂಟ್ ನಲ್ಲಿ ರೇಡಿಯೋ ಆ್ಯಕ್ಟಿವಿಟಿಗೆ ಸಂಬಂಧಿಸಿದಂತೆ ಇನ್ನಷ್ಟು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಇರೆನ್ ಗೆ 1924ರಲ್ಲಿ ಫ್ರೆಡೆರಿಕ್ ಜೊತೆಯಾಗುತ್ತಾರೆ. 1926ರಲ್ಲಿ ಇವರಿಬ್ಬರೂ ಮದುವೆಯಾಗುತ್ತಾರೆ.

ನ್ಯೂಟ್ರಾನ್ ಮತ್ತು ಪೊಸಿಟ್ರಾನ್ ಗಳ ಸಂಶೋಧನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ನ್ಯೂಕ್ಲೀಯನ್ನು ಆವಿಷ್ಕರಿಸುವಲ್ಲಿ ಈ ದಂಪತಿ ಹೆಚ್ಚಿನ ಸಂಶೋಧನೆಯನ್ನು ಕೈಗೊಳ್ಳುತ್ತಾರೆ. ಆದರೆ ಈ ದಂಪತಿಯ ಮಹೋನ್ನತ ಆವಿಷ್ಕಾರವೆಂದರೆ ಆರ್ಟಿಫಿಶಿಯಲ್ ರೇಡಿಯೋ ಆ್ಯಕ್ಟಿವಿಟಿ. ಈ ಮಹೋನ್ನತ ಸಂಶೋಧನೆಗಾಗಿ 1935ರಲ್ಲಿ ಈ ದಂಪತಿಗೆ ರಸಾಯನ ಕ್ಷೇತ್ರದಲ್ಲಿನ ನೊಬೆಲ್ ಗೌರವ ಅರಸಿ ಬರುತ್ತದೆ.

ಎರಡು ಭಿನ್ನ ಕ್ಷೇತ್ರಗಳಲ್ಲಿ ನೊಬೆಲ್ ಪಡೆದ ದಂಪತಿ ಗುನ್ನಾರ್ ಮೈಡ್ರಾಲ್ ಹಾಗೂ ಅಲ್ವಾ ಮೈಡ್ರಾಲ್


ಸ್ವೀಡನ್ ದೇಶದ ಅರ್ಥಶಾಸ್ತ್ರಜ್ಞ ಹಾಗೂ ಸಮಾಜಶಾಸ್ತ್ರಜ್ಞ ಕಾರ್ಲ್ ಗುನ್ನಾರ್
ಮೈಡ್ರಾಲ್ ಅವರು ‘ಹಣ ಮತ್ತು ಆರ್ಥಿಕ ಏರಿಳಿತಗಳು ಮತ್ತು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಥಿಕ ವಿಷಯಗಳ ಮೇಲೆ ಇವುಗಳ ಅಂತರ್ ಸಂಬಂಧಗಳ ಕುರಿತಾಗಿರುವ ಸೂಕ್ಷ್ಮಗ್ರಾಹಿ ವಿಶ್ಲೇಷಣೆ ವಿಚಾರದಲ್ಲಿನ ಅನುಪಮ ಕೆಲಸಕ್ಕಾಗಿ 1974ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಾರೆ.

ಇತ್ತ, ಸ್ವೀಡನ್ ದೇಶದ ಸಮಾಜಶಾಸ್ತ್ರಜ್ಞೆ, ರಾಜತಾಂತ್ರಿಕ ನಿಪುಣೆ ಹಾಗೂ ರಾಜಕಾರಣಿಯಾಗಿದ್ದ ಅಲ್ವಾ ಮೈಡ್ರಾಲ್ ಅವರು 1982ರಲ್ಲಿ ಅಲ್ಫೋನ್ಸೋ ಗಾರ್ಸಿಯಾ ರೊಬೆಲ್ಸ್ ಜೊತೆಯಲ್ಲಿ ನೊಬೆಲ್ ಗೌರವಕ್ಕೆ ಪಾತ್ರರಾಗುತ್ತಾರೆ.

