Advertisement

ಸಾಲುಮರದ ತಿಮ್ಮಕ್ಕ ಉದ್ಯಾನ ಗುಡಿಬಂಡೆಗೆ ಏಕೆ ಇಲ್ಲ?

04:03 PM Jun 08, 2022 | Team Udayavani |

ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುಡಿಬಂಡೆ ಹೊರತುಪಡಿಸಿ, ಎಲ್ಲಾ ತಾಲೂಕುಗಳಲ್ಲೂ ಸಾಲುಮರದ ತಿಮ್ಮಕ್ಕ ಉದ್ಯಾನ ಇದೆ. ಆದರೆ, ಇಲ್ಲಿ ಮಾತ್ರ ಇನ್ನು ಸ್ಥಾಪಿಸದೇ ಇರುವುದಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ರಾಜ್ಯದಲ್ಲೇ ಅತಿ ಹಿಂದುಳಿದ ತಾಲೂಕು ಎಂಬ ಬಿರುದನ್ನು ಪಡೆದಿರುವ ಗುಡಿಬಂಡೆ, ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಕ್ಷೇತ್ರಗಳಲ್ಲೂ ಹಿಂದೆ ಉಳಿದಿದೆ. ಇತ್ತೀಚೆಗೆ ಶೈಕ್ಷಣಿಕವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವ ತಾಲೂಕಾಗಿ, ಸಕಾಲ ಸೇರಿ ಇತರೆ ಸೇವೆ ಜನರಿಗೆ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ.

ಸೀಮಿತ ಉದ್ದೇಶಗಳಿಗೆ ಮಾತ್ರ ಬಳಕೆ: ಜಿಲ್ಲೆಯ ಬೇರೆ ತಾಲೂಕುಗಳಲ್ಲಿ ಸರ್ಕಾರದಿಂದ ಬರುವ ವಿವಿಧ ಯೋಜನೆಗಳನ್ನು, ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸುತ್ತಿದ್ದರೆ, ಗುಡಿಬಂಡೆ ತಾಲೂಕಿನಲ್ಲಿ ಮಾತ್ರ ಅನುದಾನ ಸದ್ಬಳಕೆಯಾಗದೇ ಕೇವಲ ಕಾಟಾಚಾರಕ್ಕೆ ಎಂಬಂತೆ ಕೆಲವು ಸೀಮಿತ ಉದ್ದೇಶಗಳಿಗೆ ಮಾತ್ರ ಬಳಕೆ ಆಗುತ್ತಿರುವುದು ದುರಂತವೇ ಸರಿ.

ಗುಡಿಬಂಡೆಗಿಲ್ಲ ಟ್ರೀ ಪಾರ್ಕ್‌: ಇದಕ್ಕೆ ಪೂರಕ ಎಂಬಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಪರಿಸರದ ಬಗ್ಗೆ ಕಾಳಜಿ ಹುಟ್ಟಿಸುವ ಸಲುವಾಗಿ ಮತ್ತು ಸಾಲುಮರದ ತಿಮ್ಮಕ್ಕ ಅವರ ಆಸೆಯಂತೆ 2017-18ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಅರಣ್ಯ ಭೂಮಿಯಲ್ಲಿ ವೃಕ್ಷ ಉದ್ಯಾನವನ್ನು (ಟ್ರೀ ಪಾರ್ಕ್‌) ನಿರ್ಮಾಣ ಮಾಡಲು ಆದೇಶಿಸಿದೆ. ಅದರಂತೆ ಗುಡಿಬಂಡೆ ಹೊರತುಪಡಿಸಿ, ಎಲ್ಲಾ ತಾಲೂಕುಗಳಲ್ಲೂ ಉದ್ಯಾನ ಅಭಿವೃದ್ಧಿಯಾಗಿ, ಸಾರ್ವಜನಿಕರಿಗೆ ಉಪಯೋಗವಾಗಿ ವಾಯು ವಿಹಾರ ಕೇಂದ್ರಗಳಾಗಿವೆ.

ಸರ್ಕಾರ ಆದೇಶವಾಗಿ 5 ವರ್ಷ ಕಳೆಯುತ್ತಿದ್ದರೂ, ಸಾರ್ವಜನಿಕರು ಅರಣ್ಯ ಇಲಾಖಾ ಅಧಿಕಾರಿಗಳಿಗೆ ವಿಚಾರಿಸಿದಾಗ ಉದ್ಯಾನ ನಿರ್ಮಾಣ ಮಾಡಲು ಸರ್ಕಾರದ ಆದೇಶದಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದರಲ್ಲಿ ಮಾತ್ರ ಮಾಡಲು ಆದೇಶವಿದೆ. ಇದರಿಂದ ಗುಡಿಬಂಡೆಯಲ್ಲಿ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದರಿಂದ ಪರಿಸರ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅತಿ ಜರೂರಾಗಿ ಗುಡಿಬಂಡೆಯಲ್ಲಿ ಟ್ರೀಪಾರ್ಕ್‌ ಮಾಡಲು ಒತ್ತಾಯಿಸಿದ್ದಾರೆ.

Advertisement

ಸರ್ಕಾರದ ಆದೇಶದಂತೆ ವಿಧಾನಸಭಾ ಕ್ಷೇತ್ರಕ್ಕೆ ಒಂದು ಉದ್ಯಾನ ನಿರ್ಮಾಣ ಮಾಡಲು ಆದೇಶ ಇರುವುದರಿಂದ, ಬಾಗೇಪಲ್ಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮುಂದೆ ಸರ್ಕಾರದಿಂದ ಆದೇಶ ಬಂದರೆ ಗುಡಿ ಬಂಡೆಯಲ್ಲಿ ನಿರ್ಮಾಣ ಮಾಡುತ್ತೇವೆ. – ಅರ್ಸಲನ್‌, ಡಿಎಫ್‌ಒ, ಚಿಕ್ಕಬಳ್ಳಾಪುರ.

ವಿಧಾನಸಭಾ ಕ್ಷೇತ್ರಕ್ಕೆ ಒಂದು ಉದ್ಯಾನ ಎಂದು ಹೇಳಿಕೊಂಡು ಗುಡಿಬಂಡೆಯಲ್ಲಿ ನಿರ್ಮಾಣ ಮಾಡದೇ ಇರುವುದು ದುರಂತ. ಕೂಡಲೇ ಗುಡಿಬಂಡೆ ತಾಲೂಕಿನಲ್ಲಿ ಟ್ರೀ ಪಾರ್ಕ್‌ ನಿರ್ಮಾಣ ಮಾಡಬೇಕು. – ಬಾಲಾಜಿ, ಸ್ಥಳೀಯರು

 

– ನವೀನ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next