Advertisement

ಇದ್ದೂ ಇಲ್ಲದಂತಾದ ನೀರಿನ ಘಟಕ

04:09 PM Dec 24, 2019 | Suhan S |

ತಾವರಗೇರಾ: ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಪ್ರತಿ ಬಾರಿಯೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಂಬಂಧಿಸಿ ಭಾರಿ ಚರ್ಚೆ ನಡೆಯುತ್ತದೆ. ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕೊರತೆ ಹಾಗೂ ನಿರ್ಮಾಣ ಹಂತದಲ್ಲಿರುವ ಘಟಕಗಳನ್ನು ಪೂರ್ಣಗೊಳಿಸದಿರುವ ಪರಿಣಾಮ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅಶುದ್ಧ ನೀರೇ ಗತಿಯಾಗಿದೆ.

Advertisement

ಹೊಬಳಿ ವ್ಯಾಪ್ತಿಯ ಕಿಲ್ಲಾರಹಟ್ಟಿ, ಕಿಲ್ಲಾರಹಟ್ಟಿ ತಾಂಡಾ, ಇದ್ಲಾಪೂರ, ಮಾದಪೂರ, ವಿಠಲಾಪೂರ, ಹಂಚಿನಾಳ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಅಸಮರ್ಪಕ ನಿರ್ವಹಣೆ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಇದ್ದು ಇಲ್ಲದಂತಾಗಿವೆ. ಕಿಲ್ಲಾರಹಟ್ಟಿ ಗ್ರಾಪಂ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ 8-10 ತಿಂಗಳುಗಳಿಂದ ಸ್ಥಗಿತಗೊಂಡಿದೆ. ಗ್ರಾಮಸ್ಥರು ಸೇರಿದಂತೆ ಗ್ರಾಮ ಪಂಚಾಯತ್‌ ಸದಸ್ಯರು ಮತ್ತು ಸಿಬ್ಬಂದಿ ಅಶುದ್ಧ ನೀರು ಕುಡಿಯುವುದು ಅನಿವಾರ್ಯವಾಗಿದೆ.

ಕಿಲ್ಲಾರಹಟ್ಟಿ ತಾಂಡಾ: ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ಸುತ್ತಲು ಮುಳ್ಳುಕಂಟಿಗಳು ಬೆಳೆದು ನಿಂತಿದ್ದು, ಸುತ್ತಲು ದನ, ಕರು, ಕುರಿ, ಆಡುಗಳು ಮಲಗಿರುತ್ತವೆ. ಈ ಗ್ರಾಮದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿದ್ದು, ಇಂದುವರೆಗೂ ಆ ಘಟಕ್ಕೆ ನೀರು ಶುದ್ಧೀಕರಣ ಯಂತ್ರ ಅಳವಡಿಸಿಲ್ಲ. ತಾಂತ್ರಿಕ ಸಮಸ್ಯೆಗಳಿಂದ ಘಟಕ ಪ್ರಾರಂಭವಾಗಿಲ್ಲ ಎಂದು ಗ್ರಾಮಸ್ಥರಾದ ಅಮರೇಗೌಡ ಪಾಟೀಲ, ದೊಡ್ಡಬಸಪ್ಪ, ದುರಗೇಶ ಆರೋಪಿಸುತ್ತಾರೆ.

ಹೋಬಳಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿದ ಆರು ಘಟಕಗಳ ಕಾಮಗಾರಿ ಅಪೂರ್ಣವಾಗಿದೆ. ಇದುವರೆಗೂ ಇದುವರೆಗೂ ಯಾವುದೇ ಘಟಕದಿಂದ ಹನಿ ನೀರು ಲಭಿಸಿಲ್ಲ. ಶುದ್ಧ ನೀರಿನ ಘಟಕಗಳು ಸಂಪೂರ್ಣವಾಗಿ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಗ್ರಾಪಂ ಸುಪರ್ದಿಗೆ ತೆಗೆದುಕೊಂಡಿಲ್ಲ. ಯಂತ್ರ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಕೊರತೆಯಿಂದ ಶುದ್ಧ ಕುಡಿಯುವ ನೀರಿನ ಘಟಕವು ಬೆದರುಗೊಂಬೆಯಂತಾಗಿವೆ.

ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ನಿರ್ಮಾಣವಾಗದ ಕಾರಣ ಅನಿವಾರ್ಯವಾಗಿ ಅಶುದ್ಧ ನೀರು ಕುಡಿಯಬೇಕಾಗಿದೆ. ಇಲ್ಲದಿದ್ದರೆ ದೂರದ ತಾವರಗೇರಾ ಪಟ್ಟಣಕ್ಕೆ ಹೋಗಿ ಶುದ್ಧ ನೀರು ತರಬೇಕಾದ ಪರಿಸ್ಥಿತಿ ಬಂದಿದೆ. ದುರಗೇಶ ಬೋಗಾಪೂರ, ಇದ್ಲಾಪೂರ ಗ್ರಾಮಸ್ಥ

Advertisement

 

 –ಎನ್‌. ಶಾಮೀದ್‌

Advertisement

Udayavani is now on Telegram. Click here to join our channel and stay updated with the latest news.

Next