ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಸುಮಾರು 5,590 ಜನವಸತಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಗ್ರಾಮಗಳಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ಒಂದಾಗಿದ್ದರೂ, ಎರಡು ವರ್ಷಗಳಿಂದ ಇಲ್ಲಿಗೆ ಖಾಯಂ ಪಿಡಿಒ ನೇಮಕ ಮಾತ್ರ ಆಗಿಲ್ಲ.
ಕಚೇರಿಯಲ್ಲಿ ಪೂರ್ಣಕಾಲಿಕ ಪಿಡಿಒ ಕಾರ್ಯನಿರ್ವಹಣೆ ಇಲ್ಲದೆ ಇರುವುದರಿಂದ ಗ್ರಾಮದಲ್ಲಿನ ಸಮಸ್ಯೆಗಳಿಗೆ ಸಮರ್ಪಕವಾದ ಪರಿಹಾರ ಕಂಡುಕೊಳ್ಳುವಲ್ಲಿ ಹಿನ್ನಡೆಯಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೂ ಕೂಡಾ ಕಾರಣವಾಗಿದೆ.
ಈ ಹಿಂದೆ ಪಿಡಿಒ ಆಗಿ ಕಾರ್ಯನಿರ್ವಹಿಸಿದ ದೀಪಾ ಎನ್ನುವವರು ಸಾರ್ವಜನಿಕ ಸಮಸ್ಯೆಗಳಿಗೆ ತತ್‌ಕ್ಷಣವೇ ಸ್ಪಂದಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಬದಲಾದ ವ್ಯವಸ್ಥೆಯಲ್ಲಿ ವರ್ಗಾವಣೆಗೊಂಡು ಸುಮಾರು ಎರಡು ವರ್ಷಗಳೇ ಕಳೆದರೂ ಕೂಡಾ ಇದುವರೆಗೆ ಪೂರ್ಣ ಪ್ರಮಾಣದ ಅಧಿಕಾರಿಗಳು ಸೇವೆ ಸಲ್ಲಿಸದಿರುವುದು ಮಾತ್ರ ಬೇಸರದ ಸಂಗತಿ.
ಪ್ರಸ್ತುತ ಗ್ರಾ.ಪಂ. ಕಚೇರಿಯ ಸಮಯದಲ್ಲಿ ಪಿಡಿಒ ಲಭ್ಯ ವಾಗದಿರುವುದರಿಂದ ಗ್ರಾಮಸ್ಥರ ಸಮಸ್ಯೆ ಹಾಗೂ ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ಪರೋಕ್ಷವಾಗಿ ಕುಂಠಿತವಾಗುತ್ತಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಎರಡು ಗ್ರಾ.ಪಂ.ಒಬ್ಬರೇ ಪಿಡಿಒ
ಕುಂದಾಪುರದ ಹಂಗಳೂರು, ತೆಕ್ಕಟ್ಟೆ ಸೇರಿದಂತೆ ಒಟ್ಟು ಎರಡು ಗ್ರಾಮ ಪಂಚಾಯತ್‌ಗಳಲ್ಲಿ ಪಿಡಿಒ ರಾಜೇಶ್ ಕೆ.ಸಿ. ಒಬ್ಬರೇ ಒತ್ತಡದ ನಡುವೆ ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಎದುರಾಗಿದೆ. ಆದ್ದರಿಂದ ತತ್‌ಕ್ಷಣವೇ ಪಿಡಿಒ ನೇಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.