Advertisement

ಮೂಲೆ ಸೇರಿದ ಕಸ ವಿಲೇವಾರಿ ಬಂಡಿ!

01:27 PM Oct 27, 2021 | Team Udayavani |

ಮಸ್ಕಿ: ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆ ಇಂದು, ನಿನ್ನೆಯದಲ್ಲ; ಪ್ರತಿ ದಿನವೂ ಸಮರ್ಪಕ ಕಸ ವಿಲೇವಾರಿ ಆಗುತ್ತಿಲ್ಲ ಎನ್ನುವ ದೂರುಗಳಿವೆ. ಇಂತಹ ದೂರುಗಳನ್ನು ದೂರ ಮಾಡುವುದಕ್ಕಾಗಿಯೇ ಲಕ್ಷಾಂತರ ರೂ. ಖರ್ಚು ಮಾಡಿ ಕಸ ವಿಲೇವಾರಿಗೆ ತಳ್ಳು ಬಂಡಿ ಖರೀದಿ ಮಾಡಲಾಗಿದೆ. ಆದರೆ ಇವು ಬಳಕೆ ಇಲ್ಲದೇ ಇಟ್ಟಲ್ಲಿಯೇ ತುಕ್ಕು ಹಿಡಿಯುತ್ತಿವೆ!.

Advertisement

ಮಸ್ಕಿ ಪುರಸಭೆ ಆಡಳಿತಾಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಇಂತಹ ಪರಿಸ್ಥಿತಿಗೆ ಕಾರಣವಾಗಿದೆ. ಆಡಳಿತ ಮಂಡಳಿ ಇದ್ದಾಗ, ಆಡಳಿತ ಮಂಡಳಿ ಇಲ್ಲದೇ ಸಹಾಯಕ ಆಯುಕ್ತ ದರ್ಜೆ ಅಧಿ ಕಾರಿಗಳು ಆಡಳಿತದ ಉಸ್ತುವಾರಿ ಹೊತ್ತಾಗಲೂ ಇಂತಹ ಸಮಸ್ಯೆ ಜೀವಂತವಿರುವುದು ನಾಗರಿಕರ ಟೀಕೆಗೆ ಗುರಿಯಾಗಿದೆ. ಬಹು ಲಕ್ಷ ವಿನಿಯೋಗಿಸಿ ಖರೀದಿಸಿದ ಸಾಮಗ್ರಿಗಳು ಬಳಕೆ ಇಲ್ಲದೇ ಇಟ್ಟಲ್ಲಿಯೇ ಹಾಳಾಗುತ್ತಿರುವುದು ವಿಪರ್ಯಾಸ.

ನಿತ್ಯ ಸಮಸ್ಯೆ

ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಹಲವು ವರ್ಷಗಳಿಂದಲೂ ಜೀವಂತವಿದೆ. ತ್ಯಾಜ್ಯ ವಿಲೇವಾರಿಗೆ ಜಾಗದ ಸಮಸ್ಯೆ ಇರುವ ಕಾರಣ ಸಮರ್ಪಕ ಕಸ ವಿಲೇವಾರಿಗೆ ಅಡ್ಡಿಯಾಗುತ್ತಿದೆ ಎನ್ನುವ ಸಬೂಬು ಪುರಸಭೆ ಅಧಿಕಾರಿಗಳಿಂದ ಆಗಾಗ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ತಾತ್ಕಾಲಿಕವಾಗಿ ಕೆಲ ಪ್ರದೇಶ ಗುರುತಿಸಿ ವಿಲೇವಾರಿಗೆ ಅನುಕೂಲ ಮಾಡಲಾಗಿದೆ. ಆದರೆ ಈ ಜಾಗಕ್ಕೂ ಕಸ ವಿಲೇವಾರಿ ಆಗುತ್ತಿಲ್ಲ.

