Advertisement

ಹಾವೇರಿ ಜಿಲ್ಲೆಯಲ್ಲಿ ಈ ಸಲ ಕುಡಿವ ನೀರಿಗಿಲ್ಲ  ಹಾಹಾಕಾರ

08:02 PM Apr 15, 2021 | Team Udayavani |

ಹಾವೇರಿ: ಬಿರು ಬೇಸಿಗೆ ಆರಂಭವಾಗಿದ್ದರೂ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಈವರೆಗೆ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿ ತಲೆದೋರಿಲ್ಲ. ಈವರೆಗೆ ಜಿಲ್ಲೆಯಲ್ಲಿ 97 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದ್ದು, ನೀರಿನ ಹಾಹಾಕಾರ ತಲೆದೋರುವ ಮುನ್ನವೇ ಜಿಲ್ಲಾಡಳಿತ ಪೂರ್ವಸಿದ್ಧತೆ ಕೈಗೊಂಡಿದೆ.

Advertisement

ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗೆ ಟಾಸ್ಕ್ ಫೋರ್ಸ್‌ ಅಡಿ ತುರ್ತು ಕಾಮಗಾರಿಗಳಿಗೆ ಅನುದಾನ ಮೀಸಲಿರಿಸಲಾಗಿದೆ. ಜಿಲ್ಲಾದ್ಯಂತ 748 ಜನ ವಸತಿಗಳಿದ್ದು, ಕುಡಿಯಲು ಮತ್ತು ದಿನಬಳಕೆಗಾಗಿ ಬಹುತೇಕ ಕಡೆಗಳಲ್ಲಿ ಕೊಳವೆ ಬಾವಿ ಮತ್ತು ಕೆರೆಗಳನ್ನು ಅವಲಂಬಿಸಲಾಗಿದೆ. 2019 ಮತ್ತು 2020ರಲ್ಲಿ ಉತ್ತಮ ಮಳೆಯಾಗಿದ್ದರಿಂದ ಅಂತರ್ಜಲಮಟ್ಟ ಹೆಚ್ಚಳವಾಗಿದೆ. ಅಲ್ಲದೇ ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಹೀಗಾಗಿ ಏಪ್ರಿಲ್‌ ಆರಂಭಗೊಂಡಿದ್ದರೂ ಬಹುತೇಕ ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಕೇಳಿ ಬಂದಿಲ್ಲ.

15 ಲಕ್ಷ ರೂ. ಅನುದಾನ ಮೀಸಲು: ತಾಲೂಕು ಕೇಂದ್ರಗಳನ್ನು ಹೊರತುಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಬವಣೆ ಎದುರಾಗುವ ಸಾಧ್ಯತೆಯಿದೆ. ಅದಕ್ಕಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗೆ ಪ್ರತಿ ತಾಲೂಕಿನ ಟಾಸ್ಕ್ಪೋರ್ಸ್ ಗೆ 15ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ. ಏಪ್ರಿಲ್‌, ಮೇ ತಿಂಗಳ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರಿದರೆ ತುರ್ತಾಗಿ ಕೊಳವೆ ಬಾವಿ ಕೊರೆಯಿಸಲು ಸರ್ಕಾರದಿಂದ ನಿರ್ದೇಶನವಿದೆ.  ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿ ಮಾಡಿ ಕೊಳವೆ ಬಾವಿ ಕೊರೆಸಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಇಲಾಖೆಗೆ ಸೂಚಿಸಲಾಗಿದೆ.

ಕೆರೆಗಳು ಭರ್ತಿ: ಜಿಲ್ಲೆಯ ವಿವಿಧ ತಾಲೂಕಿನ ಹಲವು ಹಳ್ಳಿಗಳಲ್ಲಿ ನೀರಿನ ಹಾಹಾಕಾರ ಸಾಮಾನ್ಯ ಎನ್ನುವಂತಿತ್ತು. ಪ್ರಸಕ್ತ ವರ್ಷ ಅಂಥ ಸ್ಥಿತಿ ಎದುರಾಗದು. ಕಾರಣ ಶಿಗ್ಗಾವಿ ಏತ ನೀರಾವರಿ, ಯುಟಿಪಿ ಕಾಲುವೆಗಳ ಮೂಲಕ ಹಾಗೂ ಮುಂಗಾರಿನಲ್ಲಿ ಸುರಿದ ಭಾರೀ ಮಳೆಯಿಂದ ಕೆರೆಗಳು ಭರ್ತಿಯಾಗಿವೆ. ಕೆರೆಗಳಲ್ಲಿ ಸಾಕಷ್ಟು ಪ್ರಮಾಣದ ನೀರು ಜಮೆಯಾಗಿದೆ. ಅಲ್ಲಿಂದ ಮನೆ ಮನೆಗಳಿಗೆ ನಲ್ಲಿಗಳ ಮೂಲಕ ನೀರು ಪೂರೈಕೆಯಾಗುತ್ತಿದ್ದು, ಬೇಸಿಗೆ ಮುಗಿಯುವವರೆಗೆ ಸಮಸ್ಯೆ ಎದುರಾಗದು.

ವೀರೇಶ ಮಡ್ಲೂರ

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next