ಗಜೇಂದ್ರಗಡ: ಸ್ಥಳೀಯ ಪುರಸಭೆ ಲಕ್ಷಾಂತರ ರೂ. ನೀಡಿ ಖರೀದಿಸಿದ ಜೆಸಿಬಿ ಯಂತ್ರ ಕಳೆದೊಂದು ವರ್ಷದಿಂದ ಕಾರ್ಯ ನಿರ್ವಹಿಸದೇ ತುಕ್ಕು ಹಿಡಿದು ಮೂಲೆ ಸೇರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಹೊರವಲಯದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮತ್ತು ಪುರಸಭೆಯ ಕೆಲಸಕ್ಕಾಗಿ 2012-13ನೇ ಸಾಲಿನಲ್ಲಿ 6 ಲಕ್ಷ ವೆಚ್ಚದಲ್ಲಿ ಖರೀದಿಸಿದ ಜೆಸಿಬಿ ಯಂತ್ರ ಕಳೆದ ವರ್ಷದಿಂದ ದುರಸ್ತಿಗೊಂಡು ಪುರಸಭೆ ಆವರಣದ ಮೂಲೆ ಸೇರಿದೆ. ಜೆಸಿಬಿಯ ಕಿಟಕಿಗಳ ಗಾಜು ಸಂಪೂರ್ಣ ಪುಡಿ ಪುಡಿಯಾಗಿರುವುದು ಪುರಸಭೆ ಆಡಳಿತದ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸಾರ್ವಜನಿಕರ ತೆರಿಗೆ ಹಣವನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಳ್ಳುವುದನ್ನು ಬಿಟ್ಟು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಮೂಲೆ ಸೇರಿದ ಲಕ್ಷಾಂತರ ಮೌಲ್ಯದ ಜೆಸಿಬಿ ಯಂತ್ರವೇ ಸಾಕ್ಷಿಯಾಗಿದೆ. ಕಳೆದೊಂದು ವರ್ಷದಿಂದ ದುರಸ್ತಿಗೊಳಪಟ್ಟರೂ ಸಹ ರಿಪೇರಿ ಮಾಡಿಸಿ, ಬಳಕೆ ಮಾಡುವುದನ್ನು ಬಿಟ್ಟು ಮೂಲೆಗೆ ತಳ್ಳಿದ ಪರಿಣಾಮ ಜೆಸಿಬಿ ಸುತ್ತಲೂ ಜಾಲಿಕಂಟಿಗಳು ಆವರಿಸಿಕೊಂಡಿರುದ್ದು, ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣದಲ್ಲಿ 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಸಾರ್ವಜನಿಕರ ಕಾರ್ಯಕ್ಕೆ ಜೆಸಿಬಿ ಯಂತ್ರದ ಅವಶ್ಯಕತೆ ಮುಖ್ಯವಾಗಿದೆ. ಆದರೆ ಈಗಾಗಲೇ ಒಂದು ಜೆಸಿಬಿಯಿಂದ ಸಮರ್ಪಕ ಕೆಲಸಗಳು ನಡೆಯುತ್ತಿಲ್ಲ. ಮೂಲೆ ಸೇರಿದ ಜೆಸಿಬಿ ಯಂತ್ರ ದುರಸ್ತಿಗೊಳಿಸಿದರೆ ಅಭಿವೃದ್ಧಿ ಕಾರ್ಯ ತ್ವರಿತಗತಿಯಲ್ಲಿ ಸಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪಟ್ಟಣದ ನಾಗರಿಕರ ತೆರಿಗೆ ಹಣವನ್ನು ಪೋಲು ಮಾಡುವುದನ್ನು ಬಿಟ್ಟು ಜೆಸಿಬಿ ಯಂತ್ರವನ್ನು ಕೂಡಲೇ ದುರಸ್ತಿಗೊಳಪಡಿಸಿ, ಇಲ್ಲವಾದರೆ ಗುಜರಿಗೆ ಹಾಕಲು ಕ್ರಮ ಕೈಗೊಳ್ಳಬೇಕನ್ನುವುದು ಪಟ್ಟಣದ ಜನತೆಯ ಆಗ್ರಹವಾಗಿದೆ.