Advertisement
ಈ ಬಾರಿ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಿಂದ ವಿದ್ಯುತ್ ಸಂಪರ್ಕ ಕಡಿದುಕೊಂಡು ಆ. 14ರಿಂದ 16ರ ವರೆಗೆ ಮೂರು ದಿನಗಳಲ್ಲಿ ಪದೇಪದೆ ತುಂಬೆಯಲ್ಲಿ ನೀರು ರೇಚಕ ಸ್ಥಾವರದಲ್ಲಿ ಪಂಪಿಂಗ್ ಕಾರ್ಯ ಸ್ಥಗಿತಗೊಂಡು ಮಂಗಳೂರಿಗೆ ನೀರು ಪೂರೈಕೆ ಬಾಧಿತವಾಗಿದೆ.
ಬಂಟ್ವಾಳ ವಿದ್ಯುತ್ ಉಪಕೇಂದ್ರದಿಂದ ತುಂಬೆ ವೆಂಟೆಡ್‌ಡ್ಯಾಂಗೆ 33 ಕೆ.ವಿ. ಎಕ್ಸ್‌ಪ್ರೆಸ್ ವಿದ್ಯುತ್ ಮಾರ್ಗ ಕಲ್ಪಿಸಲಾಗಿದೆ. ಈ ವಿದ್ಯುತ್ ತಂತಿಗಳು ನದಿ ಪಕ್ಕದಲ್ಲಿ ಹಾದು ಹೋಗಿವೆ. ನದಿ ನೀರಿನ ಮಟ್ಟ 9 ಮೀಟರ್‌ಗೆ ಏರಿಕೆಯಾದರೆ ತಂತಿಗಳು ನೀರಿನಲ್ಲಿ ಮುಳುಗುತ್ತವೆ. ಸಂಭಾವ್ಯ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ನೀರಿನ ಮಟ್ಟ 8.5 ಮೀಟರ್‌ಗೆ ಏರಿಕೆಯಾಗುತ್ತಲೇ ಮೆಸ್ಕಾಂ ತುಂಬೆ ವೆಂಟೆಡ್‌ಡ್ಯಾಂನ ಪಂಪಿಂಗ್ ಸ್ಟೇಷನ್‌ನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತದೆ. ಪರಿಣಾಮ ತುಂಬೆ ಕೆಳ ರೇಚಕ ಸ್ಥಾವರದಲ್ಲಿ ಪಂಪಿಂಗ್ ಸ್ಥಗಿತಗೊಂಡು ಮಂಗಳೂರಿಗೆ ನೀರು ಸರಬರಾಜು ಸ್ಥಗಿತಗೊಳ್ಳುತ್ತದೆ. ಮೇಯರ್ ಪರಿಶೀಲನೆ
ಮೇಯರ್ ಭಾಸ್ಕರ್ ಕೆ., ಉಪಮೇಯರ್ ಮಹಮ್ಮದ್, ಮುಖ್ಯ ಸಚೇತಕ ಶಶಿಧರ್ ಹೆಗ್ಡೆ , ಸ್ಥಾಯೀ ಸಮಿತಿ ಅಧ್ಯಕ್ಷರಾದ ನವೀನ್ ಡಿ’ಸೋಜಾ, ಪ್ರವೀಣ್ ಚಂದ್ರ ಆಳ್ವ , ಕಾರ್ಪೊರೇಟರ್ ದೀಪಕ್ ಪೂಜಾರಿ, ಆಯುಕ್ತ ಮಹಮ್ಮದ್ ನಜೀರ್ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಲಿಂಗೇ ಗೌಡ, ನರೇಶ್ ಶೆಣೈ ಅವರು ತುಂಬೆ ವೆಂಟೆಡ್ ಡ್ಯಾಂಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Related Articles
ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಭಾಸ್ಕರ್ ಕೆ. ಅವರು, ಘಾಟಿ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ನದಿ ನೀರಿನ ಮಟ್ಟ ಏರಿಕೆಯಾದ ಕೂಡಲೇ ಮೆಸ್ಕಾಂ ಸುರಕ್ಷೆ ದೃಷ್ಟಿಯಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತದೆ ಎಂದು ತಿಳಿಸಿದರು.