ವಿಶೇಷವೆಂದರೆ ಈ ದಂಪತಿ ಕುಟುಂಬ ರಾಜಕಾರಣ ಹಾಗೂ ಕಲ್ಯಾಣಭಿವೃದ್ಧಿ ವಿಚಾರಗಳಲ್ಲಿ ಸಮಾನ ಆಸಕ್ತಿಯನ್ನು ಹೊಂದಿದ್ದರು. ಆದರೆ ಇವರಿಬ್ಬರಿಗೂ ಪ್ರತ್ಯೇಕವಾಗಿ ಈ ಪ್ರತಿಷ್ಠಿತ ಪುರಸ್ಕಾರ ಸಂದಿದೆ ಮತ್ತು ಹೀಗೆ ಪ್ರತ್ಯೇಕ ವಿಭಾಗಗಳಲ್ಲಿ ನೊಬೆಲ್ ಪ್ರಶಸ್ತಿ ಗೆದ್ದ ಮೊಟ್ಟಮೊದಲ ದಂಪತಿ ಎಂಬ ಖ್ಯಾತಿ ಇವರಿಗೆ ಲಭಿಸುತ್ತದೆ.

ಮತ್ತೆ ಮೆಡಿಸಿನ್ ಕ್ಷೇತ್ರದ ದಂಪತಿಗೆ ಒಲಿದು ಬಂದ ನೊಬೆಲ್


1947ರಲ್ಲಿ ಗೆರ್ಟಿ ಮತ್ತು ಕಾರ್ಲ್ ಕೋಡಿ ದಂಪತಿ ಮೆಡಿಸಿನ್ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡ ಬಳಿಕ ಬರೋಬ್ಬರಿ 67 ವರ್ಷಗಳ ನಂತರ ಇದೇ ಕ್ಷೇತ್ರದ ವಿಜ್ಞಾನಿ ದಂಪತಿಗೆ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಒಲಿಯುತ್ತದೆ. ಎಡ್ವರ್ಡ್ ಮೋಸೆರ್ ಮತ್ತು ಮೇ ಬ್ರಿಟ್ ಮೋಸೆರ್ ಎಂಬ ನಾರ್ವೆ ದೇಶದ ದಂಪತಿಗೆ 2014ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸುತ್ತದೆ.

ಮಿದುಳಿನ ಸ್ಥಾನಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಪ್ಲೇಸ್ ಸೆಲ್ ಗಳ ಸಂಶೋಧನೆಗಾಗಿ ಎಡ್ವರ್ಡ್ ಹಾಗೂ ಮೇ ಬ್ರಿಟ್ ದಂಪತಿಗೆ ಜಾನ್ ಓ’ ಕೀಫಿ ಜೊತೆಯಲ್ಲಿ ನೊಬೆಲ್ ಲಭಿಸುತ್ತದೆ. ಇದು 1974ರ ಬಳಿಕ ಪತಿ ಪತ್ನಿ ಜೊತೆಯಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡ ದೃಷ್ಟಾಂತವಾಗಿತ್ತು.


ಇದೀಗ ಮತ್ತೆ 5 ವರ್ಷಗಳ ಬಳಿಕ ಭಾರತೀಯ ಸಂಜಾತ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿಗೆ ಜೊತೆಯಾಗಿ ಅರ್ಥಶಾಸ್ತ್ರ ಕ್ಷೇತ್ರದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಲಭಿಸಿದೆ. ಅರ್ಥಶಾಸ್ತ್ರ ವಿಭಾಗದ ಪ್ರಥಮ ನೊಬೆಲ್ ಪ್ರಶಸ್ತಿಯನ್ನು 1969ರಲ್ಲಿ ಪ್ರಧಾನಿಸಲಾಯಿತು. ಈ ವಿಭಾಗಕ್ಕೆ ನೊಬೆಲ್ ಪ್ರಶಸ್ತಿ ಸ್ಥಾಪನೆಗೊಂಡಿದ್ದು 1968ರಲ್ಲಿ. ಅಂದಿನಿಂದ ಈ ಬಾರಿ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಘೋಷಣೆಯಾಗುವವರೆಗೆ ಈ ವಿಭಾಗದಲ್ಲಿ ಜೊತೆಯಾಗಿ ನೊಬೆಲ್ ಗೆದ್ದ ದಂಪತಿ ಎಂಬ ಹೆಗ್ಗಳಿಕೆಗೆ ಅಭಿಜಿತ್ ಬ್ಯಾನರ್ಜಿ ಹಾಗೂ ಎಸ್ತರ್ ಡಪ್ಲೋ ಅವರು ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next