ಆಟೋ, ಟ್ರ್ಯಾಕ್ಟರ್‌ ಸೇರಿ ಅತ್ಯಾಧುನಿಕ ವಾಹನಗಳ ಸೌಲಭ್ಯವಿದ್ದರೂ ಅಚ್ಚುಕಟ್ಟಾಗಿ ಕಸ ವಿಲೇವಾರಿ ಆಗುತ್ತಿಲ್ಲ ಎನ್ನುವ ಕೂಗು ನಾಗರಿಕರದ್ದು. ಇದೇ ಕಾರಣಕ್ಕೆ ಪೌರ ಕಾರ್ಮಿಕರ ಜತೆಗೆ ಮನೆ-ಮನೆ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಅನುವಾಗಲೆಂದು 50ಕ್ಕೂ ಹೆಚ್ಚು ಕಸ ವಿಲೇವಾರಿ ತಳ್ಳು ಬಂಡಿ ಖರೀದಿಸಲಾಗಿದೆ. ಪುರಸಭೆ ನಿಧಿಯಿಂದ ಲಕ್ಷಾಂತರ ರೂ. ಹಣ ಇದಕ್ಕಾಗಿ ಖರ್ಚು ಮಾಡಲಾಗಿದೆ. ಆದರೆ ಇವುಗಳ ಬಳಕೆಯೇ ಇಲ್ಲದಾಗಿದೆ.

Advertisement

ಇದನ್ನೂ ಓದಿ: ಆಂಗ್ಲ ಭಾಷಾ ವ್ಯಾಮೋಹದಿಂದ ಹೊರ ಬನ್ನಿ

ತುಕ್ಕು ಹಿಡಿತ

ಪುರಸಭೆ ಹೊಸ ಕಟ್ಟಡ ನಿರ್ಮಾಣ ಕಾರಣಕ್ಕಾಗಿ ಎಪಿಎಂಸಿ ಮಳಿಗೆಯಲ್ಲಿ ತಾತ್ಕಾಲಿಕ ಕಚೇರಿ ನಿರ್ಮಾಣ ಮಾಡಲಾಗಿದೆ. ಆದರೆ ನಿರ್ಮಾಣ ಹಂತದಲ್ಲಿರುವ ಕಚೇರಿ ಬಳಿ ಕರ ಸಂಗ್ರಹಿಸುತ್ತಿದ್ದ ಕಟ್ಟಡದ ಎದುರಿನಲ್ಲಿ ಈ ಕಸ ವಿಲೇವಾರಿ ಬಂಡಿಗಳನ್ನು ಗುಡ್ಡೆ ಹಾಕಲಾಗಿದೆ. ಇವು ಬಳಕೆ ಮಾಡದ ಕಾರಣ ಉರಿ ಬಿಸಿಲು, ಮಳೆ-ಗಾಳಿಗೆ ತಳ್ಳು ಬಂಡಿಗಳು ಸಂಪೂರ್ಣ ಹಾಳಾಗುತ್ತಿವೆ. ಮಳೆಯಿಂದಾಗಿ ಸಂಪೂರ್ಣ ತುಕ್ಕು ಹಿಡಿದು ಹಾಳಾಗುತ್ತಿವೆ. ಲಕ್ಷಾಂತರ ರೂ. ವ್ಯಯಿಸಿ ಖರೀದಿಸಿದ ಈ ಸಾಮಗ್ರಿಗಳು ಬಳಕೆಗೆ ಮುನ್ನವೇ ಹಾಳಾಗುತ್ತಿದ್ದು, ಸರ್ಕಾರಿ ಹಣ ಅನಗತ್ಯ ಪೋಲು ಮಾಡಿದಂತಾಗುತ್ತಿದೆ.

ಪುರಸಭೆ ಅಧಿಕಾರಿಗಳು ಲಕ್ಷಾಂತರ ಹಣ ಖರ್ಚು ಮಾಡಿ ಸಾಮಗ್ರಿ ಖರೀದಿಸುತ್ತಾರೆ. ಆದರೆ ಇವುಗಳ ಸಮರ್ಪಕ ಬಳಕೆ ನಡೆಯುತ್ತಿಲ್ಲ. ಕನಿಷ್ಟ ನಾಗರಿಕರಿಗಾದರೂ ಇವುಗಳ ವಿತರಣೆ ಮಾಡಿದರೆ ಸದ್ಬಳಕೆಯಾಗಲಿವೆ. -ಅಶೋಕ ಮುರಾರಿ, ನಾಗರಿಕ, ಮಸ್ಕಿ

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next