ರೋಣ: ಸಾವಿರಾರು ಪುಸ್ತಕಗಳಿವೆ, ಉತ್ತಮವಾದ ಕಟ್ಟಡವೂ ಇದೆ, ಆದರೆ ಸುತ್ತಮುತ್ತ ಒಳ್ಳೆಯ ಗಾಳಿ, ಬೆಳಕು, ಪರಿಸರವಿಲ್ಲದ್ದರಿಂದ ತಾಲೂಕಿನ ಕುರಹಟ್ಟಿ ಗ್ರಾಪಂ ಕಟ್ಟಡದ ಸೇವಾ ಕೇಂದ್ರದಲ್ಲಿ ನಡೆಯುತ್ತಿರುವ ಗ್ರಾಮೀಣ ಗ್ರಂಥಾಲಯ ಇದ್ದೂ ಇಲ್ಲದಂತಾಗಿದೆ. 5468 ಪುಸ್ತಕಗಳು ಇಲ್ಲಿದ್ದು, 480ಕ್ಕೂ ಅಧಿಕ ಸದಸ್ಯರಿದ್ದಾರೆ.
ಇತ್ತೀಚೆಗೆ ಗ್ರಂಥಾಲಯ ಇಲಾಖೆಯಿಂದ ಪುಸ್ತಕಗಳು ಬಂದಿದ್ದು, ಅವುಗಳನ್ನು ದಾಖಲಿಸಿಡುವ ಕೆಲಸ ಮಾತ್ರ ಆಗಿಲ್ಲ. ಬೆಳಿಗ್ಗೆ ದಿನಪತ್ರಿಕೆಗಳನ್ನು ಓದಿ ಸಂಜೆ ಪುಸ್ತಕಗಳನ್ನು ಓದಿದರಾಯ್ತು ಎಂದು ಕೊಂಡವರಿಗೆ ಮುಚ್ಚಿರುವ ಬಾಗಿಲು ಕಾಣುತ್ತದೆ. ಗ್ರಂಥಾಲಯದ ಮೇಲ್ವಿಚಾರಕಿ ಬೆಳಿಗ್ಗೆ 10 ಗಂಟೆಯ ಆಸುಪಾಸಿನಲ್ಲಿ ಗ್ರಂಥಾಲಯದ ಬಾಗಿಲು ತೆರೆಯುತ್ತಾರೆ.ಹೀಗಾಗಿ ಸಮಯಕ್ಕೆ ಸರಿಯಾಗಿ ಪುಸ್ತಕ, ದಿನಪತ್ರಿಕೆಗಳು ಓದಲು ಸಾಧ್ಯವಾಗುತ್ತಿಲ್ಲ.
ಬಯಲು ಶೌಚ ಪಕ್ಕದಲ್ಲೇ ಗ್ರಂಥಾಲಯ: 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲ.ಗ್ರಾಮ ಪಂಚಾಯತಿ ಸೇವಾ ಕೇಂದ್ರದಲ್ಲಿ ನಡೆಯುತ್ತಿದ್ದು, ಈ ಕಟ್ಟಡ ಪಕ್ಕದಲ್ಲಿ ಗ್ರಾಮದ ಮಹಿಳೆಯರು, ಮಕ್ಕಳು ಬಯಲು ಶೌಚಕ್ಕೆ ಹೋಗುತ್ತಾರೆ. ಹೀಗಾಗಿ ದುರ್ವಾಸನೆ ಬೀರುತ್ತದೆ. ಅಲ್ಲದೇ ಗ್ರಂಥಾಲಯ ಕಟ್ಟಡದ ಹಿಂದುಗಡೆಯೇ ದೊಡ್ಡದಾದ ಕೆರೆ ಇದ್ದು,ಆ ಕೆರೆ ನೀರು ಕಲುಷಿತಗೊಂಡಿದ್ದು, ಗಬ್ಬು ವಾಸನೆ ಬರುತ್ತಿದೆ.
ಗ್ರಾಪಂ ವತಿಯಿಂದ ಇಡೀ ಗ್ರಾಮದ ಎಲ್ಲ ಮನೆಗಳಿಗೆ ಶೌಚಾಲಯ ನಿರ್ಮಿಸಿ ಕೊಟ್ಟಿದ್ದೇವೆ. ಆದರೆ ಗ್ರಾಮದ ಮಹಿಳೆಯರು ಗ್ರಂಥಾಲಯ ಪಕ್ಕದಲ್ಲೇ ಬಯಲು ಶೌಚ ಮಾಡುತ್ತಾರೆ.ಇದರಿಂದ ಗ್ರಂಥಾಲಯಕ್ಕೆ ಓದಲು ಬರುವವರಿಗೆ ದುರ್ವಾಸನೆ ಬರುತ್ತದೆ. ಶೌಚಾಲಯ ಬಳಸಿಕೊಳ್ಳುವಂತೆ ಮಹಿಳೆಯರಿಗೆ ಮನವಿ ಮಾಡಿದರೂ ಉಪಯೋಗವಾಗುತ್ತಿಲ್ಲ. ಗ್ರಂಥಾಲಯಕ್ಕೆ ಬೇರೆ ಕಟ್ಟಡದ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ.-ಚಂದ್ರಶೇಖರಗೌಡ ಪಾಟೀಲ, ಗ್ರಾಪಂ ಸದಸ್ಯ.
-ಯಚ್ಚರಗೌಡ ಗೋವಿಂದಗೌಡ್ರ