Advertisement

ಕುಡಿಯುವ ನೀರಿನ ಬವಣೆ ತಪ್ಪಿಸಿದ ಅತಿವೃಷ್ಟಿ

04:19 PM May 27, 2020 | Suhan S |

ಹಾವೇರಿ: ಪ್ರತಿ ವರ್ಷ ಬೇಸಿಗೆಯಲ್ಲಿ ಜಿಲ್ಲೆಯ ಹಲವು ಪಟ್ಟಣ ಹಾಗೂ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬವಣೆ ವ್ಯಾಪಕವಾಗಿರುತ್ತಿತ್ತು. ನೀರಿಗಾಗಿ ಜನರ ಹಾಹಾಕಾರ ಮುಗಿಲು ಮುಟ್ಟುತ್ತಿತ್ತು. ವಿಪರ್ಯಾಸವೆಂದರೆ ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಎದುರಾಗಿಯೇ ಇಲ್ಲ!

Advertisement

ಈ ಬಾರಿ ಕುಡಿಯುವ ನೀರಿನ ಬವಣೆಗೆ ಬ್ರೇಕ್‌ ಹಾಕಿದ್ದು ಅತಿವೃಷ್ಟಿ. ಕಳೆದ ಆಗಸ್ಟ್‌ ಹಾಗೂ ಅಕ್ಟೋಬರ್‌ ನಲ್ಲಿ ಸುರಿದ ಅತಿಯಾದ ಮಳೆಯಿಂದಾಗಿಯೇ ಈ ಬಾರಿಯ ಬಿರು ಬೇಸಿಗೆಯಲ್ಲಿಯೂ ಭುವಿ ತಂಪಾಗಿರುವ ಜತೆಗೆ ಜನರೂ ನೆಮ್ಮದಿಯಿಂದ ಕಾಲಕಳೆಯುವಂತಾಯಿತು. ಅತಿವೃಷ್ಟಿಯಿಂದಾಗಿ ಜಿಲ್ಲೆಯ ಎಲ್ಲ ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ನೀರು ತುಂಬಿಕೊಂಡವು. ಎಲ್ಲೆಡೆ ಜಲ ಸಮೃದ್ಧವಾಗಿ ಆಯಿತು. ಅಂತರ್ಜಲ ಮಟ್ಟವೂ ಏರಿತು. ಹೀಗಾಗಿ ಬಹುತೇಕ ಕಡೆಗಳಲ್ಲಿ ಜನರು ಕುಡಿಯುವ ನೀರಿಗಾಗಿ ಪರಿತಪಿಸುವ ಪ್ರಮೇಯವೇ ಬರಲಿಲ್ಲ.

ಕಳೆದ ವರ್ಷ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ 500ರಿಂದ 700 ಅಡಿ ಕೆಳಗೆ ಕುಸಿದಿತ್ತು. ನಾಲ್ಕೈದು ವರ್ಷ ಸತತ ಮಳೆ ಇಲ್ಲದೇ ಜಿಲ್ಲೆಯ ನದಿ, ಕೆರೆ, ಹೊಂಡ, ಕಟ್ಟೆಗಳು ಸಹ ಬರಿದಾಗಿದ್ದವು. ಈ ವರ್ಷ ಮಳೆ ಹೆಚ್ಚಾಗಿದ್ದರಿಂದ ಅಂತರ್ಜಲ ಮಟ್ಟ ಏರಿಕೆ ಕಂಡಿದ್ದು ಹೊಸ ಕೊಳವೆಬಾವಿಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಇರುವ ಜಲಮೂಲಗಳೇ ಜನರಿಗೆ ಜೀವಜಲ ಒದಗಿಸುತ್ತಿವೆ. ಜಿಲ್ಲೆಯಲ್ಲಿ ಒಟ್ಟು 698 ಹಳ್ಳಿಗಳಿವೆ. ಗ್ರಾಮಾಂತರ ಪ್ರದೇಶದಲ್ಲಿ 12,42,167 ಜನಸಂಖ್ಯೆ ಇದೆ.

