Advertisement

ನೀರಿಲ್ಲ, ಮನೆಗೆ ಬರಬೇಡಿ: ಸಂಬಂಧಿಕರಿಗೆ ಸಂದೇಶ!

12:08 AM Apr 25, 2019 | Team Udayavani |

ಇದು ಸಾಕ್ಷಾತ್‌ ವರದಿಗಳ ಸರಣಿ. ಪ್ರತಿ ಬೇಸಗೆಯಲ್ಲಿ ಸ್ಥಳೀಯ ಆಡಳಿತ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ತಾತ್ಕಾಲಿಕ ಪರಿಹಾರಗಳನ್ನು ಕೈಗೊಳ್ಳುತ್ತದೆ. ಆದರೆ ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಗಮನ ಹರಿಸುವುದು ಕಡಿಮೆ. ಹಾಗಾಗಿಯೇ ಜನರು ಯಾಕಾದ್ರೂ ಬೇಸಗೆ ಬರುತ್ತಪ್ಪಾ ಎಂದು ಶಾಪ ಹಾಕುತ್ತಾ ದಿನದೂಡುತ್ತಾರೆ. ಈ ಜನರ ಕಷ್ಟಗಳನ್ನು ಯಥಾವತ್ತಾಗಿ ವರದಿ ಮಾಡಿ ಶಾಶ್ವತ ಪರಿಹಾರ ಕಲ್ಪಿಸುವತ್ತ ಸ್ಥಳೀಯ ಆಡಳಿತ, ಜನ ಪ್ರತಿನಿಧಿಗಳು, ಶಾಸಕರ ಕಣ್ಣು ತೆರೆಸುವುದು ನಮ್ಮ ಉದ್ದೇಶ. ಅದಕ್ಕಾಗಿ ನಮ್ಮ ತಂಡ ನೀರಿನ ಅತಿಯಾದ ಸಮಸ್ಯೆ ಇರುವಲ್ಲಿಗೆ ಭೇಟಿ ನೀಡುತ್ತದೆ. ಆಗ ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ. ನೀರಿನ ಕೊರತೆ ಹೆಚ್ಚಿದ್ದರೆ ಈ ನಂಬರ್‌ 9148594259ಗೆ ವಾಟ್ಸಾಪ್‌ ಮಾಡಿ.

Advertisement

ಉಡುಪಿ: ನಗರದಲ್ಲಿ ಮೂರು ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ನೀರು ಎಷ್ಟೊತ್ತಿಗೆ ಬರುತ್ತದೆ ಎಂಬುದೂ ಖಚಿತವಿಲ್ಲ. ಬಂದರೆ ಬಂತು ಎಂಬ ಸ್ಥಿತಿ! ಇಂತಹ ಸಂದರ್ಭ ಹೆಂಗಳೆಯರು ತವರು ಮನೆ ದಾರಿ ಹಿಡಿದರೆ, ಸಂಬಂಧಿಕರು, ಮಕ್ಕಳು ರಜಾಕಾಲದಲ್ಲಿ ಮನೆಗೆ ಬರಬೇಡಿ ಎಂದು ಸಂದೇಶ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ನೀರಿಗಾಗಿ ಕಾಯಬೇಕಾಗಿರುವುದರಿಂದ ಸಮಾರಂಭಗಳಿಗೂ ಗೈರಾಗುತ್ತಿದ್ದಾರೆ.