Advertisement
ಆ. 14ರಂದು ರಾತ್ರಿ 8 .20 ಮೀಟರ್‌ಗೆ ಏರಿಕೆಯಾದ ಕಾರಣ ವಿದ್ಯುತ್ ಸಂಪರ್ಕ ಸ್ಥಗಿತಗೊಂಡು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಆ. 15ರಂದು 3.45ರಿಂದ ಸಂಜೆ 7 ಗಂಟೆವರೆಗೆ ನೀರಿನ ಮಟ್ಟ 8.8 ಮೀಟರ್‌ಗೆ ಹಾಗೂ ಆ. 16ರಂದು ಸಂಜೆ 6.25ರಿಂದ ರಾತ್ರಿ 1.15ರ ವರೆಗೆ 8.8 ಮೀಟರ್‌ನಿಂದ 9.1ಮೀಟರ್ ಇದ್ದು ಈ ಅವಧಿಯಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದರಿಂದ್ದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಹೇಳಿದರು.
16ರಂದು ಮಧ್ಯರಾತ್ರಿ ನೀರಿನ ಮಟ್ಟ ಇಳಿಕೆಯಾದ ಬಳಿಕ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಪಂಪಿಂಗ್ ಕಾರ್ಯ ಆರಂಭಗೊಂಡಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ ನೀರಿನ ಮಟ್ಟ 7.9 ಮೀಟರ್ ಗೆ ಇಳಿದಿದೆ ಎಂದು ವಿವರಿಸಿದರು. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ತುಂಬೆ ಪಂಪ್‌ಹೌಸ್‌ಗೆ ಭೂಗತ ವಿದ್ಯುತ್ ಕೇಬಲ್ ಅಳವಡಿಸುವ ಪ್ರಸ್ತಾವನೆ ಇದೆ ಎಂದರು.
15 ಕೋ. ರೂ. ಪ್ರಸ್ತಾವನೆ ತುಂಬೆ ವೆಂಟೆಡ್‌ಡ್ಯಾಂನ ನದಿಬದಿಯಲ್ಲಿ ಪಂಪ್‌ಹೌಸ್‌ನ ತಡೆಗೋಡೆ ಕುಸಿದು ಬಿದ್ದಿದೆ. ಶಿಥಿಲಗೊಂಡಿರುವ ಒಟ್ಟು 55 ಮೀಟರ್ ಉದ್ದ ಹಾಗೂ 9 ಮೀಟರ್ ಎತ್ತರಕ್ಕೆ ತಡೆಗೋಡೆ ಮರುನಿರ್ಮಾಣ ಮಾಡಬೇಕಾಗಿದೆ. ಇದಕ್ಕೆ 15 ಕೋ.ರೂ. ಅವಶ್ಯವಿದೆ. ಒಟ್ಟು ವೆಚ್ಚದಲ್ಲಿ ಶೇ.75 ಭಾಗ ಸರಕಾರ ಹಾಗೂ ಶೇ.25 ಭಾಗವನ್ನು ಪಾಲಿಕೆ ಭರಿಸಬೇಕಾಗುತ್ತದೆ. ಎತ್ತಿನಹೊಳೆ ಯೋಜನೆಯಲ್ಲಿ ನದಿಪಾತ್ರ ಅಭಿವೃದ್ಧಿಗೆ ಮೀಸಲಿರಿಸಿರುವ ಮೊತ್ತದಲ್ಲಿ 10 ಕೋ.ರೂ. ನೀಡುವಂತೆ ಈಗಾಗಲೇ ಸರಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದು ಮೇಯರ್ ತಿಳಿಸಿದರು. ತಾತ್ಕಾಲಿಕ ವ್ಯವಸ್ಥೆ
ಶಾಶ್ವತ ಕಾಮಗಾರಿ ಆರಂಭಗೊಳ್ಳುವವರೆಗೆ ತಡೆಗೋಡೆ ಇನ್ನಷ್ಟು ಕುಸಿಯದಂತೆ ತಾತ್ಕಾಲಿಕ ರಕ್ಷಣೆ ವ್ಯವಸ್ಥೆ ಕಲ್ಪಿಸಲಾಗುವುದು. ಉಳ್ಳಾಲದಲ್ಲಿ ಕಡಲ್ಕೊರೆತ ತಡೆಗೆ ಹಾಕಿರುವ ಮರಳು ತುಂಬಿದ ಪಾಲಿ ಜಿಯೋ ಫೈಬರ್ ಚೀಲಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಉಳ್ಳಾಲದಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಹೈದರಾಬಾದ್ ಸಂಸ್ಥೆಯ ಎಂಜಿನಿಯರ್‌ಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಳೆ ಇಳಿಮುಖವಾದ ಬಳಿಕ ಡಿಸೆಂಬರ್‌ನಲ್ಲಿ ಪಾಲಿಜಿಯೋ ಫೈಬರ್ ಚೀಲಗಳನ್ನು ಅಳವಡಿಸುವ ಕಾರ್ಯ ನಡೆಸಲಾಗುವುದು ಎಂದು ಮೇಯರ್ ತಿಳಿಸಿದರು.