ಮುಂಬಯಿ: ಸರಕಾರವು ಮತ ಹಾಕಲು ನೀಡಿರುವ ರಜೆಯ ಉಪಯೋಗ ಪಡೆದು ಮತದಾನ ಮಾಡದೆ ಇದ್ದಲ್ಲಿ ಆ ದಿನದ ವೇತನ ಕಡಿತಗೊಳಿಸಲಾಗುವುದು ಎಂಬ ಎಚ್ಚರಿಕೆ ಪನ್ವೇಲ್ ಮಹಾನಗರ ಪಾಲಿಕೆಯ ಆಯುಕ್ತ ಗಣೇಶ್ ದೇಶು¾ಖ್ ಅವರು ನೀಡಿದ್ದಾರೆ. ಮತದಾನಕ್ಕಾಗಿ ನೀಡಲಾದ ರಜೆಯ ಬಳಕೆ ಮತ ಹಾಕಿದ ಅನಂತರವೇ ನೈತಿಕ ಕರ್ತವ್ಯಕ್ಕೆ ಬಳಸಬೇಕು ಎಂದು ಹೇಳಿದ್ದಾರೆ. ಮಾವಳ್ ಲೋಕಸಭೆ ಕ್ಷೇತ್ರದಲ್ಲಿ ಎ.29ರಂದು ಮತದಾನ ನಡೆಯಲಿದ್ದು, ಪ್ರತ್ಯೇಕ ನಾಗರಿಕರು ತಮ್ಮ ಹಕ್ಕು ಚಲಾಯಿಸಬೇಕು. ಸರಕಾರಿ ಕಾರ್ಮಿಕರು ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶದ ಪಾಲನೆ ಮಾಡುವುದು ಆವಶ್ಯಕವಾಗಿದೆ.
ಮತದಾನಕ್ಕಾಗಿ ನೀಡಿರುವ ರಜೆಯ ಉಪಯೋಗ ಮತದಾನಕ್ಕಾಗಿ ಮಾಡಬೇಕೆಂಬ ಉದ್ದೇಶವಾಗಿದೆ. ಪನ್ವೇಲ್ ಮಹಾನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು, ಸಿಬಂದಿಗಳು ಹಾಗೂ ಗುತ್ತಿಗೆದಾರ ಕಾರ್ಮಿಕರು ತಮ್ಮ ಮತದಾನದ ಹಕ್ಕು ಚಲಾಯಿಸಬೇಕೆಂಬ ಉದ್ದೇಶವನ್ನು ಪೂರ್ಣಗೊಳಿಸಬೇಕು ಎಂದು ಆಯುಕ್ತರು ಹೇಳಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಎಲ್ಲ ಕಾರ್ಮಿಕರು ತಮ್ಮ ಹಕ್ಕು ಚಲಾಯಿಸದೆ ಹೋದಲ್ಲಿ ಅವರ ಆ ದಿನದ ವೇತನ ಕಡಿತಗೊಳಿಸ ಲಾಗುವುದು ಎಂದು ಹೇಳಿದರು.
ಮತದಾನವು ಸರಕಾರಿ ಕಾರ್ಯದ ಭಾಗವೇ ಆಗಿದೆ. ಮತದಾನ ಮಾಡಿದ ಅನಂತರ ಮಹಾನಗರ ಪಾಲಿಕೆಯ ಸಂಬಂಧಿಸಿದ ವಿಭಾಗಕ್ಕೆ ಮಾಹಿತಿ ನೀಡುವಂತೆ ಹೇಳಲಾಗಿದೆ. ಮಹಾನಗರ ಪಾಲಿಕೆಯಲ್ಲಿ ಸದ್ಯ ಗುತ್ತಿಗೆದಾರ ಕಾರ್ಮಿಕರು, ಗ್ರಾಮ ಪಂಚಾಯತ್ ಕಾರ್ಮಿಕರು ಸೇರಿದಂತೆ 700ಕ್ಕಿಂತ ಅಧಿಕ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶದಂತೆ ಕಾರ್ಮಿಕರಿಗೆ ಮತದಾನ ಮಾಡಲು ರಜೆ ಘೋಷಿಸಲಾಗಿದೆ. ಆದ್ದರಿಂದ ಸರಕಾರಿ ಸಿಬಂದಿ ಮತದಾನ ಮಾಡದೆ ಇದ್ದಲ್ಲಿ , ಶಿಸ್ತಿನ ಉಲ್ಲಂಘನೆ ಮಾಡಿದಂತಾಗುತ್ತದೆ. ಆದ್ದರಿಂದ ಮತದಾನ ಮಾಡದೆ ಇರುವ ಕಾರ್ಮಿಕರ ವಿರುದ್ಧ ಕ್ರಮ ಕೈಗೊಳ್ಳಲು ಆಡಳಿತ ಮುಂದಾಗಿದೆ.