ಗುಂಡಿಬೈಲಿನಲ್ಲಿ ಸಮಸ್ಯೆ ತೀವ್ರ
ಗುಂಡಿಬೈಲು ವಾರ್ಡ್‌ನ ಎತ್ತರ ಪ್ರದೇಶದಲ್ಲಿರುವ ದೊಡ್ಡಣಗುಡ್ಡೆ, ಹುಡ್ಕೊà ಕಾಲನಿ, ವ್ಯಾಯಾಮ ಶಾಲೆ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಾಡಿದೆ. ಮೂರು ದಿನಗಳಿಗೊಮ್ಮೆ ನೀರು ಬಿಟ್ಟರೂ ನೀರಿನ ಒತ್ತಡ ಕಡಿಮೆ ಇರುವುದರಿಂದ ಎತ್ತರ ಪ್ರದೇಶಗಳಿಗೆ ನೀರು ಸಿಗುತ್ತಿಲ್ಲ. “ನೀರನ್ನು ಕಡೇ ಪಕ್ಷ ನಿಗದಿತ ಸಮಯಕ್ಕಾದರೂ ಬಿಟ್ಟು ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ’ ಎನ್ನುವ ಮಹಿಳೆಯರ ಕೂಗು ಗುಂಡಿಬೈಲು ವಾರ್ಡ್‌ನ ಪ್ರತೀ ಮನೆಯಲ್ಲಿಯೂ ಕೇಳಿ ಬರುತ್ತಿದೆ.

ನಗರಸಭೆ ನೀರೇ ಗತಿ
ಈ ವಾರ್ಡ್‌ ನಲ್ಲಿ ವಾರ್ಡ್‌ನಲ್ಲಿ ಸರಿಸುಮಾರು 1,500ಕ್ಕೂ ಮಿಕ್ಕಿದ ಮನೆಗಳಿವೆ. 30ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿವೆ. ಇವೆಲ್ಲವೂ ನಗರಸಭೆ ನೀರನ್ನೇ ಅವಲಂಬಿಸಿಕೊಂಡಿದೆ. ಗುಂಡಿಬೈಲು ವ್ಯಾಪ್ತಿಯ ಕರಂಬಳ್ಳಿ, ಸಂತೋಷನಗರ, ಚಕ್ರತೀರ್ಥ, ನೇಕಾರರ ಕಾಲನಿ ಮೊದಲಾದೆಡೆ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ.

ಬೆಳಗ್ಗೆ 4 ಗಂಟೆಗೆ ನೀರು!
ಒಮ್ಮೆ ನಸುಕಿನ 4 ಗಂಟೆಗೆ ನೀರು ಬಿಟ್ಟರೆ, ಇನ್ನೊಮ್ಮೆ ರಾತ್ರಿ ವೇಳೆ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಅತ್ತ ನಿದ್ದೆ ಮಾಡಲೂ ಆಗದೆ, ಇತ್ತ ನೀರು ತುಂಬಿಸಲೂ ಆಗದೆ ಜನರು ಹೈರಾಣಾಗಿದ್ದಾರೆ.

Advertisement

ನೀರು ಪೋಲು
ಒಂದೆಡೆ ನೀರಿನ ಸಮಸ್ಯೆಯಿಂದ ಇಡೀ ವಾರ್ಡ್‌ ತತ್ತರಿಸಿ ಹೋಗುತ್ತಿದ್ದರೆ, ಇನ್ನೊಂದೆಡೆ ಕೆಲವೊಂದು ಮನೆಗಳಲ್ಲಿ ನೀರನ್ನು ವಾಹನ ತೊಳೆಯಲು, ಮರಗಳಿಗೆ ಹಾಗೂ ಇತರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಎತ್ತರ ಪ್ರದೇಶದಲ್ಲಿರುವ ಮನೆಗಳಿಗೆ ನೀರಿನ ಕೊರತೆ ತೀವ್ರವಾಗಿದೆ ಎಂಬ ಆರೋಪವಿದೆ. ಇದಕ್ಕಾಗಿ ಕೂಡಲೇ ಪರಿಹಾರ ಕ್ರಮಕ್ಕೆ ಜನರು ಆಗ್ರಹಿಸಿದ್ದಾರೆ.

