ಹೈದ್ರಾಬಾದ್: ತಂದೆ ತಾಯಿಯನ್ನು ಕಳೆದುಕೊಂಡಿದ್ದ ಏಡ್ಸ್ ಪೀಡಿತ ಬಾಲಕನೊಬ್ಬ ಚಿಕಿತ್ಸೆಗಾಗಿ ಒಂದು ಸರ್ಕಾರಿ ಆಸ್ಪತ್ರೆಯಿಂದ ಇನ್ನೊಂದು ಸರ್ಕಾರಿ ಆಸ್ಪತ್ರೆಗೆ ಅಲೆದ ಅಮಾನವೀಯ ಘಟನೆ ನಡೆದಿದೆ. ಈ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತೆಲಂಗಾಣ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ.
ವಯೋವೃದ್ಧ ಅಜ್ಜಿಯೊಂದಿಗೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಬಾಲಕನನ್ನು 24 ಗಂಟೆಗಳೊಳಗೆ ಪೂರ್ವಾಗ್ರಹ ಪೀಡಿತವಾಗಿ 4 ಆಸ್ಪತ್ರೆಗಳಿಗೆ ಅಲೆಯುವಂತೆ ಮಾಡಲಾಗಿದೆ ಎಂದು ಆಯೋಗ ದೂರಿದೆ.
ಕಲ್ಲೆದೆಯ ವರ್ತನೆ ತೋರಿದುದಕ್ಕಾಗಿ 6 ವಾರಗಳ ಒಳಗೆ ಉತ್ತರಿಸಬೇಕು ಎಂದು ಆಯೋಗ ತಾಕೀತು ಮಾಡಿದೆ. ಸದ್ಯ ಬಾಲಕ ನಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೊದಲು ಬಾಲಕ ತೆರಳಿದ ನ್ಯೂಫರ್ ಹಾಸ್ಪಿಟಲ್ ಈ ಬಗ್ಗೆ ಹೇಳಿಕೆ ನೀಡಿದ್ದು ನಾವು 12 ವರ್ಷಗಳ ಮೇಲ್ಪಟ್ಟವರಿಗೆ ಚಿಕಿತ್ಸೆ ನೀಡುವುದಿಲ್ಲ ಹೀಗಾಗಿ ಓಸ್ಮಾನಿಯ ಜನರಲ್ ಆಸ್ಪತ್ರೆಗೆ ತೆರಳಲು ಹೇಳಿದೆವು ಎಂದಿದೆ.
ಓಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲೂ ಚಿಕಿತ್ಸೆ ದೊರೆಯದಾಗ ಇನ್ನೆರಡು ಆಸ್ಪತ್ರೆಗೆ ಅಲೆದಾಡಬೇಕಾಗಿದೆ. ಒಸ್ಮಾನಿಯಾ ಅಸ್ಪತ್ರೆಯಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದ್ದು , ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ತೆರಳಲು ಹೇಳಿರುವುದಾಗಿ ವರದಿಯಾಗಿದೆ.