Advertisement

ಬಳಕೆಗೆ ಬಾರದ 2 ಕೋಟಿ ವೆಚ್ಚದ ಭವ್ಯ ಕಟ್ಟಡ

01:11 PM Jul 30, 2019 | Suhan S |

ಯಾದಗಿರಿ: ಸರ್ಕಾರಿ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ 4 ವರ್ಷಗಳ ಹಿಂದೆ ನಿರ್ಮಿಸಿದ ಕಟ್ಟಡವನ್ನು ಕಾಲೇಜು ಶಿಕ್ಷಣ ಇಲಾಖೆ ಉಪಯೋಗಿಸುವ ಗೋಜಿಗೆ ಹೋದಂತಿಲ್ಲ.

Advertisement

ಹೌದು. 2013-14ರಲ್ಲಿ 98 ಲಕ್ಷ ರೂ., 2014-15 ರಲ್ಲಿ 99.42 ಲಕ್ಷ ರೂ. ಒಟ್ಟಾರೆ ಅಂದಾಜು 2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಈ ಭವ್ಯ ಕಟ್ಟಡ ಉಪಯೋಗಕ್ಕೆ ಬಾರದೇ ನಿರುಪಯುಕ್ತವಾಗಿದೆ.

ಯಾದಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗ ಇದ್ದು, ಸದ್ಯ ಸರ್ಕಾರ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಇಲಾಖೆಗಳ ಮೂಲಕ ಮೆಟ್ರಿಕ್‌ ನಂತರದ ವಸತಿ ನಿಲಯಗಳಲ್ಲಿ ಪದವಿವರೆಗಿನ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಅವಕಾಶ ಇದೆ. ಆದರೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಇಲ್ಲದಿರುವುದು ಸಾಕಷ್ಟು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ.

ಹಾಗಾಗಿ ಪ್ರಸ್ತುತ ನಿರ್ಮಾಣಗೊಂಡು ನಿರುಪಯುಕ್ತವಾಗಿರುವ ಕಟ್ಟಡದಲ್ಲಿ ಸರ್ಕಾರ ಸಂಬಂಧಿಸಿದ ಇಲಾಖೆ ಮೂಲಕ ಪಿಜಿ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಆರಂಭಿಸಬೇಕು ಎಂಬ ಒತ್ತಾಯ ವಿದ್ಯಾರ್ಥಿಗಳಿಂದ ಕೇಳಿ ಬರುತ್ತಿದ್ದು, ಪಿಜಿ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯದ ವ್ಯವಸ್ಥೆ ಮಾಡುವಂತೆ ಕಾಲೇಜಿನ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ಪತ್ರ ಬರೆದು ಮನವಿ ಮಾಡಿದ್ದಾರೆ.

ಈಗಾಗಲೇ ಮುದ್ನಾಳ ಬಳಿ ನೂತನ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳ ವಸತಿಯುಕ್ತ ಕಾಲೇಜು ಸಹ ಸದ್ಯ ಡಿಗ್ರಿ ಕಾಲೇಜಿನಲ್ಲಿಯೇ ಆರಂಭಿಸಲಾಗಿದ್ದು, ಇಲ್ಲಿ ಪ್ರವೇಶ ಪಡೆದ ಮಕ್ಕಳು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಕನಿಷ್ಟ ಪಕ್ಷ ವಸತಿಯುಕ್ತ ಕಾಲೇಜಿನ ವಿದ್ಯಾರ್ಥಿ ಗಳಿಗಾದರೂ ಅನುಕೂಲವಾಗುವಂತೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

Advertisement

ಕಟ್ಟಡ ಸಂಪೂರ್ಣವಾಗಿದೆ. ಇದರ ನಿರ್ವಹಣೆ ಕೋರಿ ಪತ್ರ ವ್ಯವಹಾರ ಮಾಡಲಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಟ್ಟಡದಲ್ಲಿ ವಸತಿ ಸೌಕರ್ಯ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ. ಸಂಬಂಧಿಸಿದ ಇಲಾಖೆ ಮೂಲಕ ವಸತಿ ನಿಲಯ ಆರಂಭಿಸಿದರೆ ಮಕ್ಕಳಿಗೆ ಅನುಕೂಲವಾಗಲಿದೆ. •ಡಾ| ಶುಭಾಶ್ಚಂದ್ರ ಕೌಲಗಿ, ಪ್ರಾಂಶುಪಾಲ, ಡಿಗ್ರಿ ಕಾಲೇಜು.

ವಸತಿ ನಿಲಯದ ಕಟ್ಟಡ ಮಾತ್ರವಿದೆ. ಅದರಲ್ಲಿ ಸೂಕ್ತ ಸಲಕರಣೆಗಳಿಲ್ಲ. ವಸತಿ ನಿಲಯಕ್ಕೆ ಬೇಕಿರುವ ಸೌಕರ್ಯ ಕಲ್ಪಿಸಿದರೆ ವಸತಿಯುಕ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಬಳಕೆಯಾಗುತ್ತದೆ. •ಅಶೋಕ ವಾಟ್ಕರ್‌, ಪ್ರಾಂಶುಪಾಲ, ವಸತಿಯುಕ್ತ ಕಾಲೇಜು.

 

•ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next