ಹುಡುಗ ಬೆಳ್ಳಗಿದ್ದ, ಅವನಿಗೆ ಸರ್ಕಾರಿ ಕೆಲಸವೂ ಇತ್ತು. ಆದರೂ, ಅವನ ಕುರಿತು ನನ್ನ ಮನದಲ್ಲಿ ಮಧುರ ಭಾವನೆಗಳೇನೂ ಮೂಡಲಿಲ್ಲ.. ಆದ್ರೂ, ನೋಡೋಣ ಅವರೇನಂತಾರೋ ಅಂತ ಕಾದೆ. ವಾರದ ನಂತರ ಉತ್ತರ ಬಂತು…
“ನಾಳೆ ಕೆಲಸದಿಂದ ಬೇಗ ಬಾ. ಒಂದು ಗಂಡು ನೋಡಲು ಹೋಗ್ಬೇಕು’ ಅಂದ ಅಣ್ಣ. ಮೂರನೇ ವರಪರೀಕ್ಷೆ ಅದು. ನನ್ನ ನಂತರ ಇನ್ನೂ ಇಬ್ಬರು ತಂಗಿಯರಿದ್ದರು ಮದುವೆಗೆ. ಹಾಗಾಗಿಯೇ, “ಗಂಡು ಹೇಗಾದರೂ ಇರಲಿ. ಒಪ್ಪಿಕೊಂಡೇ ಬಿಡ್ತೀನಿ’ ಅಂತ ಮನದಲ್ಲೇ ನಿಶ್ಚಯ ಮಾಡಿಕೊಂಡಿದ್ದೆ.
ಮರುದಿನ, ಒಂದು ಆಟೋದಲ್ಲಿ ನಮ್ಮನೆಯಿಂದ ಬಹಳ ದೂರದಲ್ಲಿದ್ದ ಹುಡುಗನ ಮನೆ ಹುಡುಕಿ ಹೊರಟೆವು. ಆ ಮನೆ ತುಂಬ ಜನ. ಹುಡುಗನ ಅಪ್ಪ-ಅಮ್ಮ, ಅಕ್ಕ-ಭಾವ, ಅಣ್ಣ ಅತ್ತಿಗೆ, ಅವರದೊಂದು ಮಗು… ಕಾಫಿ ಸೇವನೆ ಆಯ್ತು. ಹುಡುಗ ಸುಮ್ಮನೆ ಕೂತಿದ್ದ. ಆತನ ತಂದೆ ಪ್ರಶ್ನೆಗಳ ಸುರಿಮಳೆಗರೆದರು. “ಎಲ್ಲಿ ಕೆಲಸ ಮಾಡೋದು? ಎಷ್ಟು ಸಂಬಳ, ಯಾವಾಗ ಪರ್ಮನೆಂಟ್ ಆಗುತ್ತೆ, ಆಮೇಲೆಷ್ಟು ಸಂಬಳ, ಉಳಿತಾಯ ಮಾಡಿದ್ದೀಯಾ..?”
ಹುಡುಗ ಬೆಳ್ಳಗಿದ್ದ, ಅವನಿಗೆ ಸರ್ಕಾರಿ ಕೆಲಸವೂ ಇತ್ತು. ಆದರೂ, ಅವನ ಕುರಿತು ನನ್ನ ಮನದಲ್ಲಿ ಮಧುರ ಭಾವನೆಗಳೇನೂ ಮೂಡಲಿಲ್ಲ.. ಆದ್ರೂ, ನೋಡೋಣ ಅವರೇನಂತಾರೋ ಅಂತ ಕಾದೆ. ವಾರದ ನಂತರ ಉತ್ತರ ಬಂತು- “ಹುಡುಗಿ ಕೆಲಸದಲ್ಲಿ ಇಲ್ಲದಿದ್ರೂ ಪರವಾಗಿಲ್ಲ. ನಮಗೆ ಬೆಳ್ಳಗಿರೋ ಹುಡುಗಿಯೇ ಬೇಕು!’ ಅಂದಿದ್ದರು. ಸದ್ಯ ನಂಗೂ ಆ ಹುಡುಗ ಇಷ್ಟ ಆಗಿರಲಿಲ್ಲ. ಅವರ ಉತ್ತರ ಕೇಳಿ ಸಮಾಧಾನದ ನಿಟ್ಟುಸಿರೊಂದು ಹೊರಬಿತ್ತು. ಆಮೇಲೆ ನನ್ನ ಸಹೋದ್ಯೋಗಿಯೊಡನೆ ನನ್ನ ಮದುವೆಯಾಯ್ತು..
