ಹಾವೇರಿ: ಜನರು ಈಗ ಬುದ್ಧಿವಂತರಾಗಿದ್ದಾರೆ. ಮತ ಬ್ಯಾಂಕ್ ರಾಜಕಾರಣ ನಡೆಯಲ್ಲ. ಆದರೂ, ವಿಪಕ್ಷದವರು ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶ ಮಾಡುತ್ತಿದೆ. ಆದರೆ, ಯಾರ ಅವಧಿಯಲ್ಲಿ ಎಷ್ಟು ಕೆಲಸ ಮಾಡಿದ್ದಾರೆ ಎಂದು ಜನರು ತೀರ್ಮಾನಿಸುತ್ತಾರೆ. ಎಸ್‌ಸಿ, ಎಸ್‌ಟಿ ಸಮುದಾಯ ಜನಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಬೇಡಿಕೆ ಕೂಡಾ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದರು.
ಬೆಳಗಾವಿಯಲ್ಲಿ ಶ್ರೀರಾಮಸೇನೆ ಅಧ್ಯಕ್ಷನ ಮೇಲೆ ಗುಂಡಿನ ದಾಳಿ ಪ್ರಕರಣ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೂಡಲೇ ಆರೋಪಿಗಳನ್ನು ಬಂ ಧಿಸುವಂತೆ ಸೂಚಿಸಿದ್ದೇನೆ. ನಮ್ಮಲ್ಲಿ ಅಭಿಪ್ರಾಯ ಬೇಧ ಇರಬಹುದು. ಆದರೆ, ಹಿಂಸಾಚಾರ ಒಪ್ಪುವುದಿಲ್ಲ. ಯಾರೂ ಹತ್ಯೆ ಮಾಡುವ ಕೆಲಸಕ್ಕೆ ಹೋಗಬಾರದು. ಸರ್ಕಾರವೇ ಈ ಕೇಸ್‌ನಲ್ಲಿ ಆಸ್ಪತ್ರೆಯ ವೆಚ್ಚ ಭರಿಸುತ್ತದೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ. ಇದರ ಜತೆಗೆ ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಮಾಡಲಾಗುತ್ತದೆ ಎಂದರು.
ಯಾವ ಸ್ವಾಮೀಜಿಯೂ ಅರ್ಜಿ ಹಾಕಿಲ್ಲ: ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಇದುವರೆಗೆ ಯಾವ ಸ್ವಾಮೀಜಿಗಳೂ ಅರ್ಜಿ ಹಾಕಿಲ್ಲ. ನನ್ನನ್ನು ಸಂಪರ್ಕ ಕೂಡ ಮಾಡಿಲ್ಲ. ಏಲಕ್ಕಿ ನಾಡು ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಕಂಪು ಜಿಲ್ಲೆ ಮಾತ್ರಲ್ಲದೆ, ರಾಜ್ಯದ ತುಂಬೆಲ್ಲ ಪಸರಿಸಿದೆ. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ. ಸಾಹಿತಿಗಳ ಅನಿಸಿಕೆಯನ್ನು ಸಕಾರಾತ್ಮಕ ಪರಿಗಣಿಸುತ್ತೇವೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಲೋಕಕ್ಕೆ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಅಳವಡಿಕೆ ಮಾಡಿಕೊಳ್ಳುತ್ತೇವೆ. ಕನ್ನಡನಾಡಿನ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸಮ್ಮೇಳನ ಯಶಸ್ಸಿಗೆ ಶ್ರಮಿಸಿದ ಸಚಿವರಾದ ಶಿವರಾಮ್ ಹೆಬ್ಟಾರ, ವಿ.ಸುನೀಲಕುಮಾರ ಹಾಗೂ ಜಿಲ್ಲಾಡಳಿತವನ್ನು ಅಭಿನಂದಿಸಿದರು.