ವಾರ್ಡ್‌ ಜನರ ಬೇಡಿಕೆ
– ಆಯ್ದ ಪ್ರದೇಶದಲ್ಲಿ ಬೋರ್‌ವೆಲ್‌ ಅಳವಡಿಕೆ
– ಬಜೆ ಡ್ಯಾಂನಲ್ಲಿ ತುಂಬಿದ ಹೂಳು ಹಾಗೂ ಬಂಡೆಕಲ್ಲು ತೆರವು
– ನೀರಿನ ಒತ್ತಡ ಹೆಚ್ಚಳ
– ಎರಡು ದಿನಕ್ಕೊಮ್ಮೆ ನೀರು
– ಎತ್ತರ ಪ್ರದೇಶಗಳಿಗೆ ಟ್ಯಾಂಕರ್‌ ನೀರು

ನೀರಿಗೆ ಹಣ ತೆತ್ತರೆ ಊಟಕ್ಕಿಲ್ಲ!
ಖರೀದಿಸುವ ನೀರನ್ನು ಅಡುಗೆ, ಕುಡಿಯಲು, ಶೌಚಾಲಯಕ್ಕೆ, ಬಟ್ಟೆ ತೊಳೆಯಲು ಲೆಕ್ಕ ಹಾಕಿ ಉಪಯೋಗಿಸು ವಂತಾಗಿದೆ. ಈ ವಾರ್ಡ್‌ನಲ್ಲಿ ಒಟ್ಟಾರೆ ದಿನದಿಂದ ದಿನಕ್ಕೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತಿದೆ. ಒಂದೆಡೆ ನಮಗೆ ನಗರಸಭೆ ಅಧಿಕಾರಿಗಳು ನೀರು ಪೂರೈಸುತ್ತಿಲ್ಲ. ಕೂಲಿ ಮಾಡಿದ ಹಣ ನೀರಿಗೇ ಖರ್ಚಾದರೆ ಬಡವರಾದ ನಾವು ಬದುಕುವುದು ಹೇಗೆ?
-ವಿದ್ಯಾ, ಸ್ಥಳೀಯ ನಿವಾಸಿ.

ಸಂಬಂಧಿಕರೇ ಮನೆಗೆ ಬಾರದಿರಿ!
ನೀರಿನ ಸಮಸ್ಯೆ ಹೀಗೇ ಮುಂದುವರಿದರೆ ತವರು ಮನೆಯಲ್ಲಿ ನೆಲಸಬೇಕಾದ ಆತಂಕ ಕಾಡುತ್ತಿದೆ. ರಜೆಯಲ್ಲಿ ಸಂಬಂಧಿಕರು, ಮಕ್ಕಳು ಬರದಂತೆ ತಿಳಿಸಿದ್ದೇವೆ. ನಗರಸಭೆ ಬಿಡುವ ನೀರು ಮನೆಯ ನಾಲ್ವರಿಗೂ ಸಾಲುತ್ತಿಲ್ಲ. ಸಂಬಂಧಿಕರು ಬಂದರೆ ನಿತ್ಯ ಟ್ಯಾಂಕರ್‌ ನೀರು ಪಡೆಯಬೇಕಾದ ಪರಿಸ್ಥಿತಿ ಎದುರಾಗಬಹುದು.
-ವೀಣಾ, ದೊಡ್ಡಣಗುಡ್ಡೆ.

ಕಾರ್ಯಕ್ರಮಗಳಿಗೆ ಹೋಗುತ್ತಿಲ್ಲ
ಒತ್ತಡ ಕಡಿಮೆ ಇರುವುದರಿಂದ ನೀರು ತುಂಬಿಸಲು ಗಂಟೆಗಟ್ಟಲೆ ಕಾಯ ಬೇಕಾಗಿದೆ. ಇದರಿಂದಾಗಿ ಸಂಬಂಧಿಕರ ಮನೆಯ ಶುಭಸಮಾರಂಭಗಳಿಗೆ ಹೋಗುವಂತಿಲ್ಲ.
-ಶಾಲಿನಿ, ದೊಡ್ಡಣಗುಡ್ಡೆ 1ನೇ ಕ್ರಾಸ್‌

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next