ಜಿಲ್ಲೆಯ ವಿವಿಧ ತಾಲೂಕುಗಳ ಬಹುಗ್ರಾಮ ನದಿ ನೀರು ಯೋಜನೆಯಿಂದ 196 ಹಳ್ಳಿಗಳಿಗೆ ನದಿ ನೀರು ಪೂರೈಸಲಾಗುತ್ತಿದೆ. ಉಳಿದ ಗ್ರಾಮಗಳಿಗೆ ಕೊಳವೆ ಬಾವಿಗಳೇ ಗತಿ. ಹೀಗಿರುವಾಗ ಈ ಬಾರಿ ಬೇಸಿಗೆಯಲ್ಲಿ ಕೊಳವೆ ಬಾವಿಗಳು ಒಣಗಿದ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿಲ್ಲ.

ಸಮಸ್ಯೆ ಕ್ಷೀಣ: ಪ್ರತಿವರ್ಷ ಜಿಲ್ಲೆಯಲ್ಲಿ ಸರಾಸರಿ 150 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿತ್ತು. ಆದರೆ, ಅತಿವೃಷ್ಠಿ ಕಾರಣದಿಂದಾಗಿ ಜಲಮೂಲ ಬರಿದಾಗಿಲ್ಲ.ಪ್ರಸ್ತುತ ಮೇ ತಿಂಗಳಲ್ಲಿ ಅಲ್ಲಲ್ಲಿ ಮಳೆಯಾಗಿದ್ದು ಬೇಸಿಗೆ ನೀರಿನ ಸಮಸ್ಯೆಗೆ ಪ್ರಕೃತಿಯೇ ತೆರೆ ಎಳೆದಿದೆ. ಅಲ್ಲಲ್ಲಿ ನೀರು ಸರಬರಾಜು ಮಾಡುವ ಕೊಳವೆ, ಪಂಪ್‌ಸೆಟ್‌, ವಿದ್ಯುತ್‌ ಸಂಪರ್ಕ ಹೀಗೆ ಇನ್ನಿತರ ವ್ಯವಸ್ಥೆ ಸರಿಯಾಗಿಲ್ಲದೇ ಕೆಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆಯೇ ಹೊರತು ನೀರಿನ ಬರ ಎಲ್ಲಿಯೂ ಕಂಡು ಬಂದಿಲ್ಲ.