ನನ್ನ ತಂಗಿಯ ಮದುವೆಗೆ ಗಂಡು ಹುಡುಕೋಕೆ ಶುರು ಮಾಡಿದ್ವಿ. ಆರೇಳು ಗಂಡು ನೋಡಿದ್ದಾಗಿತ್ತು. ಈ ವೇಳೆಗೆ, ನಮ್ಮ ಮದುವೆಯಾಗಿ ಒಂದೂವರೆ ವರ್ಷವಾಗಿತ್ತು. ನಮ್ಮ ಪರಿಚಯದವರೊಬ್ಬರು ಒಂದು ವಿಳಾಸ ಕೊಟ್ಟರು. ಜಾತಕ ಕಳಿಸಿದೆವು. “ಜಾತಕ ಕೂಡಿದೆ. ಹುಡುಗಿಯನ್ನು ಕರೆ ತನ್ನಿ’ ಎಂದರು. ಸರಿ, ಹೊರಟೆವು. ಆ ಹಾದಿಯಲ್ಲಿ ಹೋಗೋವಾಗ ತುಂಬ ಪರಿಚಿತ ದಾರಿ ಎನ್ನಿಸಿತು. ಹುಡುಗನ ಮನೆಗೆ ಹೋದಾಗಲೂ ಇದು ಪರಿಚಿತರ ಮನೆ ಎಂಬ ಭಾವ. ಹೊಸಿಲು ತುಳಿವಾಗ ಫಕ್ಕನೆ ನೆನಪಾಯ್ತು! ಅದೇ ಮನೆ! ಹೇಗಪ್ಪಾ ಎದುರಿಸೋದು? ಬಂದದ್ದಾಗಿದೆ ಅಂತ ಒಳಹೋಗಿದ್ದಾಯ್ತು. ಅವರಿಗೂ ನೆನಪಾಗಿರಬಹುದೇನೋ! ಹುಡುಗನ ತಂದೆ ಫೋಟೋ ಸೇರಿದ್ರು. ಮತ್ತೆಲ್ಲ ಅದೇ ಟೀಮ್. ತಂಗಿ ಬೆಳ್ಳಗಿದ್ದಾಳೆ. ಬಹುಶಃ ಒಪ್ತಾರೆ ಅನ್ನಿಸ್ತು. ಉಭಯಕುಶಲೋಪರಿಯ ನಂತರ ಕಾಫಿ ಕುಡಿದು, ಮಾಮೂಲು ಮಾತುಕತೆಯಾಯ್ತು. ಹೊರಟೆವು. ಸರ್ಕಲ್‌ಗೆ ಬಂದು ಆಟೋ ಹತ್ತಿದ್ದೇ ತಡ, ಅದುಮಿದ್ದ ನಗು ಒದ್ಕೊಂಡ್ ಆಚೆ ಬಂತು. ನಾನು, ಅಣ್ಣ ಹೊಟ್ಟೆ ಹುಣ್ಣಾಗುವಂತೆ ನಕ್ಕೆವು. ತಂಗಿಗೆ ಎಲ್ಲಾ ಕತೆ ಹೇಳಿ “ನೀನು ಬೆಳ್ಳಗಿದ್ದೀಯಲ್ಲ, ಒಪ್ತಾರೆ ಬಿಡು” ಅಂದೆ. ಮುಖ ದಪ್ಪ ಮಾಡಿಕೊಂಡು “ಏ..ನನಗೊಪ್ಪಿಗೆ ಇಲ್ಲ’ ಅಂದ್ಲು. ವಾರದ ನಂತರ ಅವರಿಂದ ಉತ್ತರ ಬಂತು: “”ಹುಡುಗಿ ಕೆಲಸದಲ್ಲಿರಬೇಕು’ ಅಂತ!
ತಂಗಿಗೆ ಬೇರೆ ಕಡೆ ಗಂಡು ಸಿಕ್ಕಿತು. ಮದುವೆಯಾಯ್ತು, ಅವಳ ಮಗುವಿನ ನಾಮಕರಣಕ್ಕಾಗಿ ರಾಯರ ಮಠದಲ್ಲಿ ಎಲ್ಲ ಸೇರಿದ್ವಿ. ಪರಿಚಯದವರೊಬ್ಬರು ಸಿಕ್ಕರು. “ನೀವೇನಿಲ್ಲಿ” ಎಂದೆ. “ದೊಡ್ಡಪ್ಪನ ಮಗನ ಮದುವೆಯಾಯ್ತು. ಇವತ್ತು ಸತ್ಯನಾರಾಯಣ ಪೂಜೆ’ ಅಂದ್ರು. ಚೆಂದವಾಗಿ ಅಲಂಕಾರ ಮಾಡಿಕೊಂಡಿದ್ದ ವಧು-ವರರನ್ನು ದೂರದಿಂದಲೇ ತೋರಿಸಿ, “ಅದೋ, ಅವನೇ ದೊಡ್ಡಪ್ಪನ ಮಗ, ಆಕೆ ಸೊಸೆ’ ಅಂದ್ರು. ನೋಡಿದೆ. ಅಯ್ಯೋ ಕರ್ಮವೇ, ಮತ್ತದೇ ಮುಖ! ಕೊನೆಗೂ ಆತನ ಮದುವೆಯಾಗಿತ್ತು. ಹುಡುಗಿ ಬಣ್ಣದಲ್ಲಿ ಕಾಜಲ್. ಕುತೂಹಲಕ್ಕೆ ಕೇಳಿದೆ- “ಹುಡುಗಿ ಕೆಲಸದಲ್ಲಿ ಇದ್ದಾಳಾ?’
“ಇಲ್ಲಪ್ಪ. ನೂರು ಹೆಣ್ಣು ನೋಡಿದಾನೆ. ಸದ್ಯ ಇವಳನ್ನಾದ್ರೂ ಒಪ್ಪಿದ ಅನ್ನೋದೇ ಖುಷಿ ನಮಗೆ’ ಅಂದ್ರು ಆಕೆ..
ಕೆಲಸದಲ್ಲೂ ಇಲ್ಲ, ಬಣ್ಣವೂ ಇಲ್ಲ.. ಮದುವೆ ಆಯ್ತು.. “ಹರಿಚಿತ್ತ ಸತ್ಯ, ನಮ್ಮ ಹರಿಚಿತ್ತ ಸತ್ಯ’
(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ uv.avalu@gmail.com ಗೆ ಬರೆದು ಕಳಿಸಿ.)
-ಶೈಲಜಾ ಬಿ.ಆರ್.