ಗೌರಿಬಿದನೂರು: ನಗರದ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಎಸ್ಪಿಯವರು ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸಿ ಅಹವಾಲುಗಳನ್ನು ಸ್ವೀಕರಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕುಂದು ಕೊರತೆ ಅಹವಾಲು ಸಭೆಯಲ್ಲಿ 54 ಹೆಚ್ಚು ದೂರುಗಳು ಸಲ್ಲಿಕೆಯಾದವು.
ಸರ್ಕಾರಿ ಇಲಾಖೆಯಲ್ಲಿ ಅಧಿಕಾರಿಗಳು ವಿನಾಕಾರಣ ಸಾರ್ವಜನಿಕರನ್ನು ಅಲೆದಾಟ ಮಾಡಿಸುತ್ತಾರೆ. ಅದರಲ್ಲೂ ನಗರಸಭೆ, ಕಂದಾಯ ಇಲಾಖೆ ಪಂಚಾಯತ್ ರಾಜ್ ಇಲಾಖೆಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಅಗುವುದಿಲ್ಲ ಮತ್ತು ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಎಲ್ಲೆ ಮೀರಿದೆ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ಸಾರ್ವಜನಿಕರು ದೂರುಗಳ ಈ ಸುರಿಮಳೆಗೈದರು.
ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಿ.ಎನ್. ರಂಗನಾಥ್ ಮಾತನಾಡಿ, ನಗರಸಭೆಯಲ್ಲಿ 15ನೇ ಹಣಕಾಸು ನಗರರೋತ್ಥಾನ ಅಡಿಯಲ್ಲಿ ಟೆಂಡರ್ ಕರೆಯುವಲ್ಲಿ ಗೋಲ್ಮಾಲ್ ಇದಕ್ಕೆ ಅಭಿಯಂತರು ಕಮೀಷನರ್ ಶಾಮೀಲಾಗಿ ಪಕ್ಷಪಾತ ಮಾಡುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು.
ಮುಖಂಡ ಚಿಗಟಗೆರೆ ರೈತ ಶ್ರೀನಿವಾಸ್ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಎಲ್ಲೆ ಮೀರಿದೆ ಇದರ ಕಡಿವಾಣ ಹಾಕಲು ಅಬಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಬಾರ್‌ಅಂಡ್ ರೆಸ್ಟೋರೆಂಟ್‌ನಲ್ಲಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಾರೆ. ಬಿಲ್ಲು ಕೇಳಿದರೆ ಕೊಡುವುದಿಲ್ಲ ಎಂದು ದೂರಿದರು.
ಕರವೇ ತಾಲೂಕು ಅಧ್ಯಕ್ಷ ಆದಿಮೂರ್ತಿ ರೆಡ್ಡಿ ಮಾತನಾಡಿ, ಮಳೆಹಾನಿ ತುತ್ತಾಗಿ ಮನೆಗಳು ಬಿದ್ದು ಹೋಗಿದ್ದು ಇವುಗಳ ಪರಿಹಾರಕ್ಕೆ ಇದುವರೆಗೂ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ದೂರು ಕೊಟ್ಟರೂ ಅರ್ಜಿಗಳು ವಿಲೇವಾರಿ ಮಾಡುವುದಿಲ್ಲ. ತಾಲೂಕಿನ ದೇವಾಗನಹಳ್ಳಿ ಗ್ರಾಮದಲ್ಲಿ ರಾಜಕೀಯ ಪ್ರಭಾವಿ ವ್ಯಕ್ತಿಯೊಬ್ಬರು ರಸ್ತೆ ಒತ್ತುವರಿ ಮಾಡಿದ್ದು, ಈ ಬಗ್ಗೆ ದೂರು ನೀಡಿದ್ದರೂ ತಹಶೀಲ್ದಾರ್ ಕ್ರಮವಹಿಸಿಲ್ಲ. ಖಾತೆ ಬದಲಾವಣೆಗೆಂದು ಇದೇ ಗ್ರಾಮದ ನಂಜುಂಡರೆಡ್ಡಿ 8 ವರ್ಷಗಳ ಹಿಂದೆ ಅರ್ಜಿ ಹಾಕಿದ್ದರೂ ಖಾತೆ ಮಾಡಿಲ್ಲ ಎಂದು ಆರೋಪಿಸಿದರು.
ರೈತ ಮುಖಂಡ ಕದರನಹಳ್ಳಿ ಭರತ್ ಕುಮಾರ್ ಮಾತನಾಡಿ, ಅಲಕಾಪುರ ಗ್ರಾಪಂ ಅಧಿಕಾರಿಗಳು ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಮುಂಬಡ್ತಿ ಪಡೆದಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಅಗಬೇಕು ಎಂದು ಅರ್ಜಿ ನೀಡಿದರು. ಸಭೆಗೆ 54 ಹೆಚ್ಚು ದೂರು ಅರ್ಜಿಗಳು ಬಂದಿದ್ದು, ಅದರಲ್ಲಿ ಕಂದಾಯ 22 ಮತ್ತು ನಗರಸಭೆ 7 ಮತ್ತು ಪಂಚಾಯಿತ್ ರಾಜ್ ಇಲಾಖೆ 11ದೂರುಗಳು ಬಂದಿದ್ದವು. ದೂರು ಸ್ವೀಕರಿಸಿದ ಲೋಕಾಯುಕ್ತ ಎಸ್ಪಿ ಪವನ್ ರಾಜೂರು ಅವರು ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಇವರ ಮೇಲೆ ನೋಟಿಸ್ ನೀಡಿ ಕ್ರಮವಹಿಸುವೆ ಎಂದರು.
ಗೆದರೆ ಶ್ರೀನಿವಾಸ್ ಗದರೆ ಗ್ರಾಪಂ ನರೇಗಾ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ತಹಶೀಲ್ದಾರ್ ಎಚ್. ಶ್ರೀನಿವಾಸ್, ನಗರಸಭೆ ಪೌರಾ ಯುಕ್ತ ಗೀತಾ ಲೋಕಾಯುಕ್ತ ಅಧಿಕಾರಿಗಳಾದ ಸಲೀಂ, ನದಾಪ್, ಮೋಹನ್, ಹಾಜರಿದ್ದರು.