Advertisement

ಅತಿವೃಷ್ಟಿ ಆಗದಿದ್ದರೆ: ಒಂದು ವೇಳೆ ಆಗಸ್ಟ್‌ ಹಾಗೂ ಅಕ್ಟೋಬರ್‌ ತಿಂಗಳಲ್ಲಿ ಅತಿವೃಷ್ಟಿಯಾಗದೆ ಇದ್ದಿದ್ದರೆ ಅಥವಾ ಸಮರ್ಪಕವಾಗಿ ಮಳೆ ಸುರಿಯದೇ ಇದ್ದಿದ್ದರೆ ಈ ಬಾರಿ ಬೇಸಿಗೆಯಲ್ಲಿ ಉಳಿದೆಲ್ಲ ವರ್ಷಗಳಿಂತ ಹೆಚ್ಚು ನೀರಿನ ಸಮಸ್ಯೆ ಉಲ್ಬಣಿಸುತ್ತಿತ್ತು. ನೀರಿಗಾಗಿ ಎಲ್ಲೆಡೆ ಜನ ಹಾಹಾಕಾರ ಏಳುತ್ತಿದ್ದರು. ಕುಡಿಯುವ ನೀರಿಗಾಗಿ ಮನೆ ಮಂದಿಯೆಲ್ಲ ಬೆವರಿಳಿಸುವುದು ಅನಿವಾರ್ಯವಾಗಿತ್ತು. ಏಕೆಂದರೆ ಲಾಕ್‌ಡೌನ್‌ ಕಾರಣದಿಂದಾಗಿ ಈ ಬಾರಿ ಬೇಸಿಗೆಯಲ್ಲಿ ಜನರು ಹೆಚ್ಚಾಗಿ ಮನೆಯಲ್ಲಿಯೇ ಇದ್ದರು. ಕುಡಿಯುವ ನೀರಿನ ಬಳಕೆ ಪ್ರಮಾಣ ಅಧಿಕವೂ ಆಗಿತ್ತು. ಮಳೆಯಾಗದೆ ಜಲಮೂಲಗಳೆನಾದರೂ ಒಣಗಿದ್ದರೆ ಜನರ ನೀರಿನ ಬವಣೆ ಕೋವಿಡ್ ಗಿಂತ ಭೀಕರವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಶಾಶ್ವತ ಪರಿಹಾರವಾಗಲಿ: ಜಿಲ್ಲೆಯಲ್ಲಿ ತುಂಗಭದ್ರ, ಕುಮುಧ್ವತಿ, ವರದಾ ಹಾಗೂ ಧರ್ಮಾ ನದಿಗಳು ಹರಿದಿವೆ. ಈ ಎಲ್ಲ ನದಿಗಳಿಂದ ಸಾಕಷ್ಟು ನೀರು ದೊರಕುತ್ತಿದ್ದರೂ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಜಿಲ್ಲೆಯ ಎಲ್ಲ ತಾಲೂಕುಗಳ ಗ್ರಾಮೀಣ, ಪಟ್ಟಣ, ನಗರಗಳ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ಇಚ್ಛೆಯನ್ನು ಈವರೆಗೆ ಯಾವ ಜನಪ್ರತಿನಿಧಿಗಳೂ ವ್ಯಕ್ತಪಡಿಸಿಲ್ಲ.

ಇನ್ನು ಅಧಿಕಾರಿಗಳ್ಳೋ ಈ ಸಮಸ್ಯೆಯನ್ನು ಜೀವಂತವಾಗಿಟ್ಟು ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕೋಟ್ಯಂತರ ರೂ. ಖರ್ಚು ಹಾಕುತ್ತಲೇ ಬಂದಿದ್ದಾರೆ. ಹೀಗಾಗಿ ನೀರಿದ್ದರೂ ಸರಿಯಾಗಿ ಬಳಸಿಕೊಳ್ಳದ, ಹಣ ವ್ಯಯಿಸಿದರೂ ಸಮಸ್ಯೆ ಬಗೆಹರಿಯದ ವಿಚಿತ್ರಸ್ಥಿತಿ ಜಿಲ್ಲೆಯಲ್ಲಿದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದವರು ಪ್ರಯತ್ನ ಮಾಡಬೇಕು ಎಂಬುದು ನಾಗರಿಕರ ಆಶಯವಾಗಿದೆ.

ಈ ಬಾರಿ ಸಮಸ್ಯೆ ಇಲ್ಲ.. ಅತಿವೃಷ್ಟಿಯಾಗಿದ್ದರಿಂದ ಈ ಬಾರಿ ಬೇಸಿಗೆಯಲ್ಲಿ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ. ಆದರೂ 25-30 ಹಳ್ಳಿಗಳನ್ನು ಸಮಸ್ಯಾತ್ಮಕ ಹಳ್ಳಿಗಳೆಂದು ಗುರುತಿಸಲಾಗಿತ್ತು. ಪ್ರಸ್ತತ ಹಲವೆಡೆ ಮಳೆಯಾಗಿದ್ದು ನೀರಿನ ಸಮಸ್ಯೆ ಮರೆಯಾಗುತ್ತಿದೆ. – ರಮೇಶ ದೇಸಾಯಿ, ಸಿಇಓ, ಜಿಪಂ

Advertisement

Udayavani is now on Telegram. Click here to join our channel and stay updated with the latest